More

    ನಿಷ್ಪ್ರಯೋಜಕ ಇ-ಟಾಯ್ಲೆಟ್, ನಿರ್ವಹಣೆಯೇ ಇಲ್ಲದೆ ತೆರಿಗೆ ಹಣ ಪೋಲು

    ಮಂಗಳೂರು: ‘ನಾವು ಸ್ವಚ್ಛ ಭಾರತ ಅಭಿಯಾನವನ್ನು ದೊಡ್ಡ ರೀತಿಯಲ್ಲಿ ಮಾಡೋಣ, ನಾವು ಮಂಗಳೂರನ್ನು ಸ್ವಚ್ಛ ನಗರವಾಗಿ ಪರಿವರ್ತಿಸೋಣ’ ಇದು ಕದ್ರಿಪಾರ್ಕ್ ಇ-ಟಾಯ್ಲೆಟ್ ಹೊರ ಆವರಣದಲ್ಲಿ ಕಂಡು ಬಂದ ಒಂದು ಬರಹ. ನಿಜ ಅರ್ಥದಲ್ಲಿ ಈ ಬರಹಕ್ಕೂ, ಟಾಯ್ಲೆಟ್ ಇರುವ ಸ್ಥಿತಿಗೂ ಹೊಂದಾಣಿಕೆಯೇ ಆಗುತ್ತಿಲ್ಲ. ಸ್ವಚ್ಛತೆಗೆ ಇ-ಟಾಯ್ಲೆಟ್ ಕೊಡುಗೆ ಶೂನ್ಯ ಎನ್ನಬಹುದು.

    ಎರಡು ವರ್ಷದ ಹಿಂದೆ ಅವಳವಡಿಸಲಾಗಿರುವ ಟಾಯ್ಲೆಟ್‌ಗಳಲ್ಲಿ ಇಂದು ಒಂದು ಕೂಡಾ ಉಪಯೋಗ ಮಾಡುವ ಸ್ಥಿತಿಯಲ್ಲಿ ಇಲ್ಲ. ಕೆಲವು ಟಾಯ್ಲೆಟ್‌ಗಳಲ್ಲಿ ಅಕಸ್ಮಾತ್ ಯಾರಾದರೂ ಒಳಗೆ ಹೋದರೆ ಹೊರಗೆ ಬರಲು ಬಾಗಿಲು ಒಡೆಯಬೇಕಾದ ಸ್ಥಿತಿಯಿದೆ. ಒಂದು ಟಾಯ್ಲೆಟ್‌ಗೆ ಅಂದಾಜು 7 ಲಕ್ಷ ರೂ. ವೆಚ್ಚವಾಗಿದ್ದು, ಕೆಲವನ್ನು ಖಾಸಗಿ ಸಂಸ್ಥೆಯವರು ತಮ್ಮ ಸಿಎಸ್‌ಆರ್ ಅನುದಾನದಡಿ ಒದಗಿಸಿದ್ದರೆ, ಇನ್ನುಳಿದವು 14ನೇ ಹಣಕಾಸು ಯೋಜನೆಯಲ್ಲಿ ಪಾಲಿಕೆಯಿಂದಲೇ ನಿರ್ಮಾಣವಾಗಿದೆ. ಸಾರ್ವಜನಿಕರ ತೆರಿಗೆ ಹಣವನ್ನು ಯಾವ ರೀತಿಯಲ್ಲಿ ಪೋಲು ಮಾಡಬಹುದು ಎನ್ನುವುದಕ್ಕೆ ನಗರದ ವಿವಿಧಡೆ ಅಳವಡಿಸಲಾಗಿರುವ ಇ-ಟಾಯ್ಲೆಟ್ ಉದಾಹರಣೆ ಎನ್ನುತ್ತಾರೆ ಸ್ಥಳೀಯರು.

    ಆಧುನಿಕ ವ್ಯವಸ್ಥೆ: ಪಾಲಿಕೆಯ ಹಿಂದಿನ ಆಡಳಿತ ಅವಧಿಯಲ್ಲಿ ಇ-ಟಾಯ್ಲೆಟ್ ಲೋಕಾರ್ಪಣೆಗೊಳಿಸಲಾಗಿತ್ತು. ಆರಂಭಿಕ ಕೆಲವು ತಿಂಗಳು ಜನರೂ ಉಪಯೋಗಿಸಿದರು, ನಿರ್ವಹಣೆಯೂ ಚೆನ್ನಾಗಿಯೇ ಆಗುತಿತ್ತು. ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುವುದರಿಂದ ಒಂದು, ಎರಡು ಅಥವಾ 5 ರೂ. ನಾಣ್ಯ ಹಾಕಿದರೆ ಮಾತ್ರ ಬಾಗಿಲು ತೆರೆದುಕೊಳ್ಳುವುದು. ಉಯೋಗಿಸಿದ ಬಳಿಕ ನೀರು ಕೂಡಾ ತಾನಾಗಿಯೇ ಫ್ಲಶ್ ಅಗುವುದು, ಕೈತೊಳೆಯಲು ಸಣ್ಣ ಟ್ಯಾಪ್, ಒಳಗೆ ಯಾರಾದರೂ ಇದ್ದರೆ ಹೊರಗೆ ಕೆಂಪು ಲೈಟ್ ಬೆಳಗುವುದು ಮೊದಲಾದ ಆಧುನಿಕ ವ್ಯವಸ್ಥೆಯನ್ನು ಶೌಚಗೃಹ ಒಳಗೊಂಡಿತ್ತು. ಪ್ರಸ್ತುತ ನಿರ್ವಹಣೆ ಇಲ್ಲದೆ, ಕಳ್ಳರು, ಕಿಡಿಗೇಡಿಗಳ ಕೈಗೆ ಸಿಕ್ಕು ಇವೆಲ್ಲ ಹಾಳಾಗಿದೆ.

    ಪ್ರಸ್ತುತ ಹೇಗಿದೆ?: ಪಾಲಿಕೆಯ ಕೂಗಳತೆ ದೂರದಲ್ಲಿರುವ ಲಾಲ್‌ಭಾಗ್‌ನ ಎರಡು ಇ-ಟಾಯ್ಲೆಟ್‌ಗಳ ಸೆನ್ಸಾರ್ ಹಾಳಾಗಿದ್ದು, ಕೆಂಪು-ಹಸಿರು ಸೂಚನೆ ದೀಪ ಬೆಳಗುವುದಿಲ್ಲ. ನಾಣ್ಯ ಹಾಕದೇ ಬಾಗಿಲು ತೆರೆಯಬಹುದಾಗಿದ್ದು, ಟ್ಯಾಂಕ್‌ನಲ್ಲಿ ನೀರಿಲ್ಲ. ಕದ್ರಿ ಪಾರ್ಕ್‌ನಲ್ಲಿ ಎರಡು ಶೌಚ ಗೃಹಗಳಿದ್ದು, ಒಂದರಲ್ಲಿ ನಾಣ್ಯಗಳು ತುಂಬಲು ಇರುವ ಟ್ರೇ, ಇನ್ನೊಂದರಲ್ಲಿ ಜಂಕ್ಷನ್ ಬಾಕ್ಸ್‌ಗೆ ಅಳವಡಿಸಲಾಗಿದ್ದ ವಿದ್ಯುತ್ ಮೀಟರ್ ಮಾಯವಾಗಿದೆ. ಬಾಗಿಲು ಲಾಕ್ ಆಗಿದ್ದು, ತೆಗೆಯಲಾಗುತ್ತಿಲ್ಲ. ಇಲ್ಲೂ ದೀಪ ಆಫ್ ಆಗಿದೆ. ವೆಲೆನ್ಸಿಯಾದಲ್ಲಿ ಸಾರ್ವಜನಿಕ ಶೌಚಗೃಹದ ಮುಂಭಾಗದಲ್ಲೇ ಇದ್ದು, ಒಳಹೋಗಲು ಪ್ರಾಯಾಸ ಪಡಬೇಕಾಗಿದೆ. ಮಹಿಳೆಯರಿಗಂತೂ ಹೋಗಲು ಸಾಧ್ಯವೇ ಇಲ್ಲ. ಆರಂಭದಿಂದಲೂ ಯಾರೂ ಬಳಸಿಲ್ಲ ಎನ್ನುತ್ತಾರೆ ಸ್ಥಳೀಯರು. ಎಕ್ಕೂರಿನಲ್ಲಿ ಜನವಸತಿ ಪ್ರದೇಶದಲ್ಲಿ ಇ-ಟಾಯ್ಲೆಟ್ ಅಳವಡಿಸಲಾಗಿದ್ದು, ಕಾಯಿನ್ ಹಾಕಿದರೂ ಬಾಗಿಲು ತೆರೆಯುವುದಿಲ್ಲ. ಅಲ್ಲೇ ಪಕ್ಕದ ಮೈದಾನದ ಬಳಿ ಇನ್ನೊಂದು ಶೌಚಗೃಹವಿದ್ದು, ಅದೂ ಸಮಸ್ಯೆಯಿಂದ ಹೊರತಾಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts