ಸೊರಬ: ಹೈನುಗಾರಿಕೆಯಿಂದ ರೈತರ ಆರ್ಥಿಕ ಸ್ಥಿತಿ ಭದ್ರವಾಗುತ್ತದೆ. ಹಾಗಾಗಿ ಇದನ್ನು ಉಪವೃತ್ತಿಯಾಗಿ ಮಾಡಿಕೊಳ್ಳಬೇಕು ಎಂದು ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ದಯಾನಂದ ಗೌಡ ಹೇಳಿದರು.
ತಾಲೂಕಿನ ಚಂದ್ರಗುತ್ತಿ ಶ್ರೀ ರೇಣುಕಾಂಬಾ ದೇವಿ ದಸರಾ ಉತ್ಸವ ಆಚರಣಾ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಂದ್ರಗುತ್ತಿ ಗ್ರಾಪಂ, ಗ್ರಾಮಸ್ಥರು ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 9ನೇ ವರ್ಷದ ಶ್ರೀ ರೇಣುಕಾಂಬ ದಸರಾ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಚಂದ್ರಗುತ್ತಿ, ಹರೀಶಿ ಭಾಗದಲ್ಲಿ ಹಾಲಿನ ಡೇರಿ ಮಾಡಿಕೊಡಲಾಗುವುದು. ಕೃಷಿಗೆ ಪೂರಕ ಸೌಲಭ್ಯ ಪಡೆಯಲು ಹೈನುಗಾರಿಕೆ ಅಗತ್ಯವಿದೆ ಎಂದು ತಿಳಿಸಿದರು.
ಪಿಎಸ್‌ಐ ನಾಗರಾಜ್ ಮಾತನಾಡಿ, ಧಾರ್ಮಿಕ ಕ್ಷೇತ್ರ ಚಂದ್ರಗುತ್ತಿ ನಾಡಿನಾದ್ಯಂತ ಪ್ರಸಿದ್ಧಿ ಪಡೆದಿದ್ದು, ಎಲ್ಲರಿಗೂ ದೇವರ ಆಶೀರ್ವಾದ ಲಭಿಸಲಿ ಎಂದು ಆಶಿಸಿದರು. ದಸರಾ ಉತ್ಸವ ಆಚರಣಾ ಸಮಿತಿ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ ಮಾತನಾಡಿ, ರೇಣುಕಾಂಬೆ ಕೃಪಾಶೀರ್ವಾದದಿಂದ ವಿಜಯದಶಮಿಯಂದು ಆನೆ ಮೇಲೆ ಅಂಬಾರಿ ಹೊತ್ತ ದಸರಾ ಮೆರವಣಿಗೆ ಬನ್ನಿ ಮಂಟಪದಿಂದ ರೇಣುಕಾಂಬ ದೇವಿ ದ್ವಾರಬಾಗಿಲವರೆಗೆ ನಡೆಸಲು ಸಿದ್ಧತೆ ಮಾಡಲಾಗಿದೆ ಎಂದರು.
ಹಾಸ್ಯ ಕಲಾವಿದರಾದ ಪ್ರಾಣೇಶ್, ಬಸವರಾಜ್ ಮಹಾಮನಿ, ನರಸಿಂಹ ಜೋಶಿ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಿತು. ಗ್ರಾಪಂ ಮಾಜಿ ಅಧ್ಯಕ್ಷ ಮಾರ್ಯಪ್ಪ, ಹರೀಶಿ ಗ್ರಾಪಂ ಅಧ್ಯಕ್ಷೆ ಅನಸೂಯಮ್ಮ, ಗ್ರಾಪಂ ಸದಸ್ಯ ರವಿ ಕೊಂಡಂಬಿ, ನಿವೃತ್ತ ಶಿಕ್ಷಕ ಯಶವಂತ್, ಮೋಹನ್ ಕಾನಡೆ, ಪ್ರಜ್ವಲ್, ಸುನೀಲ್ ಗೌಡ, ನಾಗರಾಜ್, ರತ್ನಾಕರ, ರೇಣುಕಾಪ್ರಸಾದ್, ಬಾಬಣ್ಣ ಇತರರಿದ್ದರು.