ಬೆಳಗಾವಿ: ಆಧಾರ್ ಸಂಖ್ಯೆ ಮೂಲಕ ಗ್ರಾಹಕರ ಮಾಹಿತಿ ಪಡೆಯುವ (ಇ-ಕೆವೈಸಿ) ವ್ಯವಸ್ಥೆಗೆ ಸರ್ವರ್ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಸದಸ್ಯರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಕೆವೈಸಿಗೆ ಸರ್ವರ್ ಸಮಸ್ಯೆಯಿಂದ ನ್ಯಾಯಬೆಲೆ ಅಂಗಡಿಕಾರರು ಮತ್ತು ಪಡಿತರ ಚೀಟಿದಾರರು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಕಳೆದ ಎರಡು ವಾರಗಳಿಂದ ಸಮಯಕ್ಕೆ ಸರಿಯಾಗಿ ಪಡಿತರ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ತಕ್ಷಣ ಸರ್ವರ್ ಸಮಸ್ಯೆ ಪರಿಹರಿಸಬೇಕು. ಇಲ್ಲವೇ ಈ ವ್ಯವಸ್ಥೆ ಕೈಬಿಡಬೇಕು ಎಂದು ಆಗ್ರಹಿಸಿದರು.
ಈ ಹೊಸ ವ್ಯವಸ್ಥೆಯಿಂದ ಪಡಿತರದಾರರ ಪ್ರತಿಯೊಬ್ಬರ ಹೆಬ್ಬೆಟ್ಟು ಗುರುತು ಪಡೆದುಕೊಳ್ಳಬೇಕು. ಇದರಿಂದ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದ್ದು, ಒಬ್ಬ ಗ್ರಾಹಕ ಕನಿಷ್ಠ ಒಂದು ಗಂಟೆಯವರೆಗೆ ನ್ಯಾಯಬೆಲೆ ಅಂಗಡಿಗಳ ಮುಂದೆ ಕಾಯಬೇಕು. ಇಲ್ಲದಿದ್ದರೆ ನಿತ್ಯ ಅಂಗಡಿಗಳಿಗೆ ಅಲೆದಾಡುವ ಸಮಸ್ಯೆ ಉದ್ಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಲ್ಕೈದು ತಿಂಗಳಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಕರಿಗೆ ಸರ್ಕಾರ ಕಮಿಷನ್ ನೀಡಿಲ್ಲ. ಸರ್ಕಾರ ಕೂಡಲೇ ಕಮಿಷನ್ ನೀಡಬೇಕು. ಮೇಲಿಂದ ಮೇಲೆ ಸಮಸ್ಯೆ ಉಂಟು ಮಾಡುತ್ತಿರುವ ತಾಂತ್ರಿಕ ತೊಂದರೆ ಪರಿಹರಿಸಬೇಕು ಎಂದು ಮನವಿ ಮೂಲಕ ಆಗ್ರಹಿಸಿದರು. ಸಂಘ ಪದಾಧಿಕಾರಿಗಳಾದ ರಾಜಶೇಖರ ತಳವಾರ, ಬೈರಗೌಡ ಪಾಟೀಲ, ಮಾರುತಿ ಪಾಟೀಲ, ಮಾರುತಿ ಅಂಬೋಳಕರ್, ದಿನೇಶ ಬಾಗಡೆ, ಸರೋಜಾ ದೊಡಮನಿ, ಬಸವರಾಜ ದೊಡಮನಿ, ನಾರಾಯಣ ಕಾಲಕುಂದ್ರಿ, ಸುರೇಶ ರಾಜೂಕರ್, ರಮೇಶ ಪಾಟೀಲ ಇತರರು ಇದ್ದರು.