ಕನ್ನಡದ “ಗೆಳೆಯ’ ಚಿತ್ರದಲ್ಲಿ “ನನ್ನ ಸ್ಮೈಲು ಬೇರೇನೇ’ ಎಂದು ನಾಯಕ ಪ್ರಜ್ವಲ್ ದೇವರಾಜ್ ಜತೆ ಕುಣಿದು ಕುಪ್ಪಳಿಸಿದ್ದ ರಾಖಿ ಸಾವಂತ್, ಬಾಲಿವುಡ್ನಲ್ಲಿ ಸ್ಪೆಷಲ್ ಸಾಂಗ್ಗಳಿಂದಲೇ ಹೆಚ್ಚು ಸದ್ದು ಮಾಡಿದವರು. ಅದಕ್ಕೂ ಹೆಚ್ಚು ವಿವಾದಗಳಿಂದ ಸುದ್ದಿ ಮಾಡುತ್ತಿರುತ್ತಾರೆ. ಇಂತಹ ರಾಖಿ ಇದೀಗ ಪಾಕಿಸ್ತಾನದ ನಟ, ಪೊಲೀಸ್ ಅಧಿಕಾರಿ ದೋಡಿ ಖಾನ್ ಜತೆ ಮೂರನೇ ಮದುವೆಯಾಗಲಿದ್ದಾರಂತೆ.
ಈ ಬಗ್ಗೆ ಖುದ್ದು ಅವರೇ, “ಭಾರತೀಯರು ಮತ್ತು ಪಾಕಿಸ್ತಾನಿಯರು ಒಬ್ಬರಿಲ್ಲದೆ, ಇನ್ನೊಬ್ಬರಿಲ್ಲ. ನನಗೆ ಪಾಕಿಸ್ತಾನಿಯರು ಅಂದರೆ ಪ್ರೀತಿ. ನನಗೆ ಅಲ್ಲಿ ಹಲವು ಅಭಿಮಾನಿಗಳಿದ್ದಾರೆ. ಪಾಕಿಸ್ತಾನದಲ್ಲಿ ಇಸ್ಲಾಂ ಸಂಪ್ರದಾಯದಂತೆ ನಿಖಾ, ಭಾರತದಲ್ಲಿ ಆರತಕ್ಷತೆ, ಬಳಿಕ ಯೂರೋಪ್ಗೆ ಹನಿಮೂನ್ಗೆ ಹೋಗಲಿದ್ದೇವೆ. ನಂತರ ಇಬ್ಬರೂ ದುಬೈನಲ್ಲಿ ಸೆಟಲ್ ಆಗಲಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ.
ಅಂದಹಾಗೆ 2019ರಲ್ಲಿ ರಿತೇಶ್ ರಾಜ್ ಸಿಂಗ್ರನ್ನು ಮದುವೆಯಾಗಿದ್ದ ರಾಖಿ, 2022ರಲ್ಲಿ ಅವರಿಂದ ವಿಚ್ಛೇದನ ಪಡೆದಿದ್ದರು. ನಂತರ ಮೈಸೂರು ಮೂಲದ ಆದಿಲ್ ಖಾನ್ ದುರಾನಿ ಜತೆ ಮದುವೆಯಾದ ರಾಖಿ, 2023ರಲ್ಲಿ ಅವರಿಂದಲೂ ದೂರವಾಗಿದ್ದರು. ಇದೀಗ 46 ವರ್ಷದ ರಾಖಿ ಸಾವಂತ್ ಮೂರನೇ ಮದುವೆಯ ಸಿದ್ಧತೆಯಲ್ಲಿದ್ದಾರೆ.