ಚರ್ಚುಗಳಲ್ಲಿ ಈಸ್ಟರ್ ಜಾಗರಣೆ ಸಂಭ್ರಮ

ಮಂಗಳೂರು/ಉಡುಪಿ: ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬ ಈಸ್ಟರ್‌ನ್ನು ಕ್ರೈಸ್ತರು ಭಾನುವಾರ ಆಚರಿಸಲಿದ್ದು, ಪೂರ್ವಭಾವಿಯಾಗಿ ಶನಿವಾರ ರಾತ್ರಿ ಉಭಯ ಜಿಲ್ಲೆಗಳ ಚರ್ಚುಗಳಲ್ಲಿ ಈಸ್ಟರ್ ಜಾಗರಣೆ, ವಿಶೇಷ ಪ್ರಾರ್ಥನೆ ಮತ್ತು ಸಂಭ್ರಮದ ಬಲಿಪೂಜೆ ನಡೆಯಿತು.

ಮಂಗಳೂರು ನಗರದ ರೊಜಾರಿಯೊ ಕೆಥೆಡ್ರಲ್‌ನಲ್ಲಿ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಹೊಸ ಅಗ್ನಿಯನ್ನು ಆಶೀರ್ವಚನ ಮಾಡಿ, ಈಸ್ಟರ್ ಮೊಂಬತ್ತಿಯನ್ನು ಉರಿಸಿದರು. ಕೆಥೆಡ್ರಲ್‌ನ ರೆಕ್ಟರ್ ಾ.ಜೆ.ಬಿ.ಕ್ರಾಸ್ತಾ ಮತ್ತು ಇತರ ಗುರುಗಳು ಉಪಸ್ಥಿತರಿದ್ದರು.

ಭಾಗವಹಿಸಿದ್ದ ಕ್ರೈಸ್ತ ವಿಶ್ವಾಸಿಗಳೆಲ್ಲರೂ ಈಸ್ಟರ್ ಮೊಂಬತ್ತಿಯ ಅಗ್ನಿಯಿಂದ ಮೇಣದ ಬತ್ತಿ ಉರಿಸಿ ಮೆರವಣಿಗೆಯಲ್ಲಿ ಕೆಥೆಡ್ರಲ್‌ನ ಒಳಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಿ, ಬಲಿಪೂಜೆಯಲ್ಲಿ ಪಾಲ್ಗೊಂಡರು. ಬಿಷಪ್ ಈಸ್ಟರ್ ಆಚರಣೆಯ ಮಹತ್ವವನ್ನು ವಿವರಿಸಿ ಹಬ್ಬದ ಸಂದೇಶ ನೀಡಿದರು.

ಉಡುಪಿ ಕಾರ್ಯಕ್ರಮ: ಯೇಸು ಕ್ರಿಸ್ತರು ಶಿಲುಬೆಗೇರಿ ಪುನರುತ್ಥಾನರಾದ ಈಸ್ಟರ್ ಜಾಗರಣೆ (ಪಾಸ್ಖ) ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ಕಲ್ಯಾಣಪುರ ಮಿಲಾಗ್ರಿಸ್ ಕೆಥೆಡ್ರಲ್‌ನಲ್ಲಿ ನಡೆಯಿತು. ಬೃಹತ್ ಗಾತ್ರದ ಈಸ್ಟರ್ ಕ್ಯಾಂಡಲ್ ಹಚ್ಚಿ ಮೆರವಣಿಗೆಯಲ್ಲಿ ಸಾಗಿ ಬಂದು ಚರ್ಚ್‌ನ ಪ್ರಧಾನ ಸ್ಥಳದಲ್ಲಿ ಪ್ರತಿಷ್ಠಾಪಿಸಿದ ಬಳಿಕ ಹಳೇ ಹಾಗೂ ಹೊಸ ಒಡಂಬಡಿಕೆಯ ಆಯ್ದ ಭಾಗಗಳ ವಾಚನ ಮಾಡಲಾಯಿತು. ಬಲಿಪೂಜೆಯ ಬಳಿಕ ಭಾಗವಹಿಸಿದ ಕ್ರೆಸ್ತ ಬಾಂಧವರು ಈಸ್ಟರ್ ಹಬ್ಬದ ಶುಭಾಶಯ ಕೋರಿ ಸಂಭ್ರಮಿಸಿದರು.

ಸಂವಿಧಾನದ ಕೊಂಕಣಿ ಭಾಷಾಂತರ ಕೃತಿ ಬಿಡುಗಡೆ: ಮಂಗಳೂರಿನ ರೊಜಾರಿಯೊ ಕೆಥೆಡ್ರಲ್‌ನಲ್ಲಿ ಈಸ್ಟರ್ ಬಲಿಪೂಜೆ ಬಳಿಕ ಭಾರತದ ಸಂವಿಧಾನದ ಕೊಂಕಣಿ ಭಾಷಾಂತರ ಕೃತಿಯನ್ನು ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಬಿಡುಗಡೆ ಮಾಡಿದರು. ಸಂವಿಧಾನವನ್ನು ಕೊಂಕಣಿಗೆ ಭಾಷಾಂತರಿಸಿದ ಪುತ್ತೂರು ಸರ್ಕಾರಿ ಮಹಿಳಾ ಕಾಲೇಜು ಪ್ರಾಂಶುಪಾಲ ಪ್ರೊ.ಸ್ಟೀನ್ ಕ್ವಾಡ್ರಸ್ ಪೆರ್ಮುದೆ ಮತ್ತವರ ಪತ್ನಿ ಗ್ಲ್ಯಾಡಿಸ್ ಕ್ವಾಡ್ರಸ್, ಕೃತಿಯನ್ನು ಪ್ರಕಟಿಸಿದ ಮಂಗಳೂರು ಧರ್ಮಪ್ರಾಂತದ ಶ್ರೀಸಾಮಾನ್ಯರ ಆಯೋಗ ನಿರ್ದೇಶಕ ಜೆ.ಬಿ. ಕ್ರಾಸ್ತಾ, ಸದಸ್ಯ ಸುಶಿಲ್ ನೊರೋನ್ಹಾ ಉಪಸ್ಥಿತರಿದ್ದರು.

ಈ ಗ್ರಂಥ ಭಾರತದ ಪ್ರಜೆಗಳಾಗಿ ನಾವು ನಿರ್ವಹಿಸಬೇಕಾದ ಜವಾಬ್ದಾರಿ ಮತ್ತು ನಮಗಿರುವ ಹಕ್ಕುಗಳನ್ನು ತಿಳಿದುಕೊಳ್ಳಲು ಜನ ಸಾಮಾನ್ಯರಿಗೆ ನೆರವಾಗಲಿದೆ. ಅಜ್ಞಾನದಿಂದ ಜ್ಞಾನದ ಕಡೆಗೆ, ಕತ್ತಲೆಯಿಂದ ಬೆಳಕಿನ ಕಡೆಗೆ ಸಾಗಿ ಸನ್ಮಾರ್ಗದಲ್ಲಿ ನಡೆಯಲು ಇದರಿಂದ ಪ್ರಯೋಜನ ಆಗಲಿ ಎಂದು ಬಿಷಪ್ ಪೀಟರ್ ಪಾವ್ಲ್ ಸಲ್ದಾನ್ಹಾ ಹಾರೈಸಿದರು.

Leave a Reply

Your email address will not be published. Required fields are marked *