ಸಹಕಾರ ಸಂಘದ ಸರ್ವಸದಸ್ಯರ ಸಭೆಯಲ್ಲಿ ಇಲಾಖೆ ಅಧೀಕ್ಷಕ ಡಾ.ವಿ.ಸುದರ್ಶನ್ ಸಲಹೆ
ಶ್ರೀನಿವಾಸಪುರ: ರಾಜ್ಯದಲ್ಲಿ ಕುರಿ ಮತ್ತು ಮೇಕೆ ಸಾಕಣೆಯಿಂದ ಕುರಿಗಾಹಿಗಳನ್ನು ಆರ್ಥಿಕವಾಗಿ ಅಭಿವೃದ್ಧಿಪಡಿಸುವ ಉದ್ದೇಶವನ್ನು ಇಲಾಖೆ ಹೊಂದಿದೆ ಎಂದು ಕುರಿ ಮತ್ತು ಮೇಕೆ ಅಭಿವೃದ್ಧಿ ಇಲಾಖೆ ಅಧೀಕ್ಷಕ ಡಾ.ವಿ.ಸುದರ್ಶನ್ ಹೇಳಿದರು.
ತಾಲೂಕಿನ ಗಾಂಡ್ಲಹಳ್ಳಿಯಲ್ಲಿ ಸೋಮವಾರ ಶ್ರೀ ಉಲ್ಲೇಶ್ವರಿ ಕುರಿ ಮತ್ತು ಮೇಕೆ ಸಾಕಣೆದಾರರ ಹಾಗೂ ಉಣ್ಣೆ ಉತ್ಪಾದಕರ ಸಹಕಾರ ಸಂಘದ ಸರ್ವಸದಸ್ಯರ ಪ್ರಥಮ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿದರು.
ಸಹಕಾರ ಸಂಘಕ್ಕೆ ಎಲ್ಲರ ಸಹಕಾರ ಬೇಕಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕು. ಈಗಾಗಲೇ ಕೇಂದ್ರ ಸರ್ಕಾರದ ಅಮೃತ ಸ್ವಾಭಿಮಾನ ಯೋಜನೆಯಡಿ ಒಬ್ಬರಿಗೆ ತಲಾ 1.75 ಲಕ್ಷ ರೂ. ವೆಚ್ಚದಲ್ಲಿ ಘಟಕ ನಿರ್ಮಾಣಕ್ಕೆ ಸಾಲ ಮತ್ತು ಸಹಾಯಧನಕ್ಕಾಗಿ ಈ ಹಿಂದೆ ಅರ್ಜಿ ಸಲ್ಲಿಸಿದವರಿಗೆ 87 ಸಾವಿರ ರೂ. ವಿತರಿಸಲಾಗಿದೆ. ಕಸಬಾ ಹೋಬಳಿ ಉತ್ಪಾದಕರ ಸಂಘದಲ್ಲಿ 19 ಷೇರುದಾರರಿಗೆ ಈಗಾಗಲೇ ಸಹಾಯಧನ ಸಾಲ ವಿತರಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ 15 ಮಂದಿಗೆ ಸಾಲ ಕೊಡುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ಪಶುಪಾಲನ ಇಲಾಖೆ ಸಹಾಯಕ ನಿರ್ದೇಶಕ ಡಾ.ಸುಬಾನ್ ಮಾತನಾಡಿ, ನಮ್ಮ ಇಲಾಖೆಯಿಂದ ಜಾನುವಾರುಗಳಿಗೆ ವಿಮೆ, ರಿಯಾಯಿತಿ ದರದಲ್ಲಿ ಛಾಪ್ಕಟ್ಟರ್, ಮ್ಯಾಟ್ ಹಾಗೂ ಲಸಿಕೆಗಳನ್ನು ನೀಡಲಾಗುವುದಲ್ಲದೆ, ಇನ್ನಿತರ ಸೌಲಭ್ಯಗಳು ದೊರೆಯಲಿದೆ. ಸಹಕಾರ ಸಂಘದಡಿ ಇಲಾಖೆಯ ಸಹಯೋಗ ಪಡೆದುಕೊಳ್ಳಬಹುದು ಎಂದರು.
ರೋಜೋರನಹಳ್ಳಿ ಕ್ರಾಸ್ನ ಎಸ್ಬಿಐ ಬ್ಯಾಂಕ್ ವ್ಯವಸ್ಥಾಪಕಿ ಕೆ.ಎ.ಲಲಿತಮ್ಮ ಮಾತನಾಡಿ, ರೈತರಿಗೆ ಬ್ಯಾಂಕ್ನಿಂದ ಸಾಲಸೌಲಭ್ಯಗಳನ್ನು ವಿತರಣೆ ಮಾಡಲಾಗುತ್ತಿದೆ. ಕೃಷಿ ಚಟುವಟಿಕೆಗಳಿಗೆ ಇದನ್ನು ಬಳಕೆ ಮಾಡಿಕೊಂಡು ಆರ್ಥಿಕ ಸಬಲರಾಗಬೇಕು. ಪಡೆದ ಸಾಲ ಸಕಾಲಕ್ಕೆ ಮರುಪಾವತಿಸಬೇಕು ಎಂದು ತಿಳಿಸಿದರು.
ಶ್ರೀ ಉಲ್ಲೇಶ್ವರಿ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಹಾಗೂ ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬೈಚೇಗೌಡ ಮಾತನಾಡಿ, ಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ವಿತರಿಸಲಾಗುತ್ತಿದೆ. ಈ ವರ್ಷವೂ ಸಹ ಆದ್ಯತೆಯ ಮೇರೆಗೆ ಇಲಾಖೆಯ ಸೌಲಭ್ಯಗಳನ್ನು ವಿತರಿಸಲು ಸಿದ್ಧರಿದ್ದೇವೆ. ಯಾವುದೇ ಕಾರಣಕ್ಕೂ ಸೌಲಭ್ಯ ವಿತರಣೆಯಲ್ಲಿ ರಾಜಕೀಯ ಬೆರಸಬೇಡಿ. ಸಂಘದ ಅಭಿವೃದ್ಧಿಗೆ ಷೇರುದಾರರ ಸಂಖ್ಯೆ ಪ್ರಗತಿಗೆ ಮುಂದಾಗಬೇಕು ಎಂದರು.
ಕಾರ್ಯಕಾರಿ ಮಂಡಳಿ ಕಾರ್ಯಧ್ಯಕ್ಷ ಬಿ.ಐ.ನಾಗರಾಜ, ನಿರ್ದೇಶಕರಾದ ಬಿ.ಮುನಿವೆಂಕಟಪ್ಪ, ಎ.ಕೃಷ್ಣವೇಣಿ, ಗೌರಮ್ಮ, ಕಾರ್ಯದರ್ಶಿ ಜಿ.ಚೌಡಪ್ಪ ಇದ್ದರು.