ಭೂಕಂಪನಕ್ಕೆ 25 ವರ್ಷ

ವಿಜಯವಾಣಿ ಸುದ್ದಿಜಾಲ ಉಮದಿ

ಸಮೃದ್ಧ ಫಸಲು, ನದಿ ತೀರದ ಹಚ್ಚು ಹಸಿರಾಗಿದ್ದ ತೋಟಗಳು, ಸಂತೋಷದಿಂದ ಜೀವನ ಸಾಗಿಸುತ್ತಿರುವ ಜನ. ಇದು 25 ವರ್ಷಗಳ ಹಿಂದೆ ಭೂಕಂಪನ ಸಂಭವಿಸುವುದಕ್ಕಿಂತ ಮೊದಲಿದ್ದ ಖಿಲಾರಿ ಗ್ರಾಮದ ಚಿತ್ರಣ.

ಆದರೆ, ಕ್ಷಣಾರ್ಧದಲ್ಲಿ ಇಡೀ ಊರಿಗೆ ಊರು ನೆಲಸಮಗೊಂಡು 10 ಸಾವಿರಕ್ಕೂ ಹೆಚ್ಚು ಜನರು ಬಲಿಯಾಗಿ, 50 ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡು, ಲಕ್ಷಾಂತರ ಜನ ಬದುಕು ಕಸಿದುಕೊಂಡಿದ್ದ ಭೂಕಂಪನಕ್ಕೆ 1993 ಸೆ.30ಕ್ಕೆ ಬರೋಬ್ಬರಿ 25 ವರ್ಷಗಳು ತುಂಬಿವೆ.

ಅಂದು ಬೆಳಗಿನ ಜಾವ 3.56ಕ್ಕೆ 6.3 ರಿಕ್ಟರ್​ದಷ್ಟು ಭಯಾನಕ ಭೂಕಂಪನ ಇಡೀ ಖಿಲಾರಿ ಗ್ರಾಮದ ಚಿತ್ರಣವನ್ನೆ ಬುಡಮೇಲು ಮಾಡುವ ಜತೆಗೆ ಕುಟುಂಬದ ಆಧಾರವಾದ ಅನೇಕರನ್ನು ಬಲಿ ತೆಗೆದುಕೊಳ್ಳುವ ಮೂಲಕ ಸಾವಿರಾರು ಜನರನ್ನು ಬೀದಿಗೆ ತಂದಿತು. ಖಿಲಾರಿ ಗ್ರಾಮ ಒಂದರಲ್ಲೆ 145 ಕ್ಕೂ ಅಧಿಕ ಮಕ್ಕಳು ಇಡೀ ಕುಟುಂಬವನ್ನು ಕಳೆದುಕೊಳ್ಳುವ ಮೂಲಕ ಅನಾಥರಾದರು.

ಮಹಾರಾಷ್ಟ್ರ ಸರ್ಕಾರ ಭೂಕಂಪನ ಪೀಡಿತ ಪ್ರದೇಶದಿಂದ ಸ್ವಲ್ಪ ದೂರದಲ್ಲಿ ಪುನರ್ವಸತಿ ಕೇಂದ್ರ ನಿರ್ಮಾಣ ಮಾಡಿತು. ಉಮರಗಾ ತಾಲೂಕಿನ 10 ಗ್ರಾಮಗಳಿಗಾಗಿ 26.322, ಲೋಹಾರ ತಾಲೂಕಿನ 19 ಗ್ರಾಮಗಳಿಗಾಗಿ 41.918 ಹೆಕ್ಟೇರ್ ಜಮೀನು ನೀಡಿತಾದರೂ ಪುನರ್ವಸತಿ ಕೇಂದ್ರಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ನೀಡಲು ಸರ್ಕಾರ ವಿಫಲವಾಗಿರುವ ಬಗ್ಗೆ ನಿರಾಶ್ರಿತರಲ್ಲಿ ಬೇಸರ ಕಂಡುಬರುತ್ತಿದೆ.