ಇ-ಸ್ವತ್ತು ಸೊಸೈಟಿ ವ್ಯವಹಾರಕ್ಕೂ ಆಪತ್ತು; ಸಾಲ ಪಡೆಯಲು ಜನರ ಪರದಾಟ, ಕೋಟ್ಯಂತರ ರೂಪಾಯಿ ನಷ್ಟ

E Khata

ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ರಾಜ್ಯದಲ್ಲಿ ಉಂಟಾಗಿರುವ ಇ-ಖಾತಾ ಬಿಕ್ಕಟ್ಟು ಈಗ ಸಹಕಾರ ಸಂಘಗಳ ವ್ಯವಹಾರದ ಮೇಲೂ ಅಡ್ಡಪರಿಣಾಮ ಬೀರಲಾರಂಭಿಸಿದೆ. ಸಹಕಾರ ಸಂಘಗಳ ಮೂಲಕ ಗೃಹ ಸಾಲ, ನಿವೇಶನ ಸಾಲ ಪಡೆದುಕೊಳ್ಳುವುದಕ್ಕೂ ಜನರು ಹರಸಾಹಸ ಪಡುವಂತಾಗಿದೆ. ರಾಜ್ಯದ ಉದ್ದಗಲಕ್ಕೂ ಸಹಕಾರ ಸಂಘಗಳು ಅಸಮಾಧಾನ ತೋಡಿಕೊಳ್ಳಲಾರಂಭಿಸಿದ್ದು, ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಜನಪ್ರತಿನಿಧಿಗಳನ್ನು ಒತ್ತಾಯಿಸುತ್ತಿದ್ದಾರೆ.

ಭೂಮಿ ಮತ್ತು ಆಸ್ತಿ ವ್ಯವಹಾರಗಳಲ್ಲಿನ ಮೋಸ ತಡೆಗಟ್ಟಲು ಸರ್ಕಾರ ಕೇಂದ್ರೀಕೃತ ಇ-ಖಾತೆ ವ್ಯವಸ್ಥೆ ಜಾರಿಗೆ ತಂದಿದೆ. ಗ್ರಾಮೀಣ ಭಾಗದಲ್ಲಿ ಇ-ಸ್ವತ್ತು ಹಾಗೂ ನಗರ ಪ್ರದೇಶದಲ್ಲಿ ಇ-ಆಸ್ತಿ ಕೇಂದ್ರೀಕೃತ ತಂತ್ರಾಂಶ ಆಧಾರಿತ ವ್ಯವಸ್ಥೆ ಬಂದಿದೆ. ಗ್ರಾಮೀಣ ಪ್ರದೇಶದಲ್ಲಿ ಆಸ್ತಿ ನೋಂದಣಿಗೆ ಗ್ರಾಮ ಪಂಚಾಯತಿಯಿಂದ ಪಡೆದ ನಮೂನೆ 9 ಹಾಗೂ ನಮೂನೆ 11 ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ನಗರ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಯಿಂದಲೂ ಡಿಜಿಟಲ್ ದಾಖಲೆಯನ್ನೇ ತರಬೇಕಾಗುತ್ತದೆ. ಕೈ ಬರಹದ ಮೂಲಕ ನೀಡುವ ಹಾಗೂ ಹಳೆ ಮಾದರಿಯ ನಮೂನೆ 9 ಹಾಗೂ ನಮೂನೆ 11 ಬಳಕೆ ರದ್ದುಗೊಳಿಸಲಾಗಿದೆ. ಆಸ್ತಿಯನ್ನು ಮಾರುವಾಗ ಅಥವಾ ಕೊಳ್ಳುವಾಗ ಡಿಜಿಟಲ್ ದಾಖಲೆ (ಇ-ಸ್ವತ್ತು ಅಥವಾ ಇ-ಆಸ್ತಿ) ಕಡ್ಡಾಯಗೊಳಿಸಲಾಗಿದೆ. ಅಂದರೆ ಕಂದಾಯ ಇಲಾಖೆ ಅಧೀನದಲ್ಲಿ ಬರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ನೋಂದಣಿ ಪ್ರಕ್ರಿಯೆಯಲ್ಲಿ ಇ- ಖಾತೆ ದಾಖಲೆ ಹಾಜರುಪಡಿಸಿದರಷ್ಟೇ ನೋಂದಣಿ ಪ್ರಕ್ರಿಯೆ ಮುಂದುವರಿಸುತ್ತದೆ. ಆದರೆ ಇ- ಖಾತೆ ನೀಡುವ ವ್ಯವಸ್ಥೆ ಸ್ಥಳೀಯ ಸಂಸ್ಥೆಗಳಲ್ಲಿ ಬಹಳ ಮಂದಗತಿಯಲ್ಲಿದೆ. ದಾಖಲೀಕರಣ ಮತ್ತು ಸೂಕ್ತ ವ್ಯವಸ್ಥೆಗಳು ಇಲ್ಲ.

ಸೊಸೈಟಿಗಳ ಮೇಲೆ ಪರಿಣಾಮ ಏನು?: ರಾಷ್ಟ್ರೀಕೃತ, ಖಾಸಗಿ ಬ್ಯಾಂಕುಗಳಂತೆ ಸಹಕಾರ ಬ್ಯಾಂಕುಗಳು ಮತ್ತು ಕ್ರೆಡಿಟ್ ಸೊಸೈಟಿಗಳು ಹಾಗೂ ಸಾಲಕ್ಕಾಗಿ ಆಧಾರ ಮಾಡುವ ಸ್ಥಿರಾಸ್ತಿ ದಾಖಲೆಗಳ ಡಿಟಿಡಿ (ಡಿಪಾಸಿಟ್ ಆಫ್ ಟೈಟಲ್ ಡೀಡ್)ನ್ನು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳಲಾಗುತ್ತಿತ್ತು. ಅಂದರೆ ಆಸ್ತಿ ದಾಖಲೆಯಲ್ಲಿ ಸಾಲದ ಅಡಮಾನದ ಮಾಹಿತಿ ಉಲ್ಲೇಖಿಸುವ ವ್ಯವಸ್ಥೆ ಇದು. ಆದರೆ, ಸರ್ಕಾರ ಈಗ ಇ-ಖಾತ ಕಡ್ಡಾಯ ಮಾಡಿದ್ದು, ಇ-ಖಾತೆ ನೀಡದಿದ್ದಲ್ಲಿ ಡಿಟಿಡಿಯನ್ನು ನೋಂದಣಿ ಮಾಡುತ್ತಿಲ್ಲ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಎಲ್ಲಾ ಆಸ್ತಿಗಳು ಇನ್ನೂ ಪೂರ್ತಿ ಇ-ಖಾತೆ ಆಗಿಲ್ಲ. ಇತ್ತ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಇ- ಖಾತೆಯನ್ನು ಬಯಸುತ್ತಿದೆ. ಇ- ಸ್ವತ್ತು ಸಿಗದೇ ಇರುವ ಕಾರಣ ಬ್ಯಾಂಕುಗಳಲ್ಲಿ ಮತ್ತು ಸೊಸೈಟಿಗಳಲ್ಲಿ ಮಂಜೂರಾದ ಸಾಲಗಳನ್ನು ಸಕಾಲದಲ್ಲಿ ಬ್ಯಾಂಕಿನ ಗ್ರಾಹಕರು ಬಿಡುಗಡೆ ಮಾಡಿಸಿಕೊಳ್ಳುತ್ತಿಲ್ಲ. ಇನ್ನೊಂದೆಡೆ ಬ್ಯಾಂಕುಗಳ, ಕ್ರೆಡಿಟ್ ಸೊಸೈಟಿಗಳ ಅದರಲ್ಲೂ ಪಟ್ಟಣ ಸಹಕಾರ ಬ್ಯಾಂಕುಗಳ ದಿನನಿತ್ಯದ ಚಟುವಟಿಕೆಗಳು ತುಂಬಾ ಕುಂಠಿತವಾಗುತ್ತಿದೆ. ದೈನಂದಿನ ವ್ಯವಹಾರಗಳಲ್ಲಿ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ. ಸ್ಥಿರಾಸ್ತಿಗಳನ್ನು ಅಡಮಾನ ಮಾಡಿ ತೆಗೆದುಕೊಳ್ಳುವ ಸಾಲಗಳು ಸಕಾಲಕ್ಕೆ ಉಪಯೋಗಕ್ಕೆ ಬಾರದೆ ಗ್ರಾಹಕರು ಪರಿತಪಿಸುವಂತೆಯೂ ಆಗಿದೆ.

ಸೊಸೈಟಿಗಳ ವಾದವೇನು?: ಬ್ಯಾಂಕುಗಳು, ಸೊಸೈಟಿಗಳು ಸಾಲ ನೀಡುವಾಗ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನದಂತೆ ಅನ್ವಯಿಸುವ ಡೆಪಾಸಿಟ್ ಆಫ್ ಟೈಟಲ್ ಡೀಡ್ (ಡಿಟಿಡಿ ) ಪ್ರಕ್ರಿಯೆಗಳಿಗೆ ಯಾವುದೇ ರೀತಿಯ ಅಡಚಣೆಯಾಗದಂತೆ ಕ್ರಮವಹಿಸಲು ಸರ್ಕಾರ ಉಪನೋಂದಣಾಧಿಕಾರಿಗಳ ಕಚೇರಿಗೆ ಸೂಕ್ತ ಮಾರ್ಗದರ್ಶನ ನೀಡುವ ಅವಶ್ಯಕತೆ ಇದೆ ಎಂಬುದು ಸಹಕಾರ ಸಂಘಗಳ ಒತ್ತಾಯವಾಗಿದೆ. ಆಸ್ತಿಗಳ ನೋಂದಣಿ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಮತ್ತು ಮೋಸ- ವಂಚನೆ ತಡೆಗಟ್ಟುವಲ್ಲಿ ಸರ್ಕಾರ ತೆಗೆದುಕೊಳ್ಳುವ ಯಾವುದೇ ಉಪಕ್ರಮಗಳಿಗೆ ವಿರೋಧವಿಲ್ಲ. ಆದರೆ ಯಾವುದೇ ಪೂರ್ವ ತಯಾರಿಯಿಲ್ಲದೆ ಕಂದಾಯ ಇಲಾಖೆ ಅಧಿಕಾರಿಗಳು ತೆಗೆದುಕೊಂಡಿರುವ ತೀರ್ವನದಿಂದ ಪ್ರತಿನಿತ್ಯ ಸಾವಿರಾರು ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಸಹಕಾರ ಸಂಘಗಳ ಆರ್ಥಿಕ ಪರಿಸ್ಥಿತಿ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಬೆಂಗಳೂರು ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಎಂ.ಆರ್.ವೆಂಕಟೇಶ್ ವಿವರಿಸುತ್ತಾರೆ.

ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮತ್ತು ಸಹಕಾರ ಬ್ಯಾಂಕುಗಳು ಹಾಗೂ ಕ್ರೆಡಿಟ್ ಸೊಸೈಟಿಗಳು ಎದುರಿಸುತ್ತಿರುವ ಸಮಸ್ಯೆಯ ಗಂಭೀರತೆಯನ್ನು ಅರಿತು ಕೂಡಲೇ ಸರ್ಕಾರ ಕ್ರಮವಹಿಸಲಿ. ಡಿಟಿಡಿ ನೋಂದಣಿ ಕಾರ್ಯವನ್ನು ಜಾರಿಗೊಳಿಸಲಿ.

| ಎಂ.ಆರ್.ವೆಂಕಟೇಶ್, ಬೆಂಗಳೂರು ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ

 

ಜನರಿಗೆ ಒಂದಷ್ಟು ಸಮಸ್ಯೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಸರ್ಕಾರದ ಮಟ್ಟದಲ್ಲಿ ಇದನ್ನು ಗಮನಕ್ಕೆ ತರಲಾಗುವುದು. ತಕ್ಷಣದ ಪರಿಹಾರವಾಗಿ ಸರ್ಕಾರ ಗಡುವು ವಿಸ್ತರಿಸಬೇಕಾಗುತ್ತದೆ. ಉದ್ದೇಶ ಒಳ್ಳೆಯದೇ ಆದರೂ ಏಕಾಏಕಿ ಜಾರಿಯಿಂದ ಸಮಸ್ಯೆಯಾಗುತ್ತಿದೆ.

| ಎಸ್.ಎನ್. ಚನ್ನಬಸಪ್ಪ ಶಾಸಕ

ಪಾಕ್​ಗೆ ತೆರಳಲು ಅನುಮತಿ ನೀಡದ ಕೇಂದ್ರ ಸರ್ಕಾರ; ಹೈಬ್ರಿಡ್​ ಮಾದರಿಯಲ್ಲಿ Champions Trophy?

ಉಸಿರಿರುವವರೆಗೂ Darshan ನನ್ನ ಮಗ, ಅದು ಎಂದಿಗೂ ಬದಲಾಗಲ್ಲ: ಸುಮಲತಾ ಅಂಬರೀಷ್​

 

Share This Article

2025ರಲ್ಲಿ ಈ 3 ರಾಶಿಯವರಿಗೆ ರಾಜಯೋಗ!? ಅನೇಕ ರೀತಿಯಲ್ಲಿ ಹಣದ ಹರಿವು, ಐಷಾರಾಮಿ ಜೀವನ | Royal Life

Royal Life : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ…

ಜೇನುತುಪ್ಪ ಜತೆ ಹುರಿದ ಶುಂಠಿ ತಿಂದರೆ ಗಂಟಲು ನೋವು ಮಾಯಾ! ಹೀಗಿವೆ ಪ್ರಯೋಜನಗಳು

ಬೆಂಗಳೂರು: ಜೇನುತುಪ್ಪ ಮತ್ತು ಶುಂಠಿ ಆರೋಗ್ಯಕ್ಕೆ ತುಂಬಾ ಪ್ರಯೋಜನ ಎಂಬ ವಿಷಯ ಬಹುತೇಕರಿಗೆ ತಿಳಿದಿದೆ. ಈ…

ಸಾಮಾನ್ಯವಾಗಿ ಮಾಡುವ ಈ ತಪ್ಪುಗಳಿಂದಲೇ ಲೈಂಗಿಕ ಜೀವನದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತೆ ಎಚ್ಚರ! Relationship Tips

Relationship Tips : ಪರಸ್ಪರ ತಿಳುವಳಿಕೆಯುಳ್ಳ ಉತ್ತಮ ಲೈಂಗಿಕ ಜೀವನವು ಸಂತೋಷದ ದಾಂಪತ್ಯಕ್ಕೆ ಕಾರಣವಾಗುತ್ತದೆ. ಲೈಂಗಿಕ…