Tuesday, 20th November 2018  

Vijayavani

ಕಬ್ಬು ಬೆಳಗಾರರ ಜತೆ ಸಿಎಂ ಸಭೆ - ವಿಧಾನಸೌಧಕ್ಕೆ ಆಗಮಿಸಿದ ರೈತ ಮುಖಂಡರು - ಕಬ್ಬಿನ ಬಾಕಿ ಹಣ ಕೊಡಿಸ್ತಾರಾ ಎಚ್‌ಡಿಕೆ?        ಉ-ಕ ರೈತರ ಹೋರಾಟಕ್ಕೆ ಜಾತಿ ಲೇಪನ - ನಾಲಾಯಕ್ ಅನ್ನೋದು ಕೆಟ್ಟ ಪದ ಅಲ್ಲ - ಸಿಎಂ ವಿರುದ್ಧ ಮತ್ತೆ ಗುಡುಗಿದ ಯಡಿಯೂರಪ್ಪ        ಸಿಂಪಲ್ ಮ್ಯಾರೇಜ್ ಆಗೋರಿಗೆ ಶಾಕ್‌- ಮುಜರಾಯಿ ದೇವಸ್ಥಾನದಲ್ಲಿ ಮದುವೆಗೆ ಬ್ರೇಕ್‌ - ಅರ್ಚಕರ ಮನವಿಗೆ ಇಲಾಖೆ ನಿರ್ಧಾರ        ದಿಗ್ಗಜರಿಂದಲೇ ಬಿಬಿಎಂಪಿಗೆ ಬಾಕಿ - ಜಾರ್ಜ್‌, ಹ್ಯಾರೀಸ್‌, ಕುಪೇಂದ್ರರೆಡ್ಡಿ ಕಟ್ಟಿಲ್ಲ ಟ್ಯಾಕ್ಸ್‌ - ಪಾಲಿಕೆ ದಿವಾಳಿಗೆ ಕಾರಣರಾದ್ರಾ ನಾಯಕರು        ಛತ್ತಿಸ್‌ಗಡದಲ್ಲಿ ಎರಡನೇ ಹಂತದ ಮತದಾನ -72 ವಿಧಾನಸಭಾ ಕ್ಷೇತ್ರಗಳಲ್ಲಿ ವೋಟಿಂಗ್‌ - ಮಧ್ಯ ಪ್ರದೇಶದಲ್ಲಿ ಪ್ರಧಾನಿ ರ‍್ಯಾಲಿ        ಬೆಂಗಳೂರಿಗೆ ಬಂದಿಳಿದ ನವಜೋಡಿ - ಮುಂಬೈನಿಂದ ಸಿಲಿಕಾನ್‌ ಸಿಟಿಗೆ ರಣವೀರ್‌, ದೀಪಿಕಾ - ನಾಳೆ ಲೀಲಾ ಪ್ಯಾಲೇಸ್‌ನಲ್ಲಿ ರಿಸೆಪ್ಷನ್       
Breaking News

ಮೋಸದ ಕರಾಳ ಜಾಲ

Saturday, 20.10.2018, 3:03 AM       No Comments

ಳ್ಳಕಾಕರು, ಖದೀಮರು, ಸೈಬರ್ ವಂಚಕರಿಂದ ಮೋಸಹೋಗದಂತೆ ಸಾರ್ವಜನಿಕರನ್ನು ಎಚ್ಚರಿಸಬೇಕಾದವರೇ ಅಂಥವರಿಂದ ಟೋಪಿ ಹಾಕಿಸಿಕೊಂಡಿರುವುದು ವಿಷಾದನೀಯ. ಬ್ಯಾಂಕ್ ಅಧಿಕಾರಿಯ ಸೋಗಿನಲ್ಲಿ ಪೊಲೀಸ್ ಉನ್ನತಾಧಿಕಾರಿಯೊಬ್ಬರಿಗೆ ಕರೆಮಾಡಿದ ಸೈಬರ್ ಕನ್ನಗಳ್ಳರು ಅವರ ಡೆಬಿಟ್ ಕಾರ್ಡ್​ನ ಮಹತ್ವದ ಮಾಹಿತಿ ಪಡೆದು ಬ್ಯಾಂಕ್ ಖಾತೆಗೆ ಕನ್ನಹಾಕಿ 2 ಲಕ್ಷ ರೂ. ಲಪಟಾಯಿಸಿರುವುದು, ಇಂಥವರ ಮೋಸದ ಜಾಲ ಅದೆಷ್ಟು ಕ್ಷಿಪ್ರವಾಗಿ ಮತ್ತು ವ್ಯವಸ್ಥಿತವಾಗಿ ಕುಕೃತ್ಯ ಎಸಗುತ್ತದೆ ಎಂಬುದಕ್ಕೆ ದ್ಯೋತಕ. ದಸರಾ ಉತ್ಸವದ ತುರ್ತಕೆಲಸದಲ್ಲಿ ತೊಡಗಿಸಿಕೊಂಡಿದ್ದಾಗ ಬ್ಯಾಂಕ್ ಸಿಬ್ಬಂದಿ ಎಂದು ಹೇಳಿಕೊಂಡು ಹೀಗೆ ಕರೆಮಾಡಿದವರು ‘ಕಾರ್ಡ್ ಅವಧಿ ಮುಗಿಯುತ್ತಿದೆ’ ಎಂದು ಹೇಳಿದ್ದಕ್ಕೆ ಅದರ ಮಹತ್ವದ ಮಾಹಿತಿ ಹಂಚಿಕೊಂಡ ಸದರಿ ಉನ್ನತಾಧಿಕಾರಿಗೆ ತಮ್ಮ ನಿರ್ಲಕ್ಷ್ಯದ ಅರಿವಾಗುವಷ್ಟರಲ್ಲಿ ಅವರ ಬ್ಯಾಂಕ್ ಖಾತೆಗೆ ಕನ್ನ ಬಿದ್ದಿತ್ತು ಎಂಬುದು ಲಭ್ಯಮಾಹಿತಿ. ಡೆಬಿಟ್/ಕ್ರೆಡಿಟ್ ಕಾರ್ಡಗಳ ಮಹತ್ವದ ಮಾಹಿತಿ ಒದಗಿಸುವಂತೆ ಯಾವ ಗ್ರಾಹಕರಿಗೂ ತಮ್ಮ ಸಿಬ್ಬಂದಿ ಹೀಗೆ ಕರೆಮಾಡುವುದಿಲ್ಲ ಎಂಬುದಾಗಿ ಬಹುತೇಕ ಎಲ್ಲ ಬ್ಯಾಂಕುಗಳು ವಿವಿಧ ಮಾಧ್ಯಮಗಳ ಮೂಲಕ ಅರಿವು ತುಂಬುತ್ತಿದ್ದರೂ ಕೆಲವರು ಹೀಗೆ ಎಡವುತ್ತಿರುವುದು ವಿಪರ್ಯಾಸ.

ವಾಣಿಜ್ಯಿಕ ಮಹತ್ವವಿರುವ ಮರಗಳ ನೆಡುತೋಪು ಬೆಳೆಸುವ ಅಥವಾ ಕುರಿ ಸಾಕಣೆಯ ಯೋಜನೆಯಲ್ಲಿ ಹಣಹೂಡಿದರೆ ಹೇರಳ ಲಾಭ ಮಡಿಲು ತುಂಬುತ್ತದೆ ಎಂದು ಪ್ರಲೋಭನೆ ಒಡ್ಡಿ ಶ್ರೀಸಾಮಾನ್ಯರನ್ನು ಮರುಳುಮಾಡುತ್ತಿದ್ದ ಕಾಲವೊಂದಿತ್ತು. ನಂತರದಲ್ಲಿ, ಹಣ ದ್ವಿಗುಣಗೊಳಿಸುವ ಇಲ್ಲವೇ ಕಡಿಮೆ ಅವಧಿಯಲ್ಲಿ ಹೆಚ್ಚಿನ ಬಡ್ಡಿ ದೊರಕಿಸಿಕೊಡುವ ಠೇವಣಿ ಯೋಜನೆಯ ಜಾಲ, ರೈಸ್​ಪುಲ್ಲಿಂಗ್ ದಂಧೆ ಈ ಯಾದಿಗೆ ಸೇರಿಕೊಂಡವು. ಈಗ ವಿವಿಧ ತೆರನಾದ ಆರ್ಥಿಕ ವ್ಯವಹಾರಗಳಿಗೆ ಡಿಜಿಟಲ್ ಸ್ವರೂಪ ದಕ್ಕಿರುವುದರಿಂದ, ವಂಚಕರೂ ‘ಸಾಂಪ್ರದಾಯಿಕ’ ಮಾರ್ಗ ಬಿಟ್ಟು ಹೈಟೆಕ್ ವಿಧಾನಕ್ಕೆ ಒಗ್ಗಿಕೊಂಡಿದ್ದಾರೆ. ಇಂಥ ಎಲ್ಲ ಹೂಟಗಳ ಸೃಷ್ಟಿಕರ್ತರೂ ನೇರವಾಗಿ ಜನಸಂಪರ್ಕದಲ್ಲಿರದೆ ಅಜ್ಞಾತ ಸ್ಥಳದಲ್ಲೆಲ್ಲೋ ಕುಳಿತು ಕಾರ್ಯಾಚರಿಸುತ್ತಾರೆ ಮತ್ತು ಯಾವುದೋ ಕಂಪ್ಯೂಟರ್/ಅಂತರ್ಜಾಲ ವ್ಯವಸ್ಥೆಯ ಮೂಲಕ ಕ್ಷಣಾರ್ಧದಲ್ಲಿ ಬ್ಯಾಂಕ್ ಖಾತೆದಾರರ ಹಣ ಎಗರಿಸುತ್ತಾರೆ. ಈ ನಿಟ್ಟಿನಲ್ಲಿ ಪೊಲೀಸರು ಮತ್ತಷ್ಟು ಜನಜಾಗೃತಿ ಮೂಡಿಸುವ ಅಗತ್ಯವಿದೆ. ಕಾರಣ, ಡಿಜಿಟಲೀಕರಣಕ್ಕೆ ಮಹತ್ವ ದಕ್ಕಿರುವುದರಿಂದ ಸಹಜವಾಗೇ ಆನ್​ಲೈನ್ ವ್ಯವಹಾರಗಳೂ ಏರುಗತಿ ಕಾಯ್ದುಕೊಂಡಿವೆ. ಜತೆಗೆ, ನಗದು ವ್ಯವಹಾರಕ್ಕೆ 2 ಲಕ್ಷ ರೂ.ಗಳ ಮಿತಿ ವಿಧಿಸಿರುವುದರಿಂದಾಗಿ (ಮುಂಬರುವ ದಿನಗಳಲ್ಲಿ ಇದು ಸಾವಿರಗಳ ಮಟ್ಟಕ್ಕೆ ಇಳಿದರೂ ಅಚ್ಚರಿಯಿಲ್ಲ!) ಡಿಜಿಟಲ್ ವ್ಯವಹಾರ ಅನಿವಾರ್ಯವಾಗಲಿದೆ. ಇಂಥ ಸಂದರ್ಭದಲ್ಲಿ ಗ್ರಾಹಕರು ವೈಯಕ್ತಿಕವಾಗಿ ಮತ್ತು ಬ್ಯಾಂಕುಗಳು ಸಮಷ್ಟಿಯಾಗಿ ಆನ್​ಲೈನ್/ಡಿಜಿಟಲ್ ವ್ಯವಹಾರ ಸಂಬಂಧಿತ ಭದ್ರತಾ ಉಪಕ್ರಮಗಳನ್ನು ಮತ್ತಷ್ಟು ಬಿಗಿಯಾಗಿಸದಿದ್ದಲ್ಲಿ ಅಮಾಯಕರು ವಂಚನೆಯ ಬಲಿಪಶುವಾಗುವುದನ್ನು ತಪ್ಪಿಸಲಾಗದಂಥ ಪರಿಸ್ಥಿತಿ ರೂಪುಗೊಳ್ಳುತ್ತದೆ. ಸೈಬರ್ ವಂಚಕರು ಡೆಬಿಟ್/ಕ್ರೆಡಿಟ್ ಕಾರ್ಡಗಳೇ ಮೊದಲಾದ ಡಿಜಿಟಲ್ ವ್ಯವಹಾರ ಸ್ವರೂಪಗಳಲ್ಲಿ ಅಮಾಯಕರಿಗೆ ಪ್ರತಿ ಗಂಟೆಗೆ 2 ಲಕ್ಷ ರೂ.ನಷ್ಟು ಟೋಪಿ ಹಾಕುತ್ತಿದ್ದಾರೆ ಮತ್ತು ಈ ಪರಿಪಾಠದಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಆದ್ದರಿಂದ, ಸೈಬರ್ ವಂಚನೆಯನ್ನು ಕ್ಷಿಪ್ರವಾಗಿ ಪತ್ತೆಮಾಡಿ, ದುರುಳರ ಹೆಡೆಮುರಿ ಕಟ್ಟುವಂತಾಗುವಲ್ಲಿ ಸೈಬರ್ ಪೊಲೀಸರ ಹೆಚ್ಚಳ ಮತ್ತು ಅವರಿಗೆ ತಾಂತ್ರಿಕ ತರಬೇತಿ ನೀಡುವಿಕೆಯಂಥ, ಜನಜಾಗೃತಿಯ ಹೆಚ್ಚಳದಂಥ ಉಪಕ್ರಮಗಳಿಗೆ ಮುಂದಾಗಬೇಕಿದೆ.

Leave a Reply

Your email address will not be published. Required fields are marked *

Back To Top