ಹಾಸನ: ಬಾರಿ ಕುತೂಹಲ ಮೂಡಿಸಿದ್ದ ರಾಜ್ಯದ ಪ್ರತಿಷ್ಠಿತ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆರ್.ಟಿ. ದ್ಯಾವೇಗೌಡ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ್ ಚೌಡುವಳ್ಳಿ ಅವರು ಅವಿರೋಧವಾಗಿ ಆಯ್ಕೆಯಾದರು.
ನಗರದ ಮಲೆನಾಡು ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಎಂಟಿಇಎಸ್ ಸಂಸ್ಥೆಯ ಅಧ್ಯಕ್ಷ ಸ್ಥಾನದ ಚುನಾವಣೆಯನ್ನು ಜಿ.ಎಲ್. ಮುದ್ದೇಗೌಡರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಅಧ್ಯಕ್ಷ ಸ್ಥಾನದ ನೇರ ಸ್ಪರ್ಧಿ ಆರ್.ಟಿ. ದ್ಯಾವೇಗೌಡ ವಿರುದ್ಧ ಯಾವುದೇ ಅಭ್ಯರ್ಥಿ ನಾಮಪತ್ರ ಸಲ್ಲಿಸದೆ ಹಿನ್ನೆಲೆಯಲ್ಲಿ ಆರ್.ಟಿ. ದ್ಯಾವೇಗೌಡರನ್ನು 20 ನಿರ್ದೇಶಕರ ಸಮ್ಮುಖದಲ್ಲಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಎಂಟಿಇಎಸ್ ಸಂಸ್ಥೆಯಲ್ಲಿ 24 ನಿರ್ದೇಶಕರಿದ್ದು ನಾಲ್ವರು ಗೈರಾಗಿದ್ದು ಉಳಿದ 20 ನಿರ್ದೇಶಕರು ಆರ್.ಟಿ. ದ್ಯಾವೇಗೌಡರಿಗೆ ಬೆಂಬಲ ಸೂಚಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಜಗದಿಶ್ ಚೌಡುವಳ್ಳಿ, ಉಪಾಧ್ಯಕ್ಷರಾಗಿ ಗುರುದೇವ್, ಚೌಡುವಳ್ಳಿ ಪುಟ್ಟರಾಜು, ಗುರಪ್ಪ, ಖಜಾಂಚಿಯಾಗಿ ಎಚ್.ಡಿ. ಪಾಶ್ವನಾಥ್, ಜಂಟಿ ಕಾರ್ಯದರ್ಶಿಯಾಗಿ ಜಿ.ಆರ್. ಶ್ರೀನಿವಾಸ್ ಅವರನ್ನು ಒಮ್ಮತದ ಬೆಂಬಲದೊಂದಿಗೆ ಆಯ್ಕೆ ಮಾಡಲಾಯಿತು. ಮುನ್ನೆಚರಿಕೆ ಕ್ರಮವಾಗಿ ಪ್ರತಿ ನಿರ್ದೇಶಕರಿಗೂ ಖಾಸಗಿ ಅಂಗರಕ್ಷಕರನ್ನು ನೇಮಕ ಮಾಡಲಾಗಿತ್ತು.
ಇದೇ ವೇಳೆ ನೂತನ ಅಧ್ಯಕ್ಷ ಆರ್.ಟಿ. ದ್ಯಾವೇಗೌಡ ಮಾತನಾಡಿ, ನಿಕಟಪೂರ್ವ ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿ ಅವರು ನನಗೆ ಸಂಸ್ಥೆಯ ಹೆಚ್ಚಿನ ಜವಾಬ್ದಾರಿ ನೀಡಿ ಸಂಸ್ಥೆಯ ಕುಂದು ಕೊರತೆ, ಅನುಭವಗಳನ್ನು ತಿಳಿದುಕೊಳ್ಳಲು ಅವಕಾಶ ಮಾಡಿಕೊಟ್ಟದ್ದರು. ಆದ್ದರಿಂದ ಅವರಿಗೆ ಮೊದಲ ಪ್ರಣಾಮ ಸಲ್ಲಿಸುತ್ತೇನೆ. ಕಾಲೇಜಿನಲ್ಲಿ ಅನೇಕ ಕುಂದುಕೊರತೆಗಳಿವೆ. ನಮ್ಮ ತಂಡದೊಂದಿಗೆ ಚರ್ಚಿಸಿ ಕಾಲೇಜಿನ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಯಾವುದೇ ಜಾತಿ ಬೇಧ ಭಾವ- ಭಿನ್ನಮತ ಇಲ್ಲದೆ ತಂಡವನ್ನು ಮನ್ನಡೆಸುತ್ತೇನೆ ಎಂದರು.
ನೂತನ ಪ್ರಧಾನ ಕಾರ್ಯದರ್ಶಿ ಜಗದೀಶ್ ಚೌಡುವಳ್ಳಿ ಮಾತನಾಡಿ, ಎಂಟಿಇಎಸ್ ಚುನಾವಣೆ ಊಹಾಪೋಹಕ್ಕೆ ಕಾರಣವಾಗಿತ್ತು. ಇದರಲ್ಲಿ ಬಣ ವಿಂಗಡಣೆ ಮಾಡಿ ಕೆಟ್ಟ ಹೆಸರು ತರುವುದಕ್ಕಾಗಿ ಕೆಲ ಪತ್ರಿಕೆಗಳಿಗೆ ತಪ್ಪಾದ ಮಾಹಿತಿ ನೀಡುತ್ತಿದ್ದರು. ಈ ರೀತಿಯ ವರ್ತನೆ ಖಂಡನೀಯ. ಮಲೆನಾಡು ಕಾಲೇಜು ಶೈಕ್ಷಣಿಕವಾಗಿ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದ್ದು ಮೊದಲ ಸ್ಥಾನಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಕೆಲಸ ಮಾಡುವ ಭರವಸೆ ನೀಡಿದರು.
ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ಇದುವರೆಗೆ ಸಾವಿರಾರು ಮಂದಿ ತಾಂತ್ರಿಕ ಪದವೀಧರರಾಗಿದ್ದಾರೆ. ಕಾಲೇಜಿಗೆ ಕೆಟ್ಟ ಹೆಸರು ಬರುವ ರೀತಿ ಅಪಪ್ರಚಾರಕ್ಕೆ ಇಂದು ತೆರೆ ಬಿದ್ದಿದೆ. ಇಲ್ಲಿ 24 ನಿರ್ದೇಶಕರಿದ್ದು ಇಂದು 20 ಮಂದಿ ಹಾಜರಾಗಿ ಒಮ್ಮತದ ಅಭ್ಯರ್ಥಿಯಾಗಿ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಮುಂದಿನ ದಿನ ಕಾಲೇಜಿಗೆ ಪದಾಧಿಕಾರಿ ಸಮಿತಿಗಳ ಅಧ್ಯಕ್ಷರ ನಿಯೋಜನೆ ಮಾಡುವ ಮೂಲಕ ಮುದ್ದೇಗೌಡರಿಗೆ ಹೆಸರು ಬರುವ ರೀತಿ ಕೆಲಸ ಮಾಡುತ್ತೇವೆ ಎಂದರು.
ಇದೇ ವೇಳೆ ನಿರ್ದೇಶಕರಾದ ಜಿ.ಟಿ. ಕುಮಾರ್, ಹೇಮಂತ್ ಕುಮಾರ್, ಶಾಂತಿ ಗ್ರಾಮ ಶಂಕರ್, ಸುರೇಶ್ ಬಸಟಿಕೊಪ್ಪಲು, ರಾಜಶೇಖರ್, ಬೂವನಹಳ್ಳಿ ಶ್ರೀನಿವಾಸ್, ನಾಗರಾಜ್ ನಾಗೇಂದ್ರಯ್ಯ, ಅರ್ಜುನ್, ಗುರುದೇವ್ ಡಾ. ಅರವಿಂದ್ ಸೇರಿದಂತೆ ಇನ್ನಿತರರು ಇದ್ದರು.
ಅಶೋಕ್ ಹಾರನಹಳ್ಳಿ ಗೈರು!
ಆರ್.ಟಿ. ದ್ಯಾವೇಗೌಡ ವಿರೋಧ ಬಣದ ನಿಕಟಪೂರ್ವ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಅವರು ನಿರ್ದೇಶಕ ಡಾ. ಅರವಿಂದ್ ಅವರನ್ನು ಅಧ್ಯಕ್ಷ ಸ್ಥಾನದ ಸ್ಪರ್ಧಿ ಎಂದು ಘೋಷಣೆ ಮಾಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಆದ ಬದಲಾವಣೆಯಿಂದ ಡಾ. ಅರವಿಂದ್ ನಾಮಪತ್ರ ಸಲ್ಲಿಸದೆ ಚುನಾವಣಾ ಕಣದಿಂದ ಹಿಂದುಳಿದರು. ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಂದು ಡಾ. ಅರವಿಂದ ಘೋಷಣೆ ಮಾಡಿದ್ದ ಅಶೋಕ್ ಹಾರನಹಳ್ಳಿ ಸೇರಿದಂತೆ ಅವರ ಬಣದ ನಾಲ್ವರು ನಿರ್ದೇಶಕರು ಚುನಾವಣೆ ಪ್ರಕ್ರಿಯೆಗೆ ಗೈರಾಗಿದ್ದರು.