ಅಣ್ಣಿಗೇರಿ: ಹತ್ತಿ ಬೆಳೆದ ರೈತನಿಗೆ ಸೂಕ್ತ ಬೆಲೆ ಸಿಗದ ಕಾರಣ ಅನ್ನದಾತನಿಗೆ ಈಗ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ.
ಅಣ್ಣಿಗೇರಿ ತಾಲೂಕು 23 ಗ್ರಾಮಗಳನ್ನು ಒಳಗೊಂಡಿದ್ದು, 2020-21ನೇ ಸಾಲಿನಲ್ಲಿ 10 ಸಾವಿರ ಹೆಕ್ಟೇರ್ ಬಿ.ಟಿ. ಹತ್ತಿ ಬೆಳೆಯಲಾಗಿದೆ. ಅತಿವೃಷ್ಟಿಯಿಂದಾಗಿ ಎಕರೆಗೆ ಕೇವಲ 4-5 ಕ್ವಿಂಟಾಲ್ ಇಳುವರಿ ಬಂದಿದೆ. ಈ ವರ್ಷ ಹೆಚ್ಚು ಮಳೆ ಸುರಿದು ಬೆಳೆಯಲ್ಲ ಹಾಳಾಗಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಇಳುವರಿ ಬಂದ ರೈತರಿಗೆ ಸರ್ಕಾರ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ರೈತರಿಗೆ ಕಗ್ಗಂಟಾದ ಹತ್ತಿ ಖರೀದಿ ಕೇಂದ್ರ: 2019-20ನೇ ಸಾಲಿನಲ್ಲಿ ಸಿಸಿಐ ಕೇಂದ್ರವಾಗಿ ಗುರ್ತಿಸಲ್ಪಟ್ಟ ಅಣ್ಣಿಗೇರಿ ವಿಭಾಗವು 90729.35 ಟನ್ ಖರೀದಿ ಮಾಡಿ ಒಟ್ಟು 63,15,40,358.46 ರೂ.ಗಳ ವಹಿವಾಟ ಮಾಡಿತ್ತು. ಆದರೆ, ಈಗ ಸರ್ಕಾರ ಸಿಸಿಐ ಖರೀದಿ ಕೇಂದ್ರ ತೆರೆಯದೇ ಇರುವುದು ರೈತರಿಗೆ ತೊಂದರೆಯಾಗಿದೆ.
ಖಾಸಗಿ ಕಂಪನಿಗಳ ಭಂಡತನ: ಅಣ್ಣಿಗೇರಿಯಲ್ಲಿ ಖಾಸಗಿ ಒಡೆತನದಲ್ಲಿ 6 ಜಿನ್ನಿಂಗ್ ಪ್ರೆಸ್ಸಿಂಗ್ ಮಿಲ್ಗಳಿವೆ. ಅಲ್ಲಿ ಕ್ವಿಂಟಾಲ್ಗೆ 4500-4900 ರೂ. ನೀಡಿ ರೈತರಿಂದ ಹತ್ತಿ ಖರೀದಿ ಮಾಡಿ ತಮ್ಮ ಬೊಕ್ಕಸ ತುಂಬಿಸಿಕೊಳ್ಳುತ್ತಿದ್ದಾರೆ.
ಸರ್ಕಾರದ ಜೊತೆಗೆ ಮೊದಲ ಹಂತದ ಮಾತುಕತೆ ಮುಗಿದಿದ್ದು, ಹಬ್ಬದ ನಂತರ ಆದೇಶ ಬರುತ್ತದೆ. ಇನ್ನೇನು ಕೆಲವೇ ದಿನಗಳಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಲು ಸರ್ಕಾರಕ್ಕೆ ಒತ್ತಾಯ ಮಾಡಿದ್ದೇನೆ .
| ರಾಘವೇಂದ್ರ ಕೆ. ಸಜ್ಜನ, ಎಪಿಎಂಸಿ ಪ್ರಭಾರಿ ಕಾರ್ಯದರ್ಶಿ
ವಾರದ ಅಂತ್ಯದೊಳಗೆ ಸಿಸಿಐ ಖರೀದಿ ಕೇಂದ್ರ ಸ್ಥಾಪಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು.
| ಮಂಜುನಾಥ ಮಾಯಣ್ಣವರ, ಅಣ್ಣಿಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಕೇಂದ್ರದ ಜೊತೆ ಮಾತನಾಡಿ ಎಪಿಎಂಸಿ ಕಾಯ್ದೆ ತಿದ್ದುಪಡಿಯಾದ ಕಾರಣ ಖರೀದಿ ಕೇಂದ್ರ ಪ್ರಾರಂಭಿಸಲು ತಡವಾಗಿದೆ. ರೈತರು ದೃತಿಗೆಡುವ ಅಗತ್ಯವಿಲ್ಲ. ಈ ವಾರದ ಅಂತ್ಯದೊಳಗೆ ಪ್ರಾರಂಭವಾಗಬಹುದು ಮತ್ತು ಎಫ್ಎಕ್ಯೂ ಗುಣಮಟ್ಟದ ಹತ್ತಿಯನ್ನು 5725 ರೂ.ಗಳಿಂದ 5825 ರೂ. ವರೆಗೆ ಖರೀದಿ ಮಾಡಲು ಸರ್ಕಾರ ಅನುಮೋದನೆ ನೀಡಿದೆ.
| ಹೆಸರು ಹೇಳಲಿಚ್ಚಿಸದ ಅಧಿಕಾರಿ