ವರ್ಷದ ಹಿನ್ನೋಟ|e-ಜ್ಞಾನ ಲೋಕದ ನೆನಪಿನ ಬುತ್ತಿ…

ಜಾಗತಿಕ ಮಟ್ಟದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರತಿವರ್ಷದಂತೆ 2018ರಲ್ಲೂ ಸಂಶೋಧನೆ ಮತ್ತು ಅಭಿವೃದ್ಧಿ ಮುಂದುವರಿದಿದೆ. ಹಿಂದಿನ ವರ್ಷಗಳ ಪ್ರಯತ್ನಗಳ ಫಲಿತಾಂಶ ಈ ವರ್ಷ ಗೋಚರಿಸಿದೆ ಕೂಡ. ಬಾಹ್ಯಾಕಾಶ, ವೈದ್ಯಕೀಯ, ಮೂಲ ವಿಜ್ಞಾನ, ನಿತ್ಯ ಬಳಕೆಯ ತಂತ್ರಜ್ಞಾನ ಸೇರಿ ಹಲವು ಹೊಸ ವಿಚಾರಗಳು ದಾಖಲಾಗಿವೆ. ಇಸ್ರೋ, ನಾಸಾ ಸೇರಿ ಹಲವು ಸಂಸ್ಥೆಗಳ ಆಯ್ದ ಸಾಧನೆ, ವೇದನೆಗಳ ಅವಲೋಕನಕ್ಕೆ ವರ್ಷಾಂತ್ಯದ ಈ ಹೊತ್ತು ಒಂದು ನಿಮಿತ್ತ.

ವಿಜ್ಞಾನ ತಂತ್ರಜ್ಞಾನ ಕ್ಷೇತ್ರವನ್ನು ಅವಲೋಕಿಸಿದರೆ ಈ ವರ್ಷ ಜಾಗತಿಕ ಮಟ್ಟದಲ್ಲಿ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಚಟುವಟಿಕೆಗಳು, ಸಂಶೋಧನೆಗಳು ಹೆಚ್ಚು ಗಮನಸೆಳೆದವು. 2017ಕ್ಕೆ ಹೋಲಿಸಿದರೆ(63) ಈ ವರ್ಷ ಮೊದಲ ಒಂಭತ್ತು ತಿಂಗಳಲ್ಲಿ 75 ಉಪಗ್ರಹ ಉಡಾವಣೆಗಳು ನಡೆದಿವೆ. ಆಗಸ್ಟ್​ನಲ್ಲಿ ಚೀನಾ 22 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ 2016ರ ತನ್ನದೇ ದಾಖಲೆ(22)ಯನ್ನು ಸಮಗಟ್ಟಿದೆ. ಇಡೀ ವರ್ಷದಲ್ಲಿ 38ರಿಂದ 40 ಉಪಗ್ರಹ ಉಡಾವಣೆಗೆ ಚೀನಾ ಸಿದ್ಧತೆ ಮಾಡಿಕೊಂಡಿತ್ತು. ಈ ವರ್ಷ ಡಿಸೆಂಬರ್ ಮೂರನೇ ತಾರೀಕಿಗೆ ಜಾಗತಿಕ ಮಟ್ಟದಲ್ಲಿ ಉಡಾವಣೆಗೊಂಡ ಉಪಗ್ರಹದ ಸಂಖ್ಯೆ 100ರ ಗಡಿ ದಾಟಿತು. ವರ್ಷ ಕೊನೆಗೊಳ್ಳುವಷ್ಟರಲ್ಲಿ ಇನ್ನೂ ಹದಿನೈದು ಉಪಗ್ರಹಗಳು ಉಡಾವಣೆಯಾಗಲಿವೆ.

ಸ್ಪೇಸ್ ಸ್ಟೇಷನ್ ಉಡಾವಣಾ ನೆಲೆ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಉಪಗ್ರಹಗಳನ್ನು ಹಾರಿಬಿಡುವಲ್ಲಿ ಗಗನಯಾತ್ರಿಗಳು ಯಶಸ್ವಿಯಾಗಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಇಂಥದ್ದೊಂದು ಪ್ರಯೋಗ ನಡೆಯಿತು. ಅಂತರಿಕ್ಷ ನಿಲ್ದಾಣದಲ್ಲಿರುವ ರಷ್ಯಾ ಗಗನಯಾನಿ ಸೆರ್ಗಿ ಪ್ರೊಕೊಪಿವ್ ಟಿಶ್ಯೂ ಬಾಕ್ಸ್ ಗಾತ್ರದ 4 ನ್ಯಾನೋ ಉಪಗ್ರಹಗಳನ್ನು ಭೂ ಕಕ್ಷಗೆ ಹಾರಿಬಿಡುವಲ್ಲಿ ಯಶಸ್ವಿಯಾಗಿದ್ದಾರೆ. ಭೂಮಿಯ ವಾತಾವರಣದಿಂದ ಉಪಗ್ರಹ ಹಾರಿಬಿಡುವ ಮಾನವನ ಕನಸು ನನಸಾಗಿದ್ದು, ಬಾಹ್ಯಾಕಾಶ ಇತಿಹಾಸದಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಿದೆ.

‘ಪಾರ್ಕರ್’ ಸೂರ್ಯ ಶಿಕಾರಿ ಶುರು

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಮಹತ್ವಾಕಾಂಕ್ಷೆಯ ಸೂರ್ಯನ ಕುರಿತ ಸಂಶೋಧನಾ ಯೋಜನೆಯ ‘ಪಾರ್ಕರ್ ಸೋಲಾರ್ ಪ್ರೋಬ್’ ನೌಕೆ ಸೂರ್ಯನ ಸಮೀಪದ ಶುಕ್ರನ ಕಕ್ಷೆಗೆ ಅಕ್ಟೋಬರ್ 3ರಂದು ತಲುಪಿದೆ. ಸೂರ್ಯನಿಗೆ 1,500 ಮೈಲಿ ದೂರದಲಿ ್ಲ ಸುತ್ತುಹಾಕಲಾರಂಭಿಸಿದೆ. ಸೂರ್ಯನಿಗೆ ಸಮೀಪವಿರುವ ಶುಕ್ರಗ್ರಹದ ಗುರುತ್ವಾಕರ್ಷಣೆ ಶಕ್ತಿಯನ್ನು ಬಳಸಿಕೊಂಡು ನೌಕೆ, ಸೂರ್ಯನತ್ತ ಸಾಗಲಿದೆ. ಶುಕ್ರನ ಕಕ್ಷೆಯಲ್ಲಿ ಇನ್ನೂ ನಾಲ್ಕು ಸುತ್ತು ಹಾಕಲಿದ್ದು, ನಂತರ ಸೂರ್ಯನ ಪ್ರಭಾ ವಲಯದತ್ತ ನೌಕೆ ಸಾಗುತ್ತದೆ ಎಂದು ನಾಸಾ ಸಂಶೋಧಕರು ಹೇಳಿದ್ದಾರೆ.

ಸೈಬರ್ ಸುರಕ್ಷಿತ್ ಭಾರತ್

ಲೋಕಾರ್ಪಣೆ: 19.01.2018; ದೇಶದ ಸೈಬರ್ ಜಗತ್ತಿನ ಸುರಕ್ಷತೆಗಾಗಿ ಭಾರತ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿತು. ಜಾಗೃತಿ, ಶಿಕ್ಷಣ ಮತ್ತು ಬಳಕೆ ಕುರಿತು ತಿಳಿವಳಿಕೆ ಮೂಡಿಸುವುದು ಇದರ ಉದ್ದೇಶ. ಆರು ತಿಂಗಳ ಅವಧಿಯಲ್ಲಿ ದೇಶದ ಪ್ರಮುಖ ನಗರಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.

2ನೇ ಅತಿಹೆಚ್ಚು ಮೊಬೈಲ್ ಉತ್ಪಾದಕ ರಾಷ್ಟ್ರ ಭಾರತ

ಜಗತ್ತಿನಲ್ಲಿ ಅತಿಹೆಚ್ಚು ಮೊಬೈಲ್ ಉತ್ಪಾದಿಸುವ ದೇಶ ಚೀನಾ ಮತ್ತು ಎರಡನೇ ಸ್ಥಾನದಲ್ಲಿ ವಿಯೆಟ್ನಾಂ ಇತ್ತು. ಏಪ್ರಿಲ್ ತಿಂಗಳಲ್ಲಿ ಇಂಡಿಯನ್ ಸೆಲ್ಯುಲರ್ ಅಸೋಸಿಯೇಷನ್(ಐಸಿಎ) ಪ್ರಕಟಿಸಿದ ದತ್ತಾಂಶ ಪ್ರಕಾರ ಮೊಬೈಲ್ ಉತ್ಪಾದನೆಯಲ್ಲಿ ವಿಯೆಟ್ನಾಮನ್ನು ಭಾರತ ಹಿಂದಿಕ್ಕಿದೆ. 2014ರಲ್ಲಿ 30 ಲಕ್ಷ ಮೊಬೈಲ್ ಫೋನ್ ಉತ್ಪಾದನೆಯಾಗುತ್ತಿದ್ದ ಭಾರತದಲ್ಲಿ 2017ರಲ್ಲಿ ವಾರ್ಷಿಕ 1.1 ಕೋಟಿ ಮೊಬೈಲ್ ಉತ್ಪಾದನೆ ಆಗಿದೆ. ಜಾಗತಿಕ ಉತ್ಪಾದನಾ ಮಟ್ಟದಲ್ಲಿ ಭಾರತದ ಪಾಲು ಶೇಕಡ 3 ಇದ್ದದ್ದು ಶೇಕಡ 11ಕ್ಕೇರಿದೆ.

ನಾಸಾ ಸಾಧನೆ

ಮಾರುತಗಳ ಮಾಹಿತಿಗೆ ರೈನ್​ಕ್ಯೂಬ್ ಹವಾಮಾನ ಮುನ್ಸೂಚನೆಯನ್ನು ವಿಶೇಷವಾಗಿ ಮಾರುತಗಳ ನಿಖರ ಮಾಹಿತಿ ಸಂಗ್ರಹಿಸುವುದಕ್ಕಾಗಿ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಕಿರು ಉಪಗ್ರಹವನ್ನು ಸೆಪ್ಟೆಂಬರ್ ಅಂತ್ಯಕ್ಕೆ ಉಡಾವಣೆ ಮಾಡಿದೆ. ಇದಕ್ಕೆ ರೈನ್​ಕ್ಯೂಬ್(ರಡಾರ್ ಇನ್ ಎ ಕ್ಯೂಬ್​ಸ್ಯಾಟ್) ಎಂದು ನಾಸಾ ನಾಮಕರಣ ಮಾಡಿದೆ. ಈ ಉಪಗ್ರಹವನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಭೂಮಿಯ ಕೆಳಕಕ್ಷೆಗೆ ಉಡಾವಣೆ ಮಾಡಲಾಗಿದೆ. ಉಪಗ್ರಹದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿದ್ದು, ವಿನಾಶಕಾರಿ ಮಾರುತಗಳ ಆಂತರಿಕ ಮಾಹಿತಿ ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಮಾರುತಗಳಲ್ಲಿನ ನೀರಿನ ಹನಿಗಳ ಗಾತ್ರವನ್ನು ಕಾಲಕಾಲಕ್ಕೆ ಭೂ ಆದಾರಿತ ಹವಾಮಾನ ಕೇಂದ್ರಗಳಿಗೆ ಕಾಲಕಾಲಕ್ಕೆ ತಲುಪಿಸುತ್ತದೆ.

ಕ್ಷುದ್ರಗ್ರಹದ ಮೇಲೆ ರೋವರ್!

ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಚಲಿಸುವ ಕ್ಷುದ್ರಗ್ರಹ (ಆಸ್ಟ್ರಾಯ್್ಡ ಮೇಲೆ ಜಪಾನ್ ಏರೋಸ್ಪೇಸ್ ಎಕ್ಸ್​ಪ್ಲೊರೇಷನ್ ಏಜೆನ್ಸಿ (ಜಾಕ್ಸಾ) ರೋವರ್ ಒಂದನ್ನು ಯಶಸ್ವಿಯಾಗಿ ಸೆಪ್ಟೆಂಬರ್ 21ರಂದು ಇಳಿಸಿದೆ. ರ್ಯುಗು ಹೆಸರಿನ ಆಸ್ಟ್ರಾಯ್್ಡ ಮೇಲೆ ರೋವರ್​ಗಳನ್ನು ಇಳಿಸಿ ಅಧ್ಯಯನ ನಡೆಸುವ ಈ ಯೋಜನೆಗೆ ‘ಹಯಾಬುಸಾ 2’ ಎಂದು ಹೆಸರಿಡಲಾಗಿದೆ. ಆಸ್ಟ್ರಾಯ್್ಡ ನೆಲದಿಂದ 15 ಮೀಟರ್ ಎತ್ತರಕ್ಕೆ ಜಿಗಿದು, 15 ನಿಮಿಷ ಗಾಳಿಯಲ್ಲಿ ತೇಲುತ್ತಾ ನೆಲದಲ್ಲಿನ ಕಣಗಳ ಚಿತ್ರ ಸೆರೆಹಿಡಿದು ರೋವರ್​ಗಳು ಜಾಕ್ಸಾಗೆ ರವಾನಿಸಿವೆ.

ಗ್ರಾಹಕ ಸೇವೆಗೆ ರಾಡಾ ರೋಬಾಟ್

ಟಾಟಾ ಸನ್ಸ್ ಲಿ. ಮತ್ತು ಸಿಂಗಾಪುರ ಏರ್​ಲೈನ್ಸ್ ಇ. (ಎಸ್​ಐಎ) ಜಂಟಿಯಾಗಿ ನಿರ್ವಹಿಸುತ್ತಿರುವ ‘ವಿಸ್ತಾರ’ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ ತನ್ನ ಪ್ರಯಾಣಿಕರು ಮತ್ತು ಇತರ ಗ್ರಾಹಕರ ನೆರವಿಗಾಗಿ ಕೃತಕ ಬುದ್ಧಿಮತ್ತೆಯಿಂದ ಚಾಲಿತ ಅತ್ಯಾಧುನಿಕ ರೋಬಾಟ್ ‘ ರಾಡಾ ’ ಪರಿಚಯಿಸುತ್ತಿದೆ. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 3ನೇ ಟರ್ವಿುನಲ್​ನಲ್ಲಿ ಜುಲೈ 5ರಿಂದ ರಾಡಾ ಸೇವೆಗೆ ಹಾಜರಾಗಿದೆ. ರಾಡಾ ವೈಶಿಷ್ಟ್ಯ: =ನಾಲ್ಕು ಚಕ್ರಗಳಲ್ಲಿ ವೇಗವಾಗಿ ಚಲಿಸುವ ಸಾಮರ್ಥ್ಯ =360 ಡಿಗ್ರಿ ತಿರುಗಿ ಪ್ರತಿಕ್ರಿಯೆ =ಪ್ರಯಾಣಿಕರೊಂದಿಗೆ ಸಂವಹನಕ್ಕೆ ನೆರವಾಗಲು ಮೂರು ಕ್ಯಾಮೆರಾಗಳು =ಸೂಕ್ಷಾ್ಮತಿಸೂಕ್ಷ್ಮ ಶಬ್ದಗಳ ಗ್ರಹಿಕೆ, ಸ್ಪಷ್ಟ ಉಚ್ಚಾರಣೆಗೆ ಡಿಜಿಟಲ್ ಧ್ವನಿ ತಂತ್ರಜ್ಞಾನ

ರಕ್ತ ಜಿನುಗುತ್ತದೆ ಈ ರೋಬಾಟ್​ನಿಂದ!

ವೈದ್ಯಕೀಯ ಕ್ಷೇತ್ರದಲ್ಲಿ ದಿನೇದಿನೆ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಭವಿಷ್ಯದ ವೈದ್ಯರಿಗೆ ತರಬೇತಿ ನೀಡುವ ದೃಷ್ಟಿಯಿಂದ ವೈದ್ಯಕೀಯ ಕೋರ್ಸ್ಗಳಿಗೆ ಅನುಕೂಲವಾಗುವ ‘ಎಚ್​ಎಎಲ್’(ಪಿಡಿಯಾಟ್ರಿಕ್ ಎಚ್​ಎಎಲ್ ಎಸ್ 2225) ಹೆಸರಿನ ಬಾಲಕ ರೋಬಾಟ್​ವೊಂದನ್ನು ಗೌಮಾರ್ಡ್ ಸೈಂಟಿಫಿಕ್ ಎಂಬ ಕಂಪನಿ ಅಭಿವೃದ್ಧಿಪಡಿಸಿದೆ. 5 ವರ್ಷದ ಬಾಲಕನನ್ನು ಹೋಲುವ ಈ ರೋಬಾಟ್ ಬಳಸಿ ವೈದ್ಯಕೀಯ ಕೋರ್ಸ್​ಗಳಲ್ಲಿ ವಿದ್ಯಾರ್ಥಿಗಳಿಗೆ ಮಾನವ ದೇಹದ ಪ್ರತಿಕ್ರಿಯೆ ಬಗ್ಗೆ ಪಾಠ ಮಾಡಬಹುದು.

ನಿಮ್ಮ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡುವ ಎಚ್​ಎಎಲ್, ತನ್ನ ಶರೀರದ ಮೇಲೆ ವಿದ್ಯಾರ್ಥಿಗಳು ಹಾಕುವ ಒತ್ತಡಕ್ಕೆ ಸರಿಯಾಗಿ ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ಚಾಕುವಿನಿಂದ ಕುಯ್ದರೆ ರೋಬಾಟ್​ನಿಂದ ರಕ್ತ ಬರುವುದು ವಿಶೇಷದ ಜತೆ ಅಚ್ಚರಿ! ಎಚ್​ಎಎಲ್ ರೋಬಾಟ್ ಬೆಲೆ -ಠಿ; 34.88 ಲಕ್ಷ .

ಉದ್ದೇಶ: -ಠಿ;ವೈದ್ಯಕೀಯ ತರಬೇತಿಗೆ ಭಾವನಾತ್ಮಕ ನಂಟು ಬೆರೆಸಿ ವಿದ್ಯಾರ್ಥಿಗಳಿಗೆ ಅರಿವು. -ಠಿ;ಎಲ್ಲ ರೀತಿಯ ವೈದ್ಯಕೀಯ ಪರೀಕ್ಷೆಗಳನ್ನು ಎಚ್​ಎಎಲ್ ಮೇಲೆ ವಿದ್ಯಾರ್ಥಿಗಳು ಪ್ರಯೋಗಿಸಬಹುದು. -ಠಿ;ಚಿಕಿತ್ಸೆಗೆ ಮಾನವ ದೇಹದ ಪ್ರತಿಕ್ರಿಯೆ ಬಗ್ಗೆ ವಿದ್ಯಾರ್ಥಿಗಳಿಗೆ ಸಿಗಲಿದೆ ಸ್ಪಷ್ಟನೆ.

ರಕ್ಷಣಾ ಕ್ಷೇತ್ರ

-ಠಿ;ಜೈವಿಕ ಇಂಧನ: ಭಾರತೀಯ ವಾಯುಸೇನೆಯು ಮೊದಲ ಬಾರಿಗೆ ಜೈವಿಕ ಇಂಧನ ಬಳಸಿ ಎಎನ್-32 ಸಂಚಾರ ವಿಮಾನವನ್ನು ಪ್ರಯೋಗಾರ್ಥವಾಗಿ ಬೆಂಗಳೂರಿನಲ್ಲಿ ಡಿ.17ರಂದು ಹಾರಿಸಿದೆ. ರಕ್ಷಣಾ ಸಚಿವಾಲಯದ ಸೂಚನೆ ಮೇರೆಗೆ ವಾಯುಸೇನೆ ಸಂಶೋಧನಾ ವಿಭಾಗವು ಈ ಪ್ರಯೋಗ ನಡೆಸಿತ್ತು. ಪ್ರಯೋಗಕ್ಕೆ ಜತ್ರೋಪಾ ಜೈವಿಕ ಇಂಧನ ಬಳಸಲಾಗಿದೆ.

-ಠಿ;ಏರ್ ಕ್ಯಾವಲ್ರಿ ರಣತಂತ್ರ: ವಿಯೆಟ್ನಾಂ ಯುದ್ಧದಲ್ಲಿ ಶತ್ರುಪಡೆಯ ನೆಲೆಯನ್ನು ಹುಡುಕಿ ದಾಳಿ ನಡೆಸಲು ಅಮೆರಿಕದ ಸೇನೆ ರೂಪಿಸಿದ್ದ ‘ ಏರ್ ಕ್ಯಾವಲ್ರಿ ’ ರಣತಂತ್ರ ಮಾದರಿಯನ್ನು ಮೇ ತಿಂಗಳಲ್ಲಿ ಭಾರತೀಯ ಸೇನೆ ರಾಜಸ್ಥಾನದಲ್ಲಿ ಪರೀಕ್ಷಿಸಿದೆ.

-ಠಿ;ಸೇನೆಗೆ ವಜ್ರಾ ಫಿರಂಗಿ, ಎಂ777 ತುಪಾಕಿ ಬಲ: ಖಾಸಗಿ ಸಹಭಾಗಿತ್ವದಲ್ಲಿ ದೇಶೀಯವಾಗಿ ತಯಾರಾದ ಅಮೆರಿಕ ನಿರ್ವಿುತ ಲಘು ಹೊವಿಟ್ಜರ್ (ತುಪಾಕಿ) ಎಂ777 ಹಾಗೂ ಕೆ-9 ವಜ್ರಾ ಫಿರಂಗಿ , ಸಂಯೋಜಿತ ಫಿರಂಗಿ ಸಾಗಣೆ ವಾಹನಗಳು ಭೂಸೇನೆಗೆ ನವೆಂಬರ್ 9ರಂದು ಸೇರ್ಪಡೆಗೊಂಡಿವೆ.

ರಾಜ್ಯದ ರೋಬಾಟ್!

ಕಲಬುರಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಅಧ್ಯಕ್ಷ ಡಾ.ಶರಣಬಸವಪ್ಪ ಅಪ್ಪ ಕಚೇರಿಯಲ್ಲಿ ಅವರಿಗೆ ನೀರು ಮತ್ತು ಚಹಾ ಕೊಡುವ ಮೂಲಕ ರೋಬಾಟ್ ತನ್ನ ಕಾರ್ಯಬಾಹುಳ್ಯವನ್ನು ತೋರಿಸುತ್ತಿರುವ ಸುದ್ದಿ ಈ ವರ್ಷದ ಮಧ್ಯಭಾಗದಲ್ಲಿ ಪ್ರಕಟವಾಗಿತ್ತು. ಸುರಪುರದ ವೀರಪ್ಪ ನಿಷ್ಠಿ ಇಂಜಿನಿಯರಿಂಗ್ ಮಹಾವಿದ್ಯಾಲಯದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ಶ್ರಮ ಇದರ ಹಿಂದಿದೆ.

ರೋಬಾಟ್ ರಶ್ಮಿ

ಹಿಂದಿ ಭಾಷೆಯಲ್ಲಿ ಸಂಪೂರ್ಣವಾಗಿ ಸಂಭಾಷಣೆ ನಡೆಸುವಂತ ಹಾಗೂ ಸಂಭಾಷಣೆಗೆ ತಕ್ಕಂತೆ ತುಟಿ ಚಲನೆ ಮಾಡುವಂಥ ಭಾರತದ ಮೊದಲ ಹ್ಯೂಮನಾಯ್್ಡ ರೋಬಾಟ್ ‘ರಶ್ಮಿ’ ಅನ್ನು ಅಭಿವೃದ್ಧಿಪಡಿಸಲಾಗಿದೆ. ಜಾರ್ಖಂಡ್​ನ ರಾಂಚಿ ಮೂಲದ ಸಾಫ್ಟ್​ವೇರ್ ಇಂಜಿನಿಯರ್ ರಂಜಿತ್ ಶ್ರೀವಾತ್ಸವ ‘ಈಕೆ’ಯನ್ನು ಅಭಿವೃದ್ಧಿಪಡಿಸಿದ ಸುದ್ದಿ ಆಗಸ್ಟ್ ಮೊದಲ ವಾರದಲ್ಲಿ ಪ್ರಕಟವಾಗಿದ್ದವು. ಹ್ಯೂಮನಾಯ್್ಡ ರೋಬಾಟ್​ಗಳ ಕ್ಷೇತ್ರದಲ್ಲಿ ಔನತ್ಯ ಸಾಧಿಸುವ ನಿಟ್ಟಿನಲ್ಲಿ ಆಶಾಕಿರಣವಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರದ ಮೊದಲ ಹ್ಯೂಮನಾಯ್್ಡ ರೋಬಾಟ್​ಗೆ ‘ರಶ್ಮಿ’ ಎಂದು ನಾಮಕರಣ ಮಾಡಲಾಗಿದೆ. ವಿಶ್ವದ ಮೊದಲ ಹ್ಯೂಮನಾಯ್್ಡ ರೋಬಾಟ್ ‘ಸೋಫಿಯಾ’, ರಶ್ಮಿಯ ಸೃಷ್ಠಿಗೆ ಪ್ರೇರಣೆಯಾಗಿದೆ. ಕಳೆದ ವರ್ಷ ಸೌದಿಯ ಪೌರತ್ವ ಪಡೆದ ಸೋಫಿಯಾ ಇಂಗ್ಲಿಷ್ ಅಲ್ಲದೆ, ಹಿಂದಿ, ಮರಾಠಿ, ಬೋಜ್​ಪುರಿ ಭಾಷೆಗಳಲ್ಲಿ ಸಂಭಾಷಣೆ ಮಾಡಲು ಸಮರ್ಥವಾಗಿದೆ. ಈ ಹಿನ್ನೆಲೆಯಲ್ಲಿ ಕೇವಲ ಹಿಂದಿ ಭಾಷೆಯಲ್ಲಿ ಸಂಭಾಷಣೆ ನಡೆಸಬಲ್ಲ ರೋಬಾಟ್ ಅನ್ನು ಅಭಿವೃದ್ಧಿಪಡಿಸಬೇಕೆಂದು ಪ್ರೇರಣೆ ಒದಗಿದ್ದಾಗಿ ರಂಜಿತ್ ಶ್ರೀವಾತ್ಸವ ಹೇಳಿದ್ದಾರೆ.

ನೊಬೆಲ್ ಪುರಸ್ಕಾರ

ವೈದ್ಯಕೀಯ (1-10-2018): ಮಾರಣಾಂತಿಕ ಕ್ಯಾನ್ಸರ್ ರೋಗಕ್ಕೆ ಚೆಕ್​ಪಾಯಿಂಟ್ ಥೆರಪಿ ಸಂಶೋಧಿಸಿದ ಜೇಮ್್ಸ ಅಲಿಸನ್ ಹಾಗೂ ತಸುಕು ಹೊಂಜೋ ಅವರಿಗೆ 2018ನೇ ಸಾಲಿನ ವೈದ್ಯಕೀಯ ನೊಬೆಲ್ ಪುರಸ್ಕಾರ ಲಭಿಸಿದೆ. ಅಮೆರಿಕದ ಅಲಿಸನ್ ಹಾಗೂ ಜಪಾನ್​ನ ಹೊಂಜೋ ಅವರು ಕ್ಯಾನ್ಸರ್ ವಿರುದ್ಧ ಮಾನವ ದೇಹದಲ್ಲಿ ರೋಗನಿರೋಧಕ ಶಕ್ತಿ ವರ್ಧಿಸುವ ಚಿಕಿತ್ಸೆಯನ್ನು ಸಂಶೋಧಿಸಿದ್ದರು.

ಭೌತವಿಜ್ಞಾನ (2-10-2018): ಲೇಸರ್ ಕಿರಣಗಳ ಕುರಿತು ಸಂಶೋಧನೆ ನಡೆಸಿದ ಅಮೆರಿಕದ ಆರ್ಥರ್ ಅಶ್ಕಿನ್, ಫ್ರಾನ್ಸ್​ನ ಗೆರಾರ್ಡ್ ಮೌರೊ ಮತ್ತು ಕೆನಡಾದ ಡೊನ್ನಾ ಸ್ಟ್ರಿಕ್​ಲೆಂಡ್ ಅವರಿಗೆ 2018ನೇ ಸಾಲಿನ ಭೌತವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಜಂಟಿಯಾಗಿ ಘೋಷಿಸಲಾಗಿದೆ. ಈ ಮೂವರು ಲೇಸರ್ ಕಿರಣಗಳ ಬಗ್ಗೆ ನಡೆಸಿದ ಉನ್ನತ ಮಟ್ಟದ ಸಂಶೋಧನೆಯಿಂದಾಗಿ ನಿಖರವಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಲು ಅನುಕೂಲವಾಗಿದೆ. ಸಂಶೋಧನೆಯಿಂದ ನೂತನ ತಂತ್ರಜ್ಞಾನ ಹೊಂದಿರುವ ಅತ್ಯಾಧುನಿಕ ಸಾಧನಗಳನ್ನು ಅವಿಷ್ಕರಿಸಲು ಸಹಕಾರಿಯಾಗಿದೆ.

ರಸಾಯನಶಾಸ್ತ್ರ (3-10-2018): ರಸಾಯನಶಾಸ್ತ್ರದಲ್ಲಿ ಅಮೆರಿಕದ ವಿಜ್ಞಾನಿಗಳಾದ ಫ್ರಾನ್ಸೆಸ್ ಅರ್ನಾಲ್ಡ್, ಜಾರ್ಜ್ ಸ್ಮಿತ್ ಹಾಗೂ ಬ್ರಿಟನ್ ಸಂಶೋಧಕ ಗ್ರೆಗೊರಿ ವಿಂಟರ್ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮೂವರು ವಿಜ್ಞಾನಿಗಳು ಜೈವಿಕ ಇಂಧನದಲ್ಲಿ ಉತ್ಪತ್ತಿಯಾಗುವ ಕಿಣ್ವಗಳನ್ನು ಔಷಧವಾಗಿ ಬಳಕೆ ಮಾಡುವ ತತ್ವವನ್ನು ಅಭಿವೃದ್ಧಿ ಪಡಿಸಿದ್ದಾರೆ. ಇದು ಔಷಧ ಕ್ಷೇತ್ರ ಮತ್ತು ಮಾನವನ ಆರೋಗ್ಯ ಸುಧಾರಣೆಗೆ ದೊಡ್ಡ ಕೊಡುಗೆಯಾಗಲಿದೆ.

ವೈದ್ಯ ವಿಜ್ಞಾನ

ದಂತಗಳ ರಕ್ಷಣೆಗೆ ಕೃತಕ ಎನಾಮಲ್

ನಮ್ಮ ಆಹಾರಶೈಲಿ ಬದಲಾಗಿರುವುದರಿಂದ ಎನಾಮಲ್​ನ ರಕ್ಷಣೆಗೆ ಭಾರಿ ಅಡ್ಡಿ ಉಂಟಾಗಿದೆ. ಇದರ ಫಲವಾಗಿ ಹಲ್ಲುನೋವು, ಹಲ್ಲು ಜುಮಗುಟ್ಟುವುದು ಮತ್ತು ಹಲ್ಲು ಬಿದ್ದುಹೋಗುವ ಪ್ರಮಾಣ ಹೆಚ್ಚಾಗುತ್ತಿದೆ. ವಿಶ್ವದ ಒಟ್ಟು ಜನಸಂಖ್ಯೆಯ ಶೇ.50 ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂತಹ ತೊಂದರೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಬ್ರಿಟನ್​ನ ಕ್ವೀನ್ ಮೇರಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಪ್ರಯತ್ನಮುಖಿಯಾಗಿದ್ದಾರೆ. ಹಾಳಾಗಿರುವ ಎನಾಮಲ್ ಮತ್ತೆ ಬೆಳೆಯುವಂತೆ ಮಾಡುವ ವಸ್ತುವೊಂದನ್ನು ಆವಿಷ್ಕರಿಸಿದ್ದಾರೆ. ಸದ್ಯ ಇದು ಪರೀಕ್ಷಾ ಹಂತದಲ್ಲಿರುವುದಾಗಿ ಏಪ್ರಿಲ್​ನಲ್ಲಿ ವರದಿ ಪ್ರಕಟವಾಗಿತ್ತು.