ಪ್ರಧಾನಿ ನರೇಂದ್ರ ಮೋದಿ ಅವರು ಜನಸಮರ್ಥ ಪೋರ್ಟಲ್ ಅನ್ನು ಸೋಮವಾರ ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಸರ್ಕಾರದ ವಿವಿಧ ಸಾಲ ಯೋಜನೆಗಳನ್ನು ಒಂದೇ ವೇದಿಕೆ ಮೂಲಕ ಸಂರ್ಪಸುವ ಆನ್ಲೈನ್ ಪೋರ್ಟಲ್ ಇದಾಗಿದೆ. ವಿವಿಧ ಕ್ಷೇತ್ರಗಳ ಸಮಗ್ರ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಡಿಜಿಟಲ್ ಪ್ರಕ್ರಿಯೆಗಳ ಮೂಲಕ ಫಲಾನುಭವಿಗಳಿಗೆ ಸರ್ಕಾರಿ ಯೋಜನೆಗಳ ಬಗೆಗೆ ಮಾರ್ಗದರ್ಶನ ಮಾಡುವುದು, ಅದರ ಲಾಭ ಪಡೆದುಕೊಳ್ಳಲು ನೆರವಾಗುವುದು ಪೋರ್ಟಲ್ ರಚನೆಯ ಪ್ರಮುಖ ಉದ್ದೇಶವಾಗಿದೆ. ‘ವಿದ್ಯಾರ್ಥಿಗಳು, ಉದ್ಯಮಿಗಳು, ರೈತರ ಜೀವನವನ್ನು ಜನಸಮರ್ಥ ಪೋರ್ಟಲ್ ಸುಲಭಗೊಳಿಸುತ್ತದೆ. ಯಾವ ಸರ್ಕಾರಿ ಯೋಜನೆಗಳು ತಮಗೆ ಹೆಚ್ಚು ಪ್ರಯೋಜನ ನೀಡುತ್ತವೆ ಮತ್ತು ಅದನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಲು ಅನುವಾಗುತ್ತದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಾಗರಿಕರ ಅನುಕೂಲಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸುತ್ತವೆ. ಪ್ರತಿ ಬಾರಿ ಬಜೆಟ್ ಮಂಡಿಸಿದಾಗ, ಹೊಸ ಹೊಸ ಯೋಜನೆಗಳ ಸೇರ್ಪಡೆ ಆಗುತ್ತಲೇ ಇರುತ್ತವೆ. ಆದರೆ, ಅನೇಕ ಜನರಿಗೆ ಈ ಯೋಜನೆಗಳ ಕುರಿತು ಸೂಕ್ತ ಮಾಹಿತಿ ಇರುವುದಿಲ್ಲ. ಇನ್ನು, ತಮಗೆ ಸೂಕ್ತವಾದ ಯೋಜನೆಗಳು ಯಾವುದು? ಇವುಗಳ ಪ್ರಯೋಜನ ಪಡೆಯುವುದು ಹೇಗೆ? ಎಂಬ ಸಂಗತಿಗಳನ್ನು ಅರಿಯಲು ಜನಸಾಮಾನ್ಯರು ಹರಸಾಹಸಪಡುತ್ತಲೇ ಇರುತ್ತಾರೆ.
ಈ ಹಿನ್ನೆಲೆಯಲ್ಲಿ, ಸಾಲ ಸಂಬಂಧಿ ಯೋಜನೆಗಳ ಸಮಗ್ರ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಒದಗಿಸಿದ್ದಲ್ಲದೆ, ಸಾಲ ಮಂಜೂರಾತಿ ಪ್ರಕ್ರಿಯೆಗೆ ಅವಕಾಶ ಕಲ್ಪಿಸುತ್ತಿರುವುದು ಗಮನಾರ್ಹ. ಕರ್ನಾಟಕ ಸರ್ಕಾರ ಕೂಡ ಯೋಜನೆಗಳ ಪ್ರಯೋಜನವನ್ನು ಜನರಿಗೆ ತಲುಪಿಸಲು ಡಿಜಿಟಲ್ ವೇದಿಕೆಯನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಿದೆ. ಆನ್ಲೈನ್ ಮೂಲಕ ಭೂ ಕಂದಾಯ ದಾಖಲೆ ಹಾಗೂ ಸೇವೆ ಒದಗಿಸುವಲ್ಲಿ ಕರ್ನಾಟಕ ದೇಶದಲ್ಲೇ ಮುಂಚೂಣಿ ಸ್ಥಾನದಲ್ಲಿದೆ. ಭೂಮಿ ಪೋರ್ಟಲ್ ಮೂಲಕ ಕಂದಾಯ ದಾಖಲೆಗಳನ್ನು ತ್ವರಿತಗತಿಯಲ್ಲಿ ಒದಗಿಸುವ ಪ್ರಕ್ರಿಯೆಗೆ ಹಲವಾರು ವರ್ಷಗಳ ಹಿಂದೆಯೇ ಚಾಲನೆ ನೀಡಲಾಗಿದೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ, ಪ್ರಮುಖ ಭೂ ಕಂದಾಯ ದಾಖಲೆಗಳನ್ನು ರೈತರ ಮನೆಬಾಗಿಲಿಗೇ ಪೂರೈಸುವ ಯೋಜನೆಯನ್ನು ತಂದಿದೆ. ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 58 ರೀತಿಯ ಪ್ರಮಾಣಪತ್ರಗಳನ್ನು ಮನೆಬಾಗಿಲಲ್ಲೇ ಒದಗಿಸುವ ಪ್ರಾಯೋಗಿಕ ಯೋಜನೆಯನ್ನೂ ರಾಜ್ಯ ಸರ್ಕಾರ ಜಾರಿಗೊಳಿಸಿದೆ.
ಆದರೆ, ಸರ್ಕಾರಿ ಯೋಜನೆಗಳ ನಿಜವಾದ ಫಲ ಜನಸಾಮಾನ್ಯರಿಗೆ ತಲುಪಿಬಿಡುತ್ತದೆಯೇ? ಎಂಬುದು ಮಾತ್ರ ಪ್ರಶ್ನಾರ್ಹ. ಸರ್ಕಾರಗಳು ಪ್ರತಿ ವರ್ಷವೂ ಸಾಕಷ್ಟು ಯೋಜನೆಗಳನ್ನು ಪ್ರಕಟಿಸುತ್ತಲೇ ಇರುತ್ತವೆ. ಚುನಾವಣೆ ವರ್ಷವಿದ್ದರಂತೂ ಮತದಾರರನ್ನು ಓಲೈಸುವ ಯೋಜನೆಗಳನ್ನು ಪುಂಖಾನುಪುಂಖವಾಗಿ ಘೋಷಿಸಲಾಗುತ್ತದೆ. ಯೋಜನೆಗಳ ಘೋಷಣೆಗೆ ತೋರುವ ಒಲವನ್ನು ಇವುಗಳ ಫಲವನ್ನು ಜನಸಾಮಾನ್ಯರಿಗೆ ಸೂಕ್ತ ರೀತಿಯಲ್ಲಿ ತಲುಪಿಸಲು ಮತ್ತು ಅಗತ್ಯ ಸಂಪನ್ಮೂಲ ಕಲ್ಪಿಸುವ ಬಗ್ಗೆ ತೋರಿಸುವುದಿಲ್ಲ. ಹೀಗಾಗಿ, ಅರ್ಹರು ಕೂಡ ಯೋಜನೆಗಳ ಲಾಭ ಪಡೆಯುವುದರಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಸುಸ್ಥಿರವಾದ ಯೋಜನೆಗಳನ್ನು ರೂಪಿಸಿ, ಡಿಜಿಟಲ್ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡು, ಬದ್ಧತೆಯಿಂದ ಜಾರಿಗೊಳಿಸಿದರೆ ಮಾತ್ರ ಜನರಿಗೆ ತಲುಪಿ ಉದ್ದೇಶ ಸಾರ್ಥಕವಾಗುತ್ತದೆ. ಅದಿಲ್ಲವಾದಲ್ಲಿ ಕಾಗದದ ಮೇಲೆ ಮಾತ್ರ ಇರುತ್ತದೆ.