ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭಾನುವಾರ ಮತ್ತೊಂದು ಗರಿಯನ್ನು ಮುಡಿಗೇರಿಸಿಕೊಂಡಿದೆ. ಶ್ರೀಹರಿಕೋಟಾದಲ್ಲಿನ ಉಡಾವಣಾ ಕೇಂದ್ರದಿಂದ ನಭಕ್ಕೆ ನೆಗೆದ ಉಡಾಹಕ 19 ಉಪಗ್ರಹಗಳನ್ನು ಒಡಲಲ್ಲಿ ಇರಿಸಿಕೊಂಡಿರುವುದು ವಿಶೇಷ. ಉಪಗ್ರಹದ ಪ್ಯಾನೆಲ್ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಚಿತ್ರವನ್ನು ಕೆತ್ತಲಾಗಿದೆ. ಸ್ವಾವಲಂಬಿ ಭಾರತ ಪರಿಕಲ್ಪನೆ ಹಾಗೂ ಬಾಹ್ಯಾಕಾಶ ರಂಗದಲ್ಲಿ ಖಾಸಗಿಯವರಿಗೂ ಅವಕಾಶ ನೀಡಿದ ಕಾರಣಕ್ಕಾಗಿ ಈ ಗೌರವ ನೀಡಲಾಗಿದೆ. ಜತೆಗೆ ಉಪಗ್ರಹದಲ್ಲಿ ಭಗವದ್ಗೀತೆಯನ್ನು ಎಸ್ಡಿ ಕಾರ್ಡ್ ರೂಪದಲ್ಲಿ ಇರಿಸಲಾಗಿದೆ ಎಂದು ಇವೆರಡನ್ನೂ ಸಿದ್ಧಪಡಿಸಿದ ಚೆನ್ನೈನ ಸ್ಪೇಸ್ ಕಿಡ್ಸ್ ಇಂಡಿಯಾ ಸಂಸ್ಥೆ ತಿಳಿಸಿದೆ. ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಿದ್ಧಪಡಿಸಿದ ಆರ್-ಸ್ಯಾಟ್ ಉಪಗ್ರಹ ಕೂಡ ಇದರಲ್ಲಿ ಸೇರಿದೆ. ಬ್ರೆಝಿಲ್ನ ಉಪಗ್ರಹವೂ ಈ ಗುಚ್ಛದಲ್ಲಿ ಸೇರಿಕೊಂಡಿದೆ. ಈ ವರ್ಷದಲ್ಲಿ ಇಸ್ರೋ ಉಡಾಯಿಸಿದ ಎರಡನೇ ಉಪಗ್ರಹ ಇದಾಗಿದ್ದು, ತನ್ನೊಂದಿಗೆ ಆಗಸದಷ್ಟು ಎತ್ತರದ ಭರವಸೆಯನ್ನೂ ಇದು ಒಯ್ದಿದೆ ಎನ್ನಬಹುದು. ಕೃಷಿ ಚಟುವಟಿಕೆ, ಅರಣ್ಯದ ಮೇಲೆ ನಿಗಾ ಮುಂತಾದ ಕಾರ್ಯಗಳಿಗೆ ಈ ಉಪಗ್ರಹ ನೆರವಾಗಲಿದೆ.
ಇಸ್ರೋ ಈಗ ತನ್ನ ಉಪಗ್ರಹಗಳನ್ನು ಮಾತ್ರ ಉಡಾಯಿಸುವುದಕ್ಕೆ ಸೀಮಿತವಾಗದೆ ಅನ್ಯದೇಶಗಳ ಉಪಗ್ರಹಗಳನ್ನೂ ನಭಕ್ಕೆ ಒಯ್ಯುವ ಕೆಲಸ ಮಾಡುತ್ತಿದೆ. ಇದರಿಂದ ಸಂಸ್ಥೆ ಆದಾಯ ಗಳಿಸಲು ಸಾಧ್ಯವಾಗಲಿದೆ. ಮೊದಲೆಲ್ಲ ಇಸ್ರೋ ಸರ್ಕಾರದ ನೆರವನ್ನೇ ಅವಲಂಬಿಸಬೇಕಾಗುತ್ತಿತ್ತು. ವಾಣಿಜ್ಯ ಉಪಗ್ರಹಗಳ ಉಡಾವಣೆ ಉದ್ದೇಶಕ್ಕಾಗಿ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್ಎಸ್ಐಎಲ್) ಎಂಬ ಸಂಸ್ಥೆಯನ್ನು ಹುಟ್ಟುಹಾಕಲಾಗಿದ್ದು, ಇದು ಅದರ ಮೊದಲ ಯೋಜನೆಯಾಗಿದೆ. ಕರೊನಾ ಕಾರಣದಿಂದಾಗಿ ಎಲ್ಲ ರಂಗಗಳ ಮೇಲೆ ಆಗಿರುವಂತೆ ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ಅನೇಕ ಪ್ರತಿಕೂಲ ಪರಿಣಾಮಗಳು ಆಗಿವೆ. ಇಸ್ರೋ ಉದಾಹರಣೆಯನ್ನೇ ತೆಗೆದುಕೊಂಡರೆ ಚಂದ್ರಯಾನ ಯೋಜನೆಯನ್ನು ಮುಂದಕ್ಕೆ ಹಾಕಲಾಗಿದೆ. ಆದರೆ ಇದರಿಂದ ಇಸ್ರೋ ಅಥವಾ ಅದರ ವಿಜ್ಞಾನಿಗಳು ಧೃತಿಗೆಡಬೇಕಾದ ಅಥವಾ ನಿರುತ್ಸಾಹಗೊಳ್ಳಬೇಕಾದ ಅಗತ್ಯವೇನೂ ಇಲ್ಲ. ಏಕೆಂದರೆ ಕರೊನಾ ಸಂಕಷ್ಟ ಯಾರನ್ನೂ ಬಿಟ್ಟಿಲ್ಲ. ಆದರೆ ಇಸ್ರೋ ತಾಂತ್ರಿಕ ನೈಪುಣ್ಯ ಮತ್ತು ವಿಜ್ಞಾನಿಗಳ ಸಾಮರ್ಥ್ಯದ ಮೇಲೆ ದೇಶವಾಸಿಗಳಿಗೆ ನಂಬಿಕೆಯಿದೆ. ಯೋಜನೆ ವಿಳಂಬವಾದರೂ ಫಲಪ್ರದವಾಗುತ್ತದೆ ಎಂಬ ವಿಶ್ವಾಸ ಇದೆ.
ಹಿಂದೆಲ್ಲ ಯಾವುದಾದರೂ ಬಾಹ್ಯಾಕಾಶ ಯೋಜನೆ ವಿಫಲವಾದರೆ ಅಥವಾ ಉಪಗ್ರಹದ ಕಾರ್ಯ ಅಂದುಕೊಂಡಂತೆ ನಡೆಯದಿದ್ದರೆ, ಇಷ್ಟೆಲ್ಲ ಹಣ ವ್ಯಯಿಸಿ ಉಪಗ್ರಹ ಕಳಿಸಬೇಕಾದ ಅಗತ್ಯ ಭಾರತದಂತಹ ದೇಶಕ್ಕೆ ಇದೆಯಾ ಎಂಬಂತಹ ಮಾತುಗಳೂ ಕೇಳಿಬರುತ್ತಿದ್ದವು. ಆದರೆ ಈಗ ಅಂಥ ವಾತಾವರಣ ಏನೂ ಇಲ್ಲ. ವರ್ಷದ ಹಿಂದೆ, ಚಂದ್ರಯಾನದ ಲ್ಯಾಂಡರ್ ಗುರಿ ತಲುಪಲು ವಿಫಲವಾದ ಸಂದರ್ಭದಲ್ಲಿ ಇಡೀ ದೇಶ ಇಸ್ರೋ ಬೆನ್ನಿಗೆ ನಿಂತಿದ್ದು ಇದಕ್ಕೆ ಒಂದು ನಿದರ್ಶನ. ಈಗ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿಯವರಿಗೂ ಅವಕಾಶ ನೀಡುವ ನಿರ್ಣಯವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ರಂಗದಲ್ಲಿ ಮತ್ತಷ್ಟು ಚಟುವಟಿಕೆಗಳು ಕಂಡುಬರುವುದು ನಿಶ್ಚಿತ.