Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಸಕಾರಾತ್ಮಕ ಬೆಳವಣಿಗೆ

Wednesday, 17.10.2018, 3:03 AM       No Comments

ದೀರ್ಘಕಾಲೀನ ನ್ಯಾಯಾಂಗ ಹೋರಾಟದ ಬಳಿಕವೂ ಕರ್ನಾಟಕದಲ್ಲಿ ಬಡ್ತಿ ಮೀಸಲು ವಿಚಾರ ರ್ತಾಕ ಅಂತ್ಯ ಕಾಣದೆ ಕಗ್ಗಂಟಾಗಿಯೇ ಉಳಿದಿದೆ. ಈ ಸಂಬಂಧ ಕಳೆದ 26 ವರ್ಷಗಳಿಂದ ವ್ಯಾಜ್ಯದಲ್ಲಿ ತೊಡಗಿದ್ದವರು ಹಣ, ಸಮಯ ಖರ್ಚು ಮಾಡಿ ಬಸವಳಿದಿದ್ದಾರೆ. ನ್ಯಾಯಾಲಯದಲ್ಲಿ ಒಮ್ಮೆ ಎಸ್ಸಿ-ಎಸ್ಟಿ ನೌಕರರಿಗೆ, ಮತ್ತೊಮ್ಮೆ ಸಾಮಾನ್ಯ ವರ್ಗದವರಿಗೆ ಅನುಕೂಲವಾಗುತ್ತಿದೆ. ಈಗಲೂ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿದೆ. ಹೀಗಾಗಿ, ಈ ಇಡೀ ವಿವಾದಕ್ಕೆ ನ್ಯಾಯಾಲಯದ ಹೊರಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಎರಡೂ ಕಡೆಯವರು ಚಿಂತನೆ ನಡೆಸಿರುವುದು ಮಹತ್ವದ ಮತ್ತು ಸಕಾರಾತ್ಮಕ ಬೆಳವಣಿಗೆ. ನ್ಯಾಯಾಲಯದಲ್ಲಿ ಪರಸ್ಪರ ಹೋರಾಟ ನಡೆಸುತ್ತಿರುವ ಸರ್ಕಾರಿ ನೌಕರ ಸಂಘಟನೆಗಳ ಪದಾಧಿಕಾರಿಗಳೇ ಕಳೆದೊಂದು ವಾರದಲ್ಲಿ 2 ಬಾರಿ ಅನೌಪಚಾರಿಕ ಸಭೆ ನಡೆಸಿದ್ದು, ಸಂಘರ್ಷವನ್ನು ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳುವ ಸಂಬಂಧ ಚರ್ಚೆ ನಡೆಸಿದ್ದಾರೆ.

ಸರ್ಕಾರಿ ನೌಕರರಿಗೆ ಬಡ್ತಿ ನೀಡುವಾಗ ಎಸ್ಸಿ, ಎಸ್ಟಿ ನೌಕರರಿಗೆ ಮೀಸಲು ನೀಡಲಾಗುತ್ತಿದೆ. ಹೀಗೆ ಕೆಲವು ಇಲಾಖೆಗಳಲ್ಲಿ ಮುಂಬಡ್ತಿ ಪಡೆದವರ ಪ್ರಮಾಣ ಶೇ.18ಕ್ಕಿಂತ ಹೆಚ್ಚಿರುವುದೇ ವಿವಾದದ ಮೂಲ ಕಾರಣ. 2017ರ ಫೆಬ್ರವರಿಯಲ್ಲಿ ನ್ಯಾಯಾಲಯ ಮುಂಬಡ್ತಿಗೊಂಡವರನ್ನು ಹಿಂಬಡ್ತಿಗೊಳಿಸಿ ಹೊಸದಾಗಿ ಜ್ಯೇಷ್ಠತಾ ಪಟ್ಟಿ ಮಾಡಿ ಆ ಮೂಲಕ ಬಡ್ತಿ ಮಾಡುವಂತೆ ಸೂಚಿಸಿತ್ತು. ಹಿಂಬಡ್ತಿಗೊಂಡವರನ್ನು ರಕ್ಷಿಸಲು ಸರ್ಕಾರ ಕಾನೂನು ರೂಪಿಸಿದ್ದು, ಇದಕ್ಕೆ ರಾಷ್ಟ್ರಪತಿಗಳ ಅಂಗೀಕಾರ ಕೂಡ ದೊರೆತಿದೆ. ಈಗ ಈ ಕಾಯ್ದೆ ಅನುಷ್ಠಾನಕ್ಕೆ ಸರ್ಕಾರ ನ್ಯಾಯಾಲಯದ ಅನುಮತಿಗಾಗಿ ಕಾಯುತ್ತಿದೆ.

ನಿಜಾರ್ಥದಲ್ಲಿ ಇಂಥ ವಿವಾದಗಳನ್ನು ಪರಸ್ಪರ ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳುವುದು ಸೂಕ್ತ. ತಡವಾಗಿಯಾದರೂ ಈ ನಿಟ್ಟಿನಲ್ಲಿ ಸರ್ಕಾರಿ ನೌಕರ ಸಂಘಟನೆಗಳು ಒಲವು

ಮೂಡಿಸಿಕೊಂಡಿದ್ದು ಸಮಾಧಾನಕರ. ಸರ್ಕಾರಿ ನೌಕರರು ವ್ಯವಸ್ಥೆಯ ಬಹುದೊಡ್ಡ ಮತ್ತು ಅವಿಭಾಜ್ಯ ಭಾಗ. ಒಟ್ಟಾಗಿ ಕಾರ್ಯನಿರ್ವಹಿಸಿ ಕಾರ್ಯದಕ್ಷತೆ ಪ್ರದರ್ಶಿಸುವ ಇಚ್ಛಾಶಕ್ತಿಯನ್ನು ಸರ್ಕಾರಿ

ನೌಕರರು ಮತ್ತು ಸಂಬಂಧಪಟ್ಟ ಸಂಘಟನೆಗಳು ತೋರಬೇಕು. ಇದರಿಂದ ಸಾರ್ವಜನಿಕರಿಗೂ ಸೂಕ್ತ ಸೇವೆ ಲಭಿಸಲು ಅನುವಾಗುತ್ತದೆ. ಅದು ಸವಲತ್ತು ಇತ್ಯಾದಿ ಕಾರಣಕ್ಕಾಗಿ ನೌಕರರ ಸಂಘಟನೆಗಳ ನಡುವೆಯೇ ಭಿನ್ನಾಭಿಪ್ರಾಯ ಏರ್ಪಟ್ಟರೆ ಅದರಿಂದ ವ್ಯವಸ್ಥೆಗೆ ಹಾನಿಯಾಗುತ್ತದೆ. ಲಕ್ಷಾಂತರ ಸರ್ಕಾರಿ ನೌಕರರು ಇರುವಾಗ ಕೆಲವೊಮ್ಮೆ ಭಿನ್ನಾಭಿಪ್ರಾಯಗಳು ಬರುವುದು ಸಹಜ. ಆದರೆ, ಅದು ಕೆಲಸದ ಮೇಲಾಗಲಿ, ಆಡಳಿತದ ಮೇಲಾಗಲಿ ಪರಿಣಾಮ ಬೀರಬಾರದು.

ಪ್ರಸಕ್ತ ನೌಕರರ ಸಂಘಟನೆಗಳು ಶೇಕಡ 18-ಶೇ.82 ಸೂತ್ರ ಜಾರಿಗೆ ತರುವ ಸಂಬಂಧ ಮಾತುಕತೆ ಕೈಗೊಳ್ಳುವ ಸಾಧ್ಯತೆ ಇದೆ. ಈ ಸೂತ್ರವನ್ನು ಎರಡೂ ಸಂಘಟನೆಗಳು ಒಪ್ಪಿಕೊಂಡು ಬಿಟ್ಟರೆ ಸಮಸ್ಯೆಗೆ ಪರಿಹಾರ ದೊರೆಯಲಿದೆ. ನೌಕರರು ಯಾರೇ ಇರಲಿ, ಎಲ್ಲರಿಗೂ ಅವರವರಿಗೆ ಸಿಗಬೇಕಾದ ಸವಲತ್ತುಗಳು ಸಿಗುವಂತಾಗಬೇಕು. ಹೀಗಾಗಿ ಪ್ರಕರಣವನ್ನು ಮತ್ತಷ್ಟು ಎಳೆದೊಯ್ಯದೆ, ರ್ತಾಕ ಅಂತ್ಯ ಕಾಣುವಂತಾಗಲಿ ಎಂಬ ಆಶಯ ಹೋರಾಟಗಾರರಲ್ಲೇ ಮೂಡಿರುವುದರಿಂದ ಸರ್ಕಾರ ಕೂಡ ಅಹಿಂಸಾ(ಸಾಮಾನ್ಯ ವರ್ಗ) ಮತ್ತು ಎಸ್ಸಿ-ಎಸ್ಟಿ ನೌಕರ ಸಂಘಟನೆಯವರನ್ನು ಕರೆದು ಮಾತುಕತೆ ನಡೆಸಿ, ಒಮ್ಮತಕ್ಕೆ ತರುವಂಥ ಪ್ರಯತ್ನ ಮಾಡಬಹುದು. ಒಟ್ಟಾರೆ, ಈ ಹಳೇ ವಿವಾದ ಸುಗಮವಾಗಿ ಇತ್ಯರ್ಥಗೊಂಡಲ್ಲಿ ಸರ್ಕಾರಿ ನೌಕರರು ನೆಮ್ಮದಿಯ ನಿಟ್ಟುಸಿರು ಬಿಡಬಹುದು.

Leave a Reply

Your email address will not be published. Required fields are marked *

Back To Top