More

  ಸಂಪಾದಕೀಯ: ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ

  ಲಿಖಿತ ಪರೀಕ್ಷೆಗೆ ತುಂಬ ತಯಾರಿ ನಡೆಸಿ, ಒಳ್ಳೆಯ ಅಂಕವನ್ನೂ ಪಡೆದು ಇನ್ನೇನು ಸರ್ಕಾರಿ ಉದ್ಯೋಗದ ಕನಸು ನನಸಾಗುತ್ತದೆ ಎಂದು ಅಭ್ಯರ್ಥಿ ಆಶಾವಾದ ಮೂಡಿಸಿಕೊಳ್ಳುವಾಗಲೇ ಸಂದರ್ಶನದ ಹೊತ್ತಲ್ಲಿ ನಡೆಯುವ ಗೋಲ್‍ಮಾಲ್ ಆವರೆಗಿನ ಪ್ರಯತ್ನಗಳಿಗೆ ತಣ್ಣೀರೆರಚಿ ಬಿಡುತ್ತದೆ. ಒಳ್ಳೆಯ ಅಂಕ, ಅರ್ಹತೆ, ಪ್ರತಿಭೆ ಎಲ್ಲ ಇದ್ದರೂ ಉದ್ಯೋಗ ಸಿಗದಿರುವುದಕ್ಕೆ ಕಾರಣ ‘ಕಾಂಚಾಣ ಮಹಿಮೆ’.

  ಹೌದು, ಸಂದರ್ಶನದ ನೆಪದಲ್ಲಿ ಬೇಡಿಕೆ ಇಟ್ಟಷ್ಟು ಹಣವನ್ನು ಅಭ್ಯರ್ಥಿ ನೀಡಿದಲ್ಲಿ ಮಾತ್ರ ಆತನಿಗೆ ನೌಕರಿ, ಇಲ್ಲದಿದ್ದಲ್ಲಿ ನಿರುದ್ಯೋಗವೇ ಗತಿ. ಹೀಗೆ ಲಂಚ ಕೊಟ್ಟು ನೌಕರಿ ಹಿಡಿದ ವ್ಯಕ್ತಿ ಮುಂದೆ ವ್ಯವಸ್ಥೆಯಲ್ಲಿ ಭ್ರಷ್ಟನಾಗದೆ ಉಳಿಯಲು ಹೇಗೆ ತಾನೇ ಸಾಧ್ಯ? ಇದು ಕೆಪಿಎಸ್ಸಿಯ ಕರ್ಮಕಾಂಡ. ಇಲ್ಲಿನ ಅನೇಕ ಅಪಸವ್ಯಗಳು, ಸಮಸ್ಯೆಗಳು ಉದ್ಯೋಗಾಕಾಂಕ್ಷಿಗಳ ನಿರೀಕ್ಷೆಯನ್ನೇ ಬುಡಮೇಲು ಮಾಡಿರುವುದು ಹೌದು. ಈ ಸಮಸ್ಯೆ, ಅಧ್ವಾನಗಳ ಬಗ್ಗೆ ಈ ಹಿಂದೆಯೂ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗಿದೆ.

  ಇಂಥ ಅವ್ಯವಸ್ಥೆ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕೆಲ ಕ್ರಮ ಘೋಷಿಸಿದೆ. ಆದರೆ, ಇದು ಸ್ವಯಂಸ್ಪೂರ್ತಿಯಿಂದ ತೆಗೆದುಕೊಂಡ ಕ್ರಮವೇನಲ್ಲ. ಕೇಂದ್ರ ಸರ್ಕಾರ ಈ ಸಂಬಂಧ 2018ರ ಜನವರಿಯಲ್ಲಿ ಹೊರಡಿಸಿದ ಅಧಿಸೂಚನೆ ಪ್ರಕಾರ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ.

  ಅದೇನೆಂದರೆ, ಗ್ರೂಪ್ ಎ ಮತ್ತು ಬಿ ಶ್ರೇಣಿಗಳ ಹುದ್ದೆಗಳ ಭರ್ತಿಗೆ ಸಂದರ್ಶನವನ್ನು ರದ್ದು ಪಡಿಸಿದೆ. ಗ್ರೂಪ್ ‘ಸಿ’ ಮತ್ತು ‘ಡಿ’ ದರ್ಜೆ ಹುದ್ದೆಗಳಂತೆ ‘ಎ’ ಮತ್ತು ‘ಬಿ’ ಹುದ್ದೆಗಳಿಗೂ ಲಿಖಿತ ಪರೀಕ್ಷೆ ಇರಲಿದೆ. ಕೆಲವು ಇಲಾಖೆಗಳಿಗೆ ಮಾತ್ರ ಸೀಮಿತವಾಗಿ ಎ ಮತ್ತು ಬಿ ದರ್ಜೆ ಹುದ್ದೆಗಳ ಭರ್ತಿ ಕಾಲಕ್ಕೆ ಸಂದರ್ಶನ ಕೈಬಿಡಲಾಗಿದೆ. ಲಿಖಿತ ಪರೀಕ್ಷೆ ನಡೆಸಿದ ಬಳಿಕ ಸಂದರ್ಶನ ನಡೆಸಲು ಒಂದು-ಒಂದೂವರೆ ವರ್ಷ ತೆಗೆದುಕೊಳ್ಳಲಾಗುತ್ತಿತ್ತು. ಆದರೆ, ಸರ್ಕಾರದ ಈ ಕ್ರಮದಿಂದ ನೇಮಕಾತಿಯಲ್ಲಿನ ವಿಳಂಬನೀತಿ ತಪ್ಪಿಸಲು ಅನುಕೂಲವಾಗಲಿದೆ. ಸಿಬ್ಬಂದಿ, ಅಧಿಕಾರಿಗಳ ಕೊರತೆಯಿಂದ ಹಲವು ಇಲಾಖೆಗಳ ಕಾರ್ಯಗಳು ಕುಂಟುತ್ತ ಸಾಗಿರುವುದು ಗೊತ್ತಿರುವಂಥದ್ದೇ.

  ಸರ್ಕಾರದ ಈ ತೀರ್ಮಾನ ಪೂರ್ತಿ ಸಮಸ್ಯೆಯನ್ನು ನಿವಾರಿಸುವುದಿಲ್ಲ ಎಂಬುದು ಗೊತ್ತಿರಲಿ. ಕೆಲ ಇಲಾಖೆ, ಕೆಲ ಹುದ್ದೆಗಳಿಗಷ್ಟೇ ಸಂದರ್ಶನ ರದ್ದು ಮಾಡಲಾಗಿದೆ. ಉಳಿದ ಹುದ್ದೆಗಳ ಭರ್ತಿ ವೇಳೆಯೂ ಭ್ರಷ್ಟಾಚಾರಕ್ಕೆ ಆಸ್ಪದ ಇಲ್ಲದಂತೆ, ಅರ್ಹರಿಗೆ ಮನ್ನಣೆ ದೊರೆಯುವಂತೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಜನಾಗ್ರಹವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕೇಂದ್ರ ಮಟ್ಟದಲ್ಲಿ ನೇಮಕಾತಿ ನಡೆಸುವ ಯುಪಿಎಸ್ಸಿ ಪಾರದರ್ಶಕತೆ, ತ್ವರಿತ ನಿರ್ಧಾರ, ಶೀಘ್ರ ಸ್ಪಂದನೆಯಿಂದ ವರ್ಚಸ್ಸು ಗಳಿಸಿಕೊಂಡಿದ್ದರೆ, ಕೆಪಿಎಸ್ಸಿ ಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ಹಾಗಾಗಿ, ಇಲ್ಲಿ ತೀವ್ರ ಮಟ್ಟದ ಬದಲಾವಣೆಗಳು ಅಪೇಕ್ಷಣೀಯ. ಕೆಪಿಎಸ್​ಸಿ ಸುಧಾರಣೆ ಕುರಿತಂತೆ ಈ ಹಿಂದೆ ಅನೇಕ ಸಲಹೆ ಸೂಚನೆಗಳು ಮಂಡನೆಯಾಗಿದ್ದು, ಸರ್ಕಾರ ಅವುಗಳನ್ನು ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ. ಅಂದಾಗ ಮಾತ್ರ ಈ ಸಂಸ್ಥೆಗೆ ಒಳ್ಳೆಯ ಹೆಸರು ಬರುತ್ತದೆ; ಉದ್ಯೋಗಾಕಾಂಕ್ಷಿಗಳಿಗೂ ನ್ಯಾಯ ಸಿಗುತ್ತದೆ.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts