ಶಿಕ್ಷಕರ ಬೇಸಿಗೆ ರಜೆಗೆ ಕತ್ತರಿ

>

ಅನ್ಸಾರ್ ಇನೋಳಿ ಉಳ್ಳಾಲ
ಏಪ್ರಿಲ್ ಬಂತೆಂದರೆ ಮಕ್ಕಳು, ಶಿಕ್ಷಕರಿಗೆ ಖುಷಿಯೋ ಖುಷಿ. ಈ ಅವಧಿಯಲ್ಲಿ ಬೇಸಿಗೆ ಇದ್ದೇ ಇರುತ್ತದೆ. ಆದರೆ ಈ ಬಾರಿ ಬೇಸಿಗೆ ರಜೆಯಲ್ಲೇ ಲೋಕಸಭಾ ಚುನಾವಣೆ ಎದುರಾಗಿದ್ದು, ಇದರ ಪರಿಣಾಮ ಶಿಕ್ಷಕರ ರಜೆ ಕಡಿತಗೊಳ್ಳುವಂತಾಗಿದೆ.
ಈ ಬಾರಿ ಏಪ್ರಿಲ್‌ನಲ್ಲಿ ಲೋಕಸಭಾ ಚುನಾವಣೆ ಎದುರಾಗಿರುವುದರಿಂದ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಹಿಂದೆಂಗಿಂತಲೂ ಬೇಗ ನಡೆಯಲಿದೆ. ಅದರಂತೆ ಸೋಮವಾರ ಮೌಲ್ಯಮಾಪನ ಆರಂಭಗೊಳ್ಳಲಿದ್ದು, ಒಂದು ವಾರ ನಡೆಯಲಿದೆ. ಇದಾದ ತಕ್ಷಣ ಶಿಕ್ಷಕರು ಚುನಾವಣಾ ಕರ್ತವ್ಯಕ್ಕೆ ಸಿದ್ಧರಾಗಬೇಕಿದ್ದು, ರಜೆ ಎನ್ನುವುದು ಏನಿದ್ದರೂ ಚುನಾವಣೆ ಮುಗಿದ ಬಳಿಕ ಎನ್ನುವಂತಾಗಿದೆ.

ಮುಸ್ಲಿಂ ಶಿಕ್ಷಕರಿಗೆ ಇಕ್ಕಟ್ಟು!: ಮುಸ್ಲಿಂ ಸಮುದಾಯದ ಶಿಕ್ಷಕರು ಈ ಬಾರಿ ಇಕ್ಕಟ್ಟಿಗೆ ಸಿಲುಕಲಿದ್ದಾರೆ. ಲೋಕಸಭಾ ಚುನಾವಣೆ ಒಂದು ತಿಂಗಳ ರಜೆ ಶಿಕ್ಷಕರಿಗೆ ಇದೆಯಾದರೂ ಈ ವರ್ಷ ಮೇ ತಿಂಗಳ 5 ಅಥವಾ 6ರಂದು ರಂಝಾನ್ ಆರಂಭಗೊಳ್ಳಲಿದೆ. ಕಡು ಬೇಸಿಗೆಯಲ್ಲಿ ರಂಝಾನ್ ಬರಲಿದ್ದು, ವ್ರತಾಚರಣೆ ಕಠಿಣವಾಗಿರುವುದರಿಂದ ಮುಸ್ಲಿಂ ಶಿಕ್ಷಕರು ಪ್ರವಾಸ ಅಥವಾ ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಕಷ್ಟ ಎನಿಸಲಿದೆ. ಇದನ್ನು ಗಮನಿಸಿದಾಗ ಮುಸ್ಲಿಂ ಶಿಕ್ಷಕರು ಹತ್ತಿಪ್ಪತ್ತು ದಿನ ಮಾತ್ರ ರಜೆಯ ಸವಿ ಅನುಭವಿಸುವಂತಾಗಿದೆ..

ಚುನಾವಣೆ ಕರ್ತವ್ಯದ ಭಯ ಬೇಡ: ಚುನಾವಣೆ ಸಂದರ್ಭ ಶಿಕ್ಷಕರು ಹಾಗೂ ಇತರ ಇಲಾಖೆ ಸಿಬ್ಬಂದಿಯನ್ನು ಹೊರ ಜಿಲ್ಲೆ ಅಥವಾ ತಾಲೂಕುಗಳಲ್ಲಿ ಕರ್ತವ್ಯಕ್ಕೆ ನೇಮಿಸಲಾಗುತ್ತದೆ. ಚುನಾವಣೆಗೆ ಮುನ್ನಾದಿನ ಸಿಬ್ಬಂದಿಯನ್ನು ಕೊಂಡೊಯ್ಯಲು ವಾಹನದ ವ್ಯವಸ್ಥೆ ಮಾಡಲಾಗುತ್ತಿದ್ದು, ಕರ್ತವ್ಯ ಮುಗಿದ ಬಳಿಕ ಹಿಂದಿರುಗಲೂ ವಾಹನ ವ್ಯವಸ್ಥೆ ಇರುತ್ತದೆ. ಆದರೂ ಕೆಲವೊಮ್ಮೆ ಚುನಾವಣೆ ಪ್ರಕ್ರಿಯೆ ತಡವಾಗಿ ಮುಗಿದಾಗ ದೂರದ ಊರಿನಲ್ಲಿರುವ ಮಹಿಳಾ ಸಿಬ್ಬಂದಿಗೆ ಹಿಂದಿರುಗುವ ವ್ಯವಸ್ಥೆಯೂ ಇರುವುದಿಲ್ಲ. ಕಳೆದ ಬಾರಿ ಇಂತಹ ಪರಿಸ್ಥಿತಿ ಎದುರಿಸಿದ್ದು, ಯಾರದ್ದೋ ಕೈಕಾಲು ಹಿಡಿದು ಸಿಕ್ಕ ವಾಹನದಲ್ಲಿ ಮಂಗಳೂರಿಗೆ ಬರುವಾಗ ತಡರಾತ್ರಿಯಾಗಿತ್ತು. ಬಳಿಕ ಸ್ನೇಹಿತೆಯ ಮನೆಯಲ್ಲಿ ಉಳಿದುಕೊಂಡಿದ್ದೆವು ಎನ್ನುವ ಅಳಲನ್ನು ಶಿಕ್ಷಕಿಯೋರ್ವರು ವಿಜಯವಾಣಿ ಜತೆ ವ್ಯಕ್ತಪಡಿಸಿ, ‘ಈ ಬಾರಿ ಯಾವ ಪ್ರದೇಶ ಸಿಗುತ್ತದೋ’ ಎನ್ನುವ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಾರಿ ಅಂತಹ ಪ್ರಸಂಗ ನಡಯದು, ಒಂದು ವೇಳೆ ಎಲ್ಲಿಯಾದರೂ ನಡೆದರೆ ದೂರು ಬಂದಾಕ್ಷಣ ಕ್ರಮ ಕೈಗೊಳ್ಳುವ ಭರವಸೆಯನ್ನು ಜಿಲ್ಲಾಧಿಕಾರಿ ನೀಡಿದ್ದಾರೆ.

ಚುನಾವಣೆ ದಿನ ಕರ್ತವ್ಯ ನಿರತ ಸಿಬ್ಬಂದಿಯನ್ನು ನಿಯೋಜಿತ ಪ್ರದೇಶಕ್ಕೆ ಕರೆದುಕೊಂಡು ಹೋದಂತೆ ಕರೆ ತರುವ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಕರ್ತವ್ಯ ಮುಗಿದ ಬಳಿಕ ಅಲ್ಲೇ ಬಿಟ್ಟಿರುವಂತಹ ದೂರು ಬಂದಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಅಂತಹ ಪ್ರಕರಣದ ದೂರು ಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಶಶಿಕಾಂತ ಸೆಂಥಿಲ್, ಜಿಲ್ಲಾಧಿಕಾರಿ 

ಚುನಾವಣೆ ಐದು ವರ್ಷಕೊಮ್ಮೆ ಬರುವಂತದ್ದು. ಅದಕ್ಕೆ ನಾವೇನು ಮಾಡೋಕಾಗುತ್ತೆ. ಚುನಾವಣಾ ಕೆಲಸ, ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಎನ್ನುವಂತದ್ದು ಶಿಕ್ಷಕ ವೃತ್ತಿಯ ಒಂದು ಭಾಗ. ಇದು ಒಂದೆರೆಡು ದಿನದ ಕೆಲಸ ಮಾತ್ರ.
ವೈ.ಶಿವರಾಮಯ್ಯ, ಶಿಕ್ಷಣ ಇಲಾಖೆ ಉಪನಿರ್ದೇಶಕ 

ಈ ಬಾರಿ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಮತ್ತು ಚುನಾವಣೆ ಜತೆಯಾಗಿಯೇ ಬಂದಿರುವುದರಿಂದ ಶಿಕ್ಷಕರು ಒತ್ತಡಕ್ಕೆ ಸಿಲುಕಿರುವುದು ಸುಳ್ಳಲ್ಲ. ಇದರಿಂದ ರಜೆಯೂ ಕಡಿತಗೊಂಡು ದೂರದ ಊರಿನ ಶಿಕ್ಷಕರು ಸಮಸ್ಯೆ ಎದುರಿಸಲಿದ್ದಾರೆ.
ಆನಂದ ಕೆ.ಅಸೈಗೋಳಿ ನಿವೃತ್ತ ಮುಖ್ಯಶಿಕ್ಷಕ