ಪಾವತಿಯಾಗದ ಕೃಷಿ ಬಾವಿ ಬಿಲ್

ಕೊಪ್ಪ: ಶ್ಯಾನುವಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಕೃಷಿ ಬಾವಿ ಯೋಜನೆಯಡಿ ನಿರ್ವಿುಸಿರುವ 70ಕ್ಕೂ ಹೆಚ್ಚು ಬಾವಿಗಳ ಪೈಕಿ 30 ಕಾಮಗಾರಿಗಳ ಬಿಲ್ ಫಲಾನುಭವಿ ರೈತರಿಗೆ ಇನ್ನೂ ಪಾವತಿಯಾಗಿಲ್ಲ.

ನರೇಗಾ ಅಡಿ ರೈತರಿಗೆ ಕೃಷಿ ಬಾವಿ ನಿರ್ವಣಕ್ಕೆ 2 ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ. 4 ಹಂತಗಳಲ್ಲಿ ಹಣ ಬಿಡುಗಡೆ ಆಗುತ್ತದೆ. ಆದರೆ ಶ್ಯಾನುವಳ್ಳಿ ಗ್ರಾಪಂನ 30ಕ್ಕೂ ಹೆಚ್ಚು ರೈತರ ಬಾವಿ ಪೂರ್ಣಗೊಂಡು ಆರು ತಿಂಗಳಾದರೂ ಸಹಾಯಧನ ನೀಡಿಲ್ಲ. ರೈತರು ಪ್ರತಿದಿನ ಗ್ರಾಪಂ ಕಚೇರಿಗೆ ಅಲೆದಾಡುವಂತಾಗಿದೆ.

ಈ ಹಿಂದೆ ಅತೀ ಹೆಚ್ಚು ನರೇಗಾ ಕಾಮಗಾರಿ ಮಾಡಿ ಜಿಲ್ಲಾ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದ್ದ ಶ್ಯಾನುವಳ್ಳಿ ಗ್ರಾಪಂ ಈ ವರ್ಷ ಹಿಂದುಳಿದಿದೆ. ಹೀಗಾಗಿ ಈ ಹಿಂದಿನ ಕಾಮಗಾರಿಗಳ ಬಿಲ್ ಪಾವತಿಯಾಗಿಲ್ಲ.

ಗ್ರಾಮ ಸಭೆಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ, ಗ್ರಾಪಂನಲ್ಲಿ ನಿರ್ಣಯ ಕೈಗೊಂಡು ಕ್ರಿಯಾಯೋಜನೆ ತಯಾರಿಸಲಾಗುತ್ತದೆ. ಸಾರ್ವಜನಿಕ ಕೃಷಿ ಬಾವಿ ನಿರ್ವಣಕ್ಕೆ ಬೇಕಾದ ಎಲ್ಲ ದಾಖಲೆಗಳನ್ನೂ ತಾಪಂಗೆ ಕಳುಹಿಸಿ ನಂತರ ಜಿಪಂ ಸಿಇಒ ಅವರಿಂದ ಅನುಮೋದನೆ ಪಡೆದು ಕಾಮಗಾರಿ ಆರಂಭಿಸಲಾಗುತ್ತದೆ. ಇಷ್ಟೆಲ್ಲ ಪ್ರಕ್ರಿಯೆ ವೇಳೆ ಅಡ್ಡಿಯಾಗದ ಕಾನೂನು ಬಿಲ್ ಮಾಡುವ ಸಂದರ್ಭ ಅಡ್ಡಿಯಾಗುವುದೇಕೆ? ಎಂದು ಗ್ರಾಪಂ ಅಧ್ಯಕ್ಷ ಕೆ.ಎಸ್.ರವಿಚಂದ್ರ ಪ್ರಶ್ನಿಸಿದ್ದಾರೆ.

ಮಾನವೀಯತೆ ಇರಲಿ: ಬೇಸಿಗೆಯಲ್ಲಿ ಮಲೆನಾಡಿನ ಬಾವಿಗಳಲ್ಲಿ ನೀರು ಬತ್ತಿ ಕುಡಿಯುವ ನೀರಿಗೂ ತೊಂದರೆಯಾಗುತ್ತದೆ. ನೀರು ಸಿಗುವ ಜಾಗ ಗುರುತಿಸಿ ಬಾವಿ ತೋಡಬೇಕು. ಅದು ಸಾರ್ವಜನಿಕ ಜಾಗ ಅಥವಾ ರೈತರ ಜಮೀನಾಗಿರಲಿ ಇಂಥದ್ದೇ ಜಾಗದಲ್ಲಿ ನೀರು ಸಿಗುತ್ತದೆ ಎಂದು ಹೇಳಲಾಗದು. ನೀರಿನ ಲಭ್ಯತೆ ಇರುವಲ್ಲಿ ಬಾವಿ ತೋಡಬೇಕು. ಅಧಿಕಾರಿಗಳು ಕಾನೂನಿನ ಜತೆಗೆ ಮಾನವೀಯ ನೆಲೆಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಎಲ್ಲವನ್ನೂ ಕಾನೂನು ಚೌಕಟ್ಟಿನೊಳಗೆ ಮಾಡುವುದಾದರೆ ಯಾವ ಕೆಲಸವೂ ಸಾಧ್ಯವಿಲ್ಲ ಎನ್ನುತ್ತಾರೆ ಜಿಪಂ ಸದಸ್ಯ ಎಸ್.ಎನ್.ರಾಮಸ್ವಾಮಿ.

ರೈತರ ಜತೆ ಹೋರಾಟ: ರೈತರಿಗಾಗಿ ಸರ್ಕಾರ ರೂಪಿಸಿದ ಯೋಜನೆ ಅವರಿಗೆ ಸಿಗಬೇಕು. ವಿನಾಕಾರಣ ಗೊಂದಲ ಸೃಷ್ಟಿಸಿ ರೈತರಿಗೆ ಅನ್ಯಾಯ ಮಾಡುವುದು ಸರಿಯಲ್ಲ ಎಂದು ಗ್ರಾಪಂ ಅಧ್ಯಕ್ಷ ಕೆ.ಎಸ್.ರವಿಚಂದ್ರ ಹೇಳಿದ್ದಾರೆ. ಈ ಹಿಂದೆ ಇದೇ ದಾಖಲೆಗೆ ಬಿಲ್ ಪಾವತಿಯಾಗಿದೆ. ಈಗ ಅಡ್ಡಿ ಪಡಿಸುವುದು ಏಕೆ? ಸರ್ಕಾರದ ಸೌಲಭ್ಯ ಜನರಿಗೆ ತಲುಪಿಸುವುದು ನಮ್ಮ ಜವಾಬ್ದಾರಿ. ಇದಕ್ಕೆ ಕಾನೂನಿನ ಹೆಸರಿನಲ್ಲಿ ಅಡ್ಡಿಪಡಿಸುವುದು ಸರಿಯಲ್ಲ. ಕೂಡಲೇ ಬಿಲ್ ಪಾವತಿ ಮಾಡಬೇಕು. ಇಲ್ಲವಾದಲ್ಲಿ ರೈತರ ಜತೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಬಿಪಿಎಲ್ ಕುಟುಂಬದ ಸಣ್ಣ ಹಿಡುವಳಿದಾರರಿಗೆ ವೈಯಕ್ತಿಕ ಬಾವಿ ನಿರ್ವಣಕ್ಕೆ 1.28 ಲಕ್ಷ, ಸಾರ್ವಜನಿಕ ಕೃಷಿ ಬಾವಿಗೆ 2 ಲಕ್ಷ ರೂ.ನೀಡಲಾಗುತ್ತದೆ. ಆದರೆ ಗ್ರಾಮದಲ್ಲಿ ಸಾರ್ವಜನಿಕ ಕೃಷಿ ಬಾವಿ ಹೆಸರಲ್ಲಿ ಖಾಸಗಿ ಜಾಗದಲ್ಲಿ ಬಾವಿ ನಿರ್ವಿುಸಲಾಗಿದೆ. ಇದಕ್ಕೆ ಬಿಲ್ ಮಾಡಲು ಬರುವುದಿಲ್ಲ. ಸಾಮಾಜಿಕ ಲೆಕ್ಕ ಪರಿಶೋಧನೆ ವೇಳೆ ಆಕ್ಷೇಪಣೆ ಬರುತ್ತದೆ. ಈಗಾಗಲೇ ಪಾವತಿಸಿರುವ ಹಣವನ್ನೂ ರಿಕವರ್ ಮಾಡಬೇಕಿದೆ.

| ಚಂದನ್, ಪಿಡಿಒ