ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ರಾಜ್ಯದಲ್ಲಿ ಸ್ಥಿರಾಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯ ಮಾಡಿದ ರಾಜ್ಯ ಸರ್ಕಾರ ಡಿಜಿಟಲ್ ಖಾತಾ ವಿತರಣೆಯಲ್ಲಿ ನಿರ್ಲಕ್ಷ್ಯ ತೋರಿದ ಪರಿಣಾಮ ಜನರ ಪರದಾಟ ಮುಂದುವರಿದಿದೆ. ಮತ್ತೊಂದೆಡೆ ನೋಂದಣಿ ಮತ್ತು ಮುದ್ರಾಂಕ ರಾಜಸ್ವ ಸಂಗ್ರಹದಲ್ಲೂ ಶೇ.30 ಇಳಿಕೆ ಆಗಿದೆ. ಅಕ್ಟೋಬರ್‌ನಲ್ಲಿ 1,501 ಕೋಟಿ ರೂ. ಸಂಗ್ರಹವಾದರೆ, ನವೆಂಬರ್‌ನಲ್ಲಿ 1,040 ಕೋಟಿ ರೂ.ಗೆ ಕುಸಿದಿದೆ. ಅಂದರೆ ಒಂದೇ ತಿಂಗಳಲ್ಲಿ ಶೇ.30.7 ಖೋತಾ ಆಗಿದೆ.
ಇ-ಸ್ವತ್ತು, ಇ-ಆಸ್ತಿ ತಂತ್ರಾಂಶದಲ್ಲಿ ಪಡೆದ ಇ-ಖಾತಾ ಇಲ್ಲದೆ ಕೈಬರಹ ಖಾತಾ ಅಥವಾ ಭೌತಿಕ ಖಾತಾ ಮೇರೆಗೆ ಸ್ಥಿರಾಸ್ತಿ ದಸ್ತಾವೇಜುಗಳ ನೋಂದಣಿ ನಡೆಸುವುದಿಲ್ಲ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮಾಡಿದ ಕಡ್ಡಾಯ ನಿಯಮ ನವೆಂಬರ್‌ನಿಂದ ಕಟ್ಟುನಿಟ್ಟಾಗಿ ಜಾರಿಗೆ ಬಂದಿದೆ.
ಬಿಬಿಎಂಪಿ, ನಗರಸಭೆ, ಪುರಸಭೆ ಸೇರಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಆಸ್ತಿಗಳಿಗೆ ಇ-ಆಸ್ತಿ ಸ್‌ಟಾವೇರ್‌ನಲ್ಲಿ ಇ-ಖಾತಾ ಮತ್ತು ಗ್ರಾಪಂ ವ್ಯಾಪ್ತಿಯ ಆಸ್ತಿಗಳಿಗೆ ಇ-ಸ್ವತ್ತಿನಲ್ಲಿ ಡಿಜಿಟಲ್ ಖಾತಾ ಪಡೆಯಬೇಕಿದೆ. ಏಕಾಏಕಿ ಇ-ಖಾತಾ ಕಡ್ಡಾಯ ಮಾಡಿದ ಪರಿಣಾಮ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ದಸ್ತಾವೇಜುಗಳ ನೋಂದಣಿ ಗಣನೀಯವಾಗಿ ಇಳಿಕೆಯಾಗಿದೆ. ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳ ಸಭೆ ಕರೆದು ಪ್ರತಿ ತಿಂಗಳು 2400 ಕೋಟಿ ರೂ. ರಾಜಸ್ವ ಸಂಗ್ರಹಿಸುವಂತೆ ಟಾರ್ಗೆಟ್ ನೀಡಿದ್ದರು. ಆದರೆ, ಅಧಿಕಾರಿಗಳು ಸಾವಿರ ಕೋಟಿ ರೂ. ಸಂಗ್ರಹಕ್ಕೆ ತಿಣುಕಾಡುತ್ತಿದ್ದಾರೆ.
ತಿದ್ದಿಕೊಳ್ಳುತ್ತಿರುವ ಇಲಾಖೆ
ನೋಂದಣಿ ಮತ್ತು ಮುದ್ರಾಂಕ ಇಲಾಖೆ ರಿಜಿಸ್ಟ್ರೇಷನ್‌ನಲ್ಲಿ ಕುಸಿತ ಕಂಡಿರುವ ಪರಿಣಾಮ ಕಾವೇರಿ 2.0ನಲ್ಲಿ ಕೆಲ ಲೋಪಗಳನ್ನು ಪತ್ತೆ ಮಾಡಿ ತಿದ್ದುಪಡಿ ತಂದು ಜನರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಂಡಿದೆ. ಪ್ರಮುಖವಾಗಿ ಉಪಗುತ್ತಿಗೆ ನೋಂದಣಿ ವೇಳೆ ಇ-ಖಾತಾದಿಂದ ಮಾಹಿತಿ ಪಡೆದರೂ ಸ್ವತ್ತಿನ ವಿಸ್ತೀರ್ಣ, ಚೆಕ್ಕುಬಂದಿ ತಿದ್ದುಪಡಿಗೆ ಅವಕಾಶ ನೀಡಿದೆ. ಅಲ್ಲದೆ, ಹೊಸದಾಗಿ ಪರಿತ್ಯಾಜನ ಪತ್ರಗಳ ನೋಂದಣಿ ಸೇವೆಯನ್ನು ಸೇರಿಸಲಾಗಿದೆ. ಇ-ಖಾತಾ ಕಡ್ಡಾಯ ಮಾಡಿದ್ದ ಪರಿಣಾಮ ಆಸ್ತಿ ಮೇಲೆ ಸಾಲ ಪಡೆದು ಹಕ್ಕು ಒತ್ತೆ ಪತ್ರಗಳ (ಡಿಟಿಡಿ) ನೋಂದಣಿಗೆ ತಾಂತ್ರಿಕ ಸಮಸ್ಯೆ ಉಂಟಾಗಿತ್ತು. ಇದೀಗ ಬ್ಯಾಂಕ್ ಹೆಸರಿಗೆ ಡಿಟಿಡಿ ರಿಜಿಸ್ಟ್ರೇಷನ್‌ಗೆ ಮಾಲೀಕರ ಮಾಹಿತಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಇದೇ ರೀತಿಯಾಗಿ ಸಾಕಷ್ಟು ಸಮಸ್ಯೆಗಳು ಜನರಿಗೆ ಎದುರಾಗಿದ್ದು, ಯಾವ ರೀತಿ ಪರಿಹರಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಯಾವ ಇಲಾಖೆ, ಎಷ್ಟು ಪ್ರಗತಿ?
ಸರ್ಕಾರದ ಆದಾಯ ಮೂಲಗಳಾದ ಸ್ವಂತ ತೆರಿಗೆ ಸಂಗ್ರಹಕ್ಕೆ 2024-25ನೇ ಸಾಲಿನಲ್ಲಿ 1,89,893 ಕೋಟಿ ರೂ. ಟಾರ್ಗೆಟ್ ನೀಡಿದ್ದು, ಅಕ್ಟೋಬರ್ ಅಂತ್ಯಕ್ಕೆ 1 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ಅದೇ ರೀತಿಯಾಗಿ ವಾಣಿಜ್ಯ ತೆರಿಗೆ 1,10,000 ಕೋಟಿ ರೂ. ಟಾರ್ಗೆಟ್ ಇದ್ದು, 58,359 ಕೋಟಿ ರೂ. ವಸೂಲಿ ಆಗಿದೆ. ಅಬಕಾರಿಗೆ 38,525 ಕೋಟಿ ರೂ. ಗುರಿ ಇದ್ದು, 20,653 ಕೋಟಿ ರೂ. ಸಂಗ್ರಹವಾಗಿದೆ. ಇನ್ನು ಮುದ್ರಾಂಕ ಮತ್ತು ನೋಂದಣಿ ಇಲಾಖೆಗೆ 26 ಸಾವಿರ ಕೋಟಿ ರೂ. ಗುರಿ ನೀಡಿದ್ದು, 13,799 ಕೋಟಿ ರೂ. ತಲುಪಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಶೇ.26 ಪ್ರಗತಿ ಕಂಡಿದೆ. ನವೆಂಬರ್ ಪರಿಸ್ಥಿತಿ ನೋಡಿದರೆ ಈ ಪ್ರಗತಿ ಕುಸಿಯಲಿದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.
ರಾಜಸ್ವ ಕುಸಿತಕ್ಕೆ ಕಾರಣ?
*ಪೂರ್ವ ಸಿದ್ಧತೆ ಇಲ್ಲದೆ ಇ-ಖಾತಾ ಜಾರಿ
*ಇ-ಖಾತಾ ನೀಡಿಕೆಗೆ ತಂತ್ರಾಂಶ ವಿಳಂಬ
*ಡ್ರ್‌ಟಾ ದೋಷ ಹೆಚ್ಚಳ ಪ್ರಮುಖ ಸಮಸ್ಯೆ
*ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತೆಗೆ ಲಂಚ
*ಇ-ಖಾತಾ ಕಾವೇರಿ 2.0ನಲ್ಲಿ ಲಿಂಕ್ ಆಗ್ತಿಲ್ಲ
*ಖಾತಾ ಹೆಸರು, ಚಕ್ಕುಬಂದಿ ತಪ್ಪು ಮಾಹಿತಿ
*ಇ-ಆಸ್ತಿ ಸ್‌ಟಾವೇರ್‌ನಲ್ಲಿಲ್ಲ ಹೊಸ ಖಾತೆ ಅರ್ಜಿ
*ಗ್ರಾಪಂಗಳಲ್ಲಿ ರೆವಿನ್ಯೂ ಸೈಟ್‌ಗಳಿಗಿಲ್ಲ ಬಿ-ಖಾತೆ