More

    ಆರ್ಥಿಕ ಹಿಂಜರಿತ; 2 ಲಕ್ಷ ಕೋಟಿ ರೂಪಾಯಿ ವೆಚ್ಚಕ್ಕೆ ಕಡಿವಾಣ?

    ನವದೆಹಲಿ: ಆರ್ಥಿಕ ಹಿಂಜರಿತ, ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಸಂಗ್ರಹ ಆಗದ ಕಾರಣ ಏರುತ್ತಿರುವ ವಿತ್ತೀಯ ಕೊರತೆಯನ್ನು ಸರಿದೂಗಿಸಲು 2 ಲಕ್ಷ ಕೋಟಿ ರೂಪಾಯಿ ವೆಚ್ಚಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.

    ಏಷ್ಯಾ ಮೂರನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾದ ಭಾರತದ ಪ್ರಗತಿ ಕುಂಠಿತಗೊಂಡಿದ್ದು, ಆರು ವರ್ಷದ ಹಿಂದಿನ ವೇಗಕ್ಕೆ ಇಳಿದಿದೆ. ಇದರಿಂದ ಸರ್ಕಾರಕ್ಕೆ 2.65 ಲಕ್ಷ ಕೋಟಿ ರೂಪಾಯಿ ತೆರಿಗೆ ಕೊರತೆ ಆಗಿದೆ. ಹೀಗಾಗಿ ವಿತ್ತೀಯ ಕೊರತೆಯನ್ನು ನಿಯಂತ್ರಣದಲ್ಲಿ ಇರಿಸಲು ಸರ್ಕಾರ ವೆಚ್ಚ ತಗ್ಗಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

    ಬಜೆಟ್​ನಲ್ಲಿ ಅನುಮೋದನೆ ಗೊಂಡಿರುವ ಒಟ್ಟು 27.86 ಲಕ್ಷ ಕೋಟಿ ರೂಪಾಯಿ ಖರ್ಚು-ವೆಚ್ಚದ ಗುರಿಯಲ್ಲಿ ಕಳೆದ ನವೆಂಬರ್​ವರೆಗೆ ಶೇ. 65 ಮೊತ್ತವನ್ನು ವಿನಿಯೋಗಿಸಲಾಗಿದೆ. ಈಗ  2 ಲಕ್ಷ ಕೋಟಿ ರೂಪಾಯಿ ವೆಚ್ಚಕ್ಕೆ ಕಡಿವಾಣ ಹಾಕುವುದರಿಂದ ಒಟ್ಟಾರೆ ಖರ್ಚಿನಲ್ಲಿ ಶೇ. 7 ಮಿತವ್ಯಯ ಸಾಧಿಸಿದಂತೆ ಆಗುತ್ತದೆ ಎಂದು ಮೂಲಗಳು ಹೇಳಿವೆ.

    ಕಳೆದ ಸೆಪ್ಟೆಂಬರ್​ಗೆ ಹೋಲಿಸಿದರೆ ಅಕ್ಟೋಬರ್- ನವೆಂಬರ್​ನಲ್ಲಿ ವೆಚ್ಚದ ಪ್ರಮಾಣ ಸರಾಸರಿ 1.60 ಲಕ್ಷ ಕೋಟಿ ರೂಪಾಯಿಯಷ್ಟು ಏರಿಕೆ ಆಗಿತ್ತು.

    ಮಾರುಕಟ್ಟೆಯಲ್ಲಿ ಬೇಡಿಕೆ ಕೊರತೆ, ಕಾರ್ಪೆರೇಟ್ ವಲಯದಲ್ಲಿ ಕ್ಷೀಣಿಸಿದ ಪ್ರಗತಿಯಿಂದ ತೆರಿಗೆ ಸಂಗ್ರಹದಲ್ಲಿ ಇಳಿಕೆಯಾಗಿದೆ. ಇದರೊಟ್ಟಿಗೆ ಖಾಸಗಿ ವಲಯದಿಂದ ಹೂಡಿಕೆ ಕೂಡ ನಿರೀಕ್ಷಿಸಿದ ಪ್ರಮಾಣದಲ್ಲಿ ಬಂದಿಲ್ಲದಿರುವುದು ಜಿಡಿಪಿ ಶೇ. 4.5ಕ್ಕೆ ಕುಸಿಯಲು ಕಾರಣ. ಇದರ ಪರಿಣಾಮ ವಿತ್ತೀಯ ಕೊರತೆ ಹೆಚ್ಚಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts