ವಂಚಕರನ್ನು ಶಿಕ್ಷಿಸಿ

ರಿಶಿಷ್ಟ ಜಾತಿ ರೈತರ ಅನುಕೂಲಕ್ಕೆಂದು ಅಂಬೇಡ್ಕರ್ ನಿಗಮದ ಮೂಲಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ, ಉಚಿತ ಕೊಳವೆಬಾವಿ ಕೊರೆಸಿಕೊಡುವ ಗಂಗಾ ಕಲ್ಯಾಣ ಯೋಜನೆಯೀಗ ತರವಲ್ಲದ ಕಾರಣಕ್ಕೆ ಸುದ್ದಿಯ ಮುನ್ನೆಲೆಗೆ ಬಂದಿದೆ. ಈ ಯೋಜನೆಯ ವಾಸ್ತವಿಕ ಫಲಾನುಭವಿಗಳಾಗಬೇಕಿದ್ದ ಪರಿಶಿಷ್ಟ ಜಾತಿಯ ರೈತರಿಗೆ ಪ್ರಯೋಜನ ದೊರಕಿಸಿಕೊಡುವ ಬದಲಿಗೆ, ಕೆಲವೊಂದು ಅಧಿಕಾರಿಗಳು ಮತ್ತು ಕೊಳವೆಬಾವಿ ಕೊರೆಯುವ ಏಜೆನ್ಸಿದಾರರು ಅವರಿಂದಲೇ ಹಣಸುಲಿಗೆ ಮಾಡುತ್ತಿರುವುದು, ಸರ್ಕಾರದ ಅನುದಾನವನ್ನೂ ಪಡೆದು ವಂಚಿಸುತ್ತಿರುವುದು ಈಗ ಬಯಲಾಗಿರುವ ಗುಟ್ಟು.

ನಮ್ಮಲ್ಲಿ ಜನಕಲ್ಯಾಣದ, ವಿಶೇಷವಾಗಿ ಕೃಷಿಕರು ಮತ್ತು ಕೃಷಿವಲಯದ ಹಿತಾಸಕ್ತಿಗಳನ್ನು ಕಾಯುವ ಯೋಜನೆಗಳಿಗೇನೂ ಕಮ್ಮಿಯಿಲ್ಲ. ಘೋಷಣೆಯ ಹಂತದಲ್ಲಿ ಚಿತ್ತಾಕರ್ಷಕವಾಗಿರುವ ಈ ಯೋಜನೆಗಳು ಫಲಕಾರಿತ್ವದ ವಿಷಯದಲ್ಲಿ ಛಾಪು ಮೂಡಿಸಿವೆಯೇ ಎಂದು ಪ್ರಶ್ನಿಸಿಕೊಂಡಾಗ ಬಹುತೇಕ ಸಂದರ್ಭಗಳಲ್ಲಿ ದೊರಕುವ ಉತ್ತರ ನಿರಾಶಾದಾಯಕವಾಗೇ ಇರುತ್ತವೆ ಎಂಬುದು ಅಪ್ರಿಯ ಸತ್ಯ. ಇದಕ್ಕಿರುವ ಕಾರಣಗಳೇನು ಎಂದು ಹುಡುಕುತ್ತ ಹೋದಾಗ, ರೂಪರೇಷೆಯ ಹಂತದಲ್ಲಿ ಸಮರ್ಥವಾಗೇ ಕಾಣಬರುವ ಯಾವುದೇ ಯೋಜನೆ, ಅನುಷ್ಠಾನದ ಹಂತದಲ್ಲಿ ಕಣ್ಮರೆಯಾಗುವ ದಕ್ಷತೆಯ ಕಾರಣದಿಂದಾಗಿ ಅಥವಾ ಅಂತಿಮ ಫಲಾನುಭವಿಗಳವರೆಗೆ ಅದನ್ನು ತಲುಪಿಸಬೇಕಾದ ವಿವಿಧ ಸ್ತರದ ಅಧಿಕಾರಶಾಹಿಯಲ್ಲಿ ಬೇರುಬಿಟ್ಟಿರುವ ನಿರ್ಲಕ್ಷ್ಯ, ವಿಳಂಬನೀತಿ ಹಾಗೂ ಕೆಲವೊಬ್ಬರ ಕರ್ತವ್ಯಲೋಪದ ಕಾರಣದಿಂದಾಗಿ ಮಹತ್ವವನ್ನೇ ಕಳೆದುಕೊಂಡುಬಿಟ್ಟಿರುತ್ತದೆ. ಜತೆಗೆ, ಸಂಬಂಧಿತ ಫಲಾನುಭವಿಗಳಿಗೆ ಒದಗಿಸಬೇಕಾದ ಮಾಹಿತಿಯ ಕೊರತೆಯೂ ಇದಕ್ಕೆ ತನ್ನದೇ ಆದ ಕೊಡುಗೆ ನೀಡುತ್ತದೆ ಎಂಬುದನ್ನು ಅಲ್ಲಗಳೆಯಲಾಗದು.

ಈ ಅಭಿಪ್ರಾಯಕ್ಕೆ ಕಾರಣಗಳಿವೆ. ಸದರಿ ಗಂಗಾ ಕಲ್ಯಾಣ ಯೋಜನೆಯನ್ನೇ ಪರಿಗಣಿಸುವುದಾದರೆ, ಪರಿಶಿಷ್ಟ ಜಾತಿಗೆ ಸೇರಿದ ಫಲಾನುಭವಿ ರೈತರು ಒಂದು ಸಾವಿರ ಅಡಿಯವರೆಗೆ ಕೊಳವೆಬಾವಿ ಕೊರೆಸುವುದಕ್ಕೆ ಸರ್ಕಾರ ಅನುಮತಿಸಿದೆ. ಆದರೆ, ಸದರಿ ಕಾರ್ಯಕ್ಕೆ ನಿಯೋಜಿಸಲ್ಪಟ್ಟ ಏಜೆನ್ಸಿದಾರರು 300ರಿಂದ 400 ಅಡಿಯವರೆಗೆ ಕೊರೆದ ತರುವಾಯ, ‘ಇಷ್ಟರವರೆಗೆ ಕೊರೆಯುವುದಕ್ಕೆ ಮಾತ್ರವೇ ಸರ್ಕಾರ ಅನುಮತಿಸಿದೆ; ಕೆಲಸ ಮುಂದುವರಿಯಬೇಕೆಂದರೆ ನೀವೇ ಹಣವನ್ನು ಪಾವತಿಸಬೇಕಾಗುತ್ತದೆ’ ಎಂದು ವರಾತ ಹಚ್ಚಿಕೊಳ್ಳುವುದರಿಂದ ರೈತರು ಅನ್ಯಮಾರ್ಗವಿಲ್ಲದೆ ಹಣಹೊಂಚಬೇಕಾದ ನಿದರ್ಶನಗಳು ಹೆಚ್ಚುತ್ತಿವೆ. ಫಲಾನುಭವಿಗಳಿಗೆ ಸಮರ್ಪಕ ಮಾಹಿತಿ ದೊರಕುವಂತಾದಲ್ಲಿ ಇಂಥ ಅಪಸವ್ಯಗಳನ್ನು ತಪ್ಪಿಸಬಹುದು. ಹೀಗೆ ಯೋಜನೆಯ ಪರಿಪೂರ್ಣ ಮಾಹಿತಿ ಇಲ್ಲದಿರುವ ಪರಿಸ್ಥಿತಿಯನ್ನೇ ಅಸ್ತ್ರವಾಗಿ ಬಳಸಿಕೊಳ್ಳುವವರು, ತಾವು ದುಡ್ಡುಮಾಡಿಕೊಳ್ಳುತ್ತಾರೆಯೇ ವಿನಾ, ಉದ್ದೇಶಿತ ಫಲಾನುಭವಿಗಳಿಗೆ ಕವಡೆಕಾಸಿನ ಪ್ರಯೋಜನ ದಕ್ಕುವುದಿಲ್ಲ, ಸರ್ಕಾರಿ ಬೊಕ್ಕಸಕ್ಕಾಗುವ ಹೊರೆ ತಪು್ಪವುದಿಲ್ಲ. ಇಂಥ ನಿದರ್ಶನಗಳಿಂದ ಜನಕಲ್ಯಾಣದ ಮೂಲ ಆಶಯಕ್ಕೇ ಕೊಡಲಿಪೆಟ್ಟು ಬೀಳುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ಗಂಗಾ ಕಲ್ಯಾಣ ಯೋಜನೆಯಲ್ಲಿ ಬಟಾಬಯಲಾಗಿರುವ ಈ ‘ಗೋಲ್​ವಾಲ್ ಪರ್ವ’ ಕೇವಲ ಒಂದು ಉದಾಹರಣೆಯಷ್ಟೇ. ಭೂತಕನ್ನಡಿಯಿಟ್ಟು ಹುಡುಕುತ್ತ ಹೋದಲ್ಲಿ ಮಿಕ್ಕ ಯೋಜನೆಗಳಲ್ಲೂ ಇಂಥ ಕಳಂಕಿತ ಕೊಂಡಿಗಳು ಹೇರಳ ಸಿಕ್ಕಾವು. ಆದ್ದರಿಂದ, ಯೋಜನೆಯ ಸಾರ್ಥಕತೆಯನ್ನು ಕಾಗದದಲ್ಲಷ್ಟೇ ಕಂಡು, ಹುಸಿ ವರದಿಗಳ ಆಧಾರದ ಮೇಲೆ ಬೆನ್ನುತಟ್ಟಿಕೊಳ್ಳುವ ಬದಲು, ಯಾವುದೇ ಯೋಜನೆಯ ಅನುಷ್ಠಾನದ ವಿವಿಧ ಹಂತಗಳಲ್ಲಿ ಹಾಸುಹೊಕ್ಕಾಗಿರುವ ಇಂಥ ಅಕ್ರಮ ಪರಿಪಾಠಗಳಿಗೆ ಆಳುಗರು ಚಾಟಿಯೇಟು ಬೀಸಬೇಕಿದೆ. ಇಲ್ಲವಾದಲ್ಲಿ ಜನರು ವ್ಯವಸ್ಥೆಯಲ್ಲಿಟ್ಟಿರುವ ವಿಶ್ವಾಸಕ್ಕೆ ಸಂಚಕಾರ ಒದಗುವುದು ಖರೆ.