ಪಶ್ಚಿಮ ಬಂಗಾಳದಲ್ಲಿ ಗಲಭೆ: ಅವಧಿಗೂ ಮುನ್ನವೇ ಬಹಿರಂಗ ಪ್ರಚಾರಕ್ಕೆ ತೆರೆ ಎಳೆದ ಚುನಾವಣೆ ಆಯೋಗ

ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ನಡೆದ ಗಲಭೆ ಹಿನ್ನೆಲೆಯಲ್ಲಿ ಚುನಾವಣೆ ಆಯೋಗ ಕ್ರಮ ಕೈಗೊಂಡಿದ್ದು, ನಿಗದಿತ ಚುನಾವಣಾ ಪ್ರಚಾರ ಮುಗಿಯಲು ಒಂದೇ ದಿನ ಬಾಕಿ ಇರುವಾಗಲೇ ಪಶ್ಚಿಮ ಬಂಗಾಳದಲ್ಲಿ ಬಹಿರಂಗ ಪ್ರಚಾರ ಸ್ಥಗಿತಗೊಳ್ಳಲಿದೆ.

ಮೇ 19 ರಂದು ಪಶ್ಚಿಮ ಬಂಗಾಳದ 9 ಕ್ಷೇತ್ರಗಳಿಗೆ ಕೊನೆಯ ಹಂತದ ಲೋಕಸಭಾ ಚುನಾವಣೆ ನಡೆಯಲಿತ್ತು. ಹಾಗಾಗಿ ಮೇ 17ರ ಸಂಜೆ 6ಕ್ಕೆ ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯಬೇಕಾಗಿತ್ತು. ಆದರೆ ಅಮಿತ್‌ ಷಾ ರೋಡ್‌ ಶೋ ವೇಳೆ ನಡೆದ ಗಲಭೆ ಹಿನ್ನೆಲೆಯಲ್ಲಿ ಚುನಾವಣೆ ಆಯೋಗ 20 ಗಂಟೆಗೂ ಮುನ್ನವೇ ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯಲು ಆದೇಶ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚುನಾವಣೆ ಅಧಿಕಾರಿಗಳು, ಡಮ್‌ ಡಮ್‌, ಬರಸಾತ್‌, ಬಸೀರ್‌ಹಾತ್‌, ಜಯನಗರ್‌, ಮಥುರಾಪುರ, ಜಾದವ್‌ಪುರ, ಡೈಮಂಡ್‌ ಹಾರ್ಬರ್‌, ದಕ್ಷಿಣ ಮತ್ತು ಉತ್ತರ ಕೋಲ್ಕತ ಕ್ಷೇತ್ರಗಳಲ್ಲಿ ನಾಳೆ ಬೆಳಗ್ಗೆ 10 ಗಂಟೆಯಿಂದ ಮತದಾನ ಮುಕ್ತಾಯದವರೆಗೆ ಚುನಾವಣೆ ಪ್ರಚಾರಕ್ಕೆ ತಡೆ ನೀಡಿದೆ ಎಂದು ತಿಳಿಸಿದ್ದಾರೆ.

ಬಹುಶಃ ಇದೇ ಮೊದಲ ಬಾರಿಗೆ ಆಯೋಗವು ತನ್ನ ವಿವೇಚನೆಯಲ್ಲಿ ಸೆಕ್ಷನ್‌ 324ನ್ನು ವಿಧಿಸಿದೆ. ಆದರೆ ಇದೇ ಕೊನೆ ಬಾರಿಯಲ್ಲ. ಕಾನೂನುಬಾಹಿರ ಮತ್ತು ಹಿಂಸಾಚಾರದಂತ ಘಟನೆಗಳು ಮರುಕಳಿಸಿದ್ದೇ ಆದರೆ ಶಾಂತಿಯುತ ರೀತಿಯಲ್ಲಿ ಮತದಾನ ನಡೆಸಲು ತೊಂದರೆಯುಂಟಾಗುವಿಕೆಯನ್ನು ತಪ್ಪಿಸಲು ಆಯೋಗ ಈ ನಿರ್ಧಾರ ಕೈಗೊಂಡಿದೆ.

ಸಂವಿಧಾನದ ವಿಧಿ 324ರ ಪ್ರಕಾರ ಸಂಘಟನೆ, ನಿರ್ದೇಶನ ಮತ್ತು ಚುನಾವಣೆ ನಿಯಂತ್ರಣ ಮಾಡುವುದನ್ನು ಚುನಾವಣೆ ಆಯೋಗಕ್ಕೆ ಅವಕಾಶ ನೀಡಿದೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಷಾ ಮಂಗಳವಾರ ನಡೆಸಿದ ರೋಡ್‌ ಶೋ ವೇಳೆ ಭಾರಿ ಗಲಭೆ ಏರ್ಪಟ್ಟಿತ್ತು. ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್‌ ನಡುವಿನ ಆರೋಪ ಪ್ರತ್ಯಾರೋಪ ಹೆಚ್ಚಾದ ಬೆನ್ನಲ್ಲೇ ಅಮಿತ್‌ ಷಾ ವಿರುದ್ಧ ಇಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರತಿಭಟನಾ ಮೆರವಣಿಗೆ ಕೈಗೊಂಡಿದ್ದರು.

ಹಿಂಸಾಚಾರ ಭುಗಿಲೇಳುವ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣೆ ಆಯೋಗ ಬಹಿರಂಗ ಪ್ರಚಾರದ ಅವಧಿಯನ್ನು ಮೊಟಕುಗೊಳಿಸಿ ಆದೇಶ ಹೊರಡಿಸಿದೆ. (ಏಜೆನ್ಸೀಸ್)