Thursday, 13th December 2018  

Vijayavani

Breaking News

ಡಿ.ವಿ.ಜಿ. ಸಾರಸಂಗ್ರಹ ಸಾಹಿತ್ಯ ಷಣ್ಮುಖನ ಶಕ್ತಿಸಂಚಯ

Thursday, 19.07.2018, 3:00 AM       No Comments

ಮೂರಡಿಗಳಿಂದಲೇ ಮೂಜಗವನ್ನಳೆದು ಅದನ್ನೂ ಮೀರಿದ ತ್ರಿವಿಕ್ರಮನಂತೆ ಡಿವಿಜಿ ಎಂಬ ಮೂರಕ್ಷರಗಳಿಂದ ಭಾರತೀಯಸಾಹಿತ್ಯ- ಸಂಸ್ಕೃತಿ-ಸಮಾಜಗಳಲ್ಲಿ ಮಾಸದ ಮುದ್ರೆಯನ್ನೊತ್ತಿದ ದೇವನಹಳ್ಳಿ ವೇಂಕಟರಮಣಯ್ಯ ಗುಂಡಪ್ಪನವರನ್ನು (17.3.1887 – 7.10.1975) ಕನ್ನಡಿಗರಿಗೆ ಇವರು ಇಂಥವರೆಂದು ಹೊಸತಾಗಿ ಪರಿಚಯಿಸಬೇಕಾದ ಆವಶ್ಯಕತೆಯೇ ಇಲ್ಲ.

ಕೋಲಾರಜಿಲ್ಲೆಯ ಮುಳಬಾಗಿಲಿನಲ್ಲಿ ಬಾಲ್ಯವನ್ನು ಕಳೆದು ತಮ್ಮ ಬಾಳಿನ ಎಪ್ಪತ್ತಕ್ಕೂ ಮಿಕ್ಕ ವರ್ಷಗಳನ್ನು ಬೆಂಗಳೂರಿನಲ್ಲಿಯೇ ಸಾಗಿಸಿದ ಡಿವಿಜಿ ತಮ್ಮನ್ನು ತಾವು ಗುರುತಿಸಿಕೊಂಡದ್ದು ಒಬ್ಬ ಸಾಹಿತ್ಯಪರಿಚಾರಕನೆಂದು, ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ವಿಶ್ವಾಸವಿದ್ದ ಪತ್ರಕರ್ತನೆಂದು. ಆದರೆ ಅವರು ಪಡೆದ ಸಿದ್ಧಿ-ಪ್ರಸಿದ್ಧಿಗಳು ಮಾತ್ರ ಶ್ರೇಷ್ಠ ಸಾಹಿತ್ಯನಿರ್ವಪಕರೆಂದು, ನವಭಾರತೀಯ ಪುನರುತ್ಥಾನಯುಗದ ಅತ್ಯಂತ ಪ್ರಬುದ್ಧ ಸಾರ್ವಜನಿಕರೆಂದು, ಭಾವ-ಬುದ್ಧಿಗಳ, ಶ್ರದ್ಧೆ-ತರ್ಕಗಳ ಹಾಗೂ ಹಕ್ಕು-ಕರ್ತವ್ಯಗಳ ಅತ್ಯಂತ ಹದವಾದ ಪರಿಪಾಕವನ್ನು ಗಳಿಸಿದ್ದ ಧೀಮಂತರೆಂದು. ಎಲ್ಲಕ್ಕಿಂತ ಮಿಗಿಲಾಗಿ ಕನ್ನಡಿಗರ ಪಾಲಿಗೆ ದಾರ್ಶನಿಕದ್ಯುತಿಯ ಸೂಕ್ತಿಕವಿಯೆಂದು.

‘ಜ್ಞಾನಿನಾ ಚರಿತುಂ ಶಕ್ಯಂ ಸಮ್ಯಗ್ರಾಜ್ಯಾದಿಲೌಕಿಕಮ್ ಎಂಬ ವಿದ್ಯಾರಣ್ಯರ ಸುಪ್ರಸಿದ್ಧಸೂಕ್ತಿಯೂ “Public life must be spiritualized”ಎಂಬ ಗೋಖಲೆಯವರ ಆಭಾಣಕವೂ ಡಿವಿಜಿಯವರ ಬದುಕು-ಬರೆಹಗಳ ಹೃದಯಸುಸ್ಥಿತಿಗೆ ಅಪಧಮನಿ-ಅಭಿಧಮನಿಗಳು.

ಒಂದು ಮಾತಿನಲ್ಲಿ ಹೇಳುವುದಾದರೆ, ಶುಚಿ-ರುಚಿಯಾದ ನಿಸರ್ಗಸುಂದರ ಜೀವನೋಲ್ಲಾಸವೇ ಡಿವಿಜಿ. ಅವರ ವಾಙ್ಮಯವೆಲ್ಲ ಇದರ ಸರಸಾಭಿವ್ಯಕ್ತಿಯೇ. ಯಾವುದೇ ಓದುಗನ ಪಾಲಿಗೆ ತನ್ನ ಬದುಕಿನಲ್ಲಿ ಮೂಡುವ ಭರವಸೆಯೇ ಡಿವಿಜಿ ಸಾಹಿತ್ಯದ ಸಿದ್ಧಿಯೆಂದರೆ ಅತಿಶಯವಲ್ಲ. ಇದಕ್ಕಿಂತ ಮಿಗಿಲಾಗಿ ಯಾವ ಸಾಹಿತ್ಯ ತಾನೆ ಏನು ಮಾಡೀತು?

ಕನ್ನಡನಾಡಿನ ಮಟ್ಟಿಗೆ ಹೇಳುವುದಾದರೆ ಮಿಕ್ಕೆಷ್ಟೋ ಸಾಹಿತಿಗಳ, ವೈಚಾರಿಕರ ಚಿಂತನಗಳಿಗಿಂತಲೂ ಮಿಗಿಲಾಗಿ ಡಿವಿಜಿಯವರ ಆಲೋಚನೆಗಳು ಜನಮಾನಸವನ್ನು ವ್ಯಾಪಕವಾಗಿ ಮುಟ್ಟಿವೆ. ಮಾತ್ರವಲ್ಲ, ತಕ್ಕಮಟ್ಟಿಗೆ ಪ್ರಭಾವವನ್ನೂ ಬೀರಿವೆ. ಆದರೂ ಅವರ ಮತ್ತೆಷ್ಟೋ ಚಿರಮೌಲಿಕ ಚಿಂತನಸಾಮಗ್ರಿಯತ್ತ ಮಹಾಜನತೆಯ ಗಮನ ಹರಿದಂತಿಲ್ಲ. ಇತ್ತಕಡೆ ಉದ್ಬೋಧಿಸಬೇಕಾದ ಕರ್ತವ್ಯ ವಿಶ್ವವಿದ್ಯಾಲಯಾದಿ ವಿದ್ಯಾಕೇಂದ್ರಗಳಲ್ಲಿ ವಿರಾಜಮಾನರಾಗಿರುವ ವಿದ್ವಾಂಸರದು. ಆದರೆ ಇಂದು ಈ ವರ್ಗದ ಅವನತಿ ಯಾವ ಪರಿಯಾದದ್ದೆಂದು ಎಲ್ಲರಿಗೂ ತಿಳಿದೇ ಇದೆ. ಹೀಗಾಗಿ ಇದರ ಬಗೆಗೆ ಬಾಯಿಬಿಟ್ಟರೆ ಬಣ್ಣಗೇಡಷ್ಟೇ.

ಒಟ್ಟಿನಲ್ಲಿ ನಮ್ಮ ನಾಡಿನಲ್ಲಿ ಡಿವಿಜಿಯವರ ಸಾಹಿತ್ಯವನ್ನು ಕುರಿತು ಮತ್ತಷ್ಟು ಅರ್ಥಪೂರ್ಣವಾದ ಗಂಭೀರಾನುಸಂಧಾನಕ್ಕೆ ನೆಲೆ-ಬೆಲೆಗಳು ತೋರುತ್ತಿಲ್ಲ. ಪ್ರಸ್ತುತ ಸಂಕಲನದ ಒಂದು ಉದ್ದೇಶ ಈ ನಿಟ್ಟಿನಲ್ಲಿ ಸ್ವತಂತ್ರಸಾಧಕರನ್ನು ಪ್ರೇರಿಸುವುದೂ ಆಗಿದೆ. ಅಂಥವರಿಗೆ ಡಿವಿಜಿಯವರ ಋತ-ಸತ್ಯ- ಧರ್ಮಸಂಬಂಧಿಯಾದ ಚಿಂತನಗಳು, ರಾಷ್ಟ್ರ ಮತ್ತು ರಾಷ್ಟ್ರಕಪ್ರಜ್ಞೆಯ ವಿಚಾರಗಳು, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೀಮಾಂಸೆ, ವಾಸ್ತವ ಹಾಗೂ ಆದರ್ಶಗಳ ಸಮನ್ವಯಕ್ರಮ, ರಸದ ಬೋಧ ಮತ್ತು ಮೋದಗಳ (ಸತ್ಪ್ರೇರಣೆ ಮತ್ತು ಆನಂದ) ಅವಿನಾಭಾವಸಾಕ್ಷಾತ್ಕಾರ, ಅಭಿಜಾತಕಲಾ-ಸಾಹಿತ್ಯಗಳಲ್ಲಿ ಅನಿವಾರ್ಯವಾದ ರೂಪ-ಸ್ವರೂಪಗಳ ಸೌಂದರ್ಯಾದ್ವೈತಯೋಗ ಮುಂತಾದ ಹತ್ತಾರು ಅನನ್ಯಲಭ್ಯಸಂಗತಿಗಳು ಹೆಚ್ಚಿನ ಬೆಳಕನ್ನೀಯುವುದರಲ್ಲಿ ಸಂದೇಹವಿಲ್ಲ.

ಈ ಎಲ್ಲ ವಿಚಾರಗಳನ್ನೂ ನಮಗೆ ದಕ್ಕಿಸುವಲ್ಲಿ ಅನಿತರಸಾಧಾರಣವಾಗಿ ದುಡಿದ ಡಿವಿಜಿಯವರ ಭಾಷೆ-ಭಾವಗಳ ಬಗೆಗೂ ವಿದ್ವಲ್ಲೋಕದ ಗಮನ ಹೆಚ್ಚಾಗಿ ಹರಿದಂತಿಲ್ಲ. ಈ ಅಂಶವಂತೂ ಸಾಮಾನ್ಯಜನತೆಗೆ ಎಂದೂ ದೂರವೇ ಹೌದು; ಅದೊಂದು ಮಟ್ಟಿಗೆ ಒಪ್ಪಬಹುದಾದ ವಾಸ್ತವವೂ ಹೌದು. ಆದರೆ ವಿದ್ವಾಂಸರು ಮಾತ್ರ ಇದನ್ನು ಉಪೇಕ್ಷಿಸುವುದು ತೀರ ಅಕ್ಷಮ್ಯ. ಈ ನಿಟ್ಟಿನಲ್ಲಿ ಡಿವಿಜಿಯವರ ಪ್ರತಿಪಾದನಕ್ರಮ, ವಿಚಾರತರ್ಕಸರಣಿ, ಆಕರಶೋಧನ, ದೃಷ್ಟಾಂತಕಲ್ಪನ, ನಿದರ್ಶನನಿರ್ವಣ, ಛಂದೋನಿರ್ವಾಹ, ಅಲಂಕಾರಸರ್ಜನ, ಗುಣ-ರೀತ್ಯನುಸಂಧಾನ, ಸಂನಿವೇಶಸಂಘಟನ, ಪದಗುಂಫನ, ನೂತನಶಬ್ದನಿರ್ವಣ, ನವಪರಿಭಾಷಾಪ್ರಕಲ್ಪನ, ಅನುವಾದದ ಅನುವು, ಕಥನವಿಧಾನದ ಹದ ಮುಂತಾದ ಅದೆಷ್ಟೋ ರಚನಾಸಂಬಂಧಿಯಾದ ಸ್ವಾರಸ್ಯಮೌಲ್ಯಗಳು ನಿಶಿತಪರಿಶೀಲನಕ್ಕೂ ವ್ಯಾಪಕವಿಮರ್ಶನಕ್ಕೂ ಒಳಗಾಗಬೇಕಿವೆ. ಇದಕ್ಕಾಗಿ ಆಸಕ್ತರು ಅವರ ಸಮಗ್ರಸಾಹಿತ್ಯವನ್ನೇ ಅವಲೋಕಿಸಬೇಕು.

ಇಂಥ ಋಷಿಕಲ್ಪರ ಈವರೆಗೆ ಉಳಿದ ಒಟ್ಟು ಬರೆವಣಿಗೆ ಏನಿಲ್ಲವೆಂದರೂ ಹತ್ತು-ಹನ್ನೊಂದು ಸಾವಿರ ಪುಟಗಳಷ್ಟಾದೀತು. ಇದರಲ್ಲಿ ಸಾರ್ವಕಾಲಿಕವೆಂದು ನಚ್ಚಿ ನಲಿಯಬಹುದಾದ ಭಾಗವು ಮೂರು-ನಾಲ್ಕು ಸಾವಿರ ಪುಟಗಳಿಗೆ ಕಡಮೆಯಿಲ್ಲ. ಇಂತಿರಲು ಇದನ್ನೆಲ್ಲ ಪ್ರಾತಿನಿಧಿಕರೂಪದಲ್ಲಿ ಸಂಗ್ರಹಿಸುವುದೆಂದರೆ ಹರಸಾಹಸದ ಮಾತು. ಆದರೂ ಇಂಥ ವಾಚಿಕೆಗಳು ಕಾಲಕಾಲಕ್ಕೆ ಹವಣುಗೊಳ್ಳದೆ ಹೆಚ್ಚಿನ ಓದುಗರಿಗೆ ಅನುಕೂಲವಾಗದು. ಸಾಮಾನ್ಯಜನತೆಗೆ ನಮ್ಮ ಸಾಹಿತ್ಯಲೋಕದ ಹಿರಿಯರ ಸಾರವತ್ತಾದ ಬರೆಹಗಳು ಸಂಗ್ರಹವಾಗಿ ದೊರೆತಲ್ಲದೆ ಸಮಾಜದಲ್ಲಿ ಸದಭಿರುಚಿ ಸಿದ್ಧಿಸದು. ಈ ಕಾರಣದಿಂದಲೇ ಸದ್ಯದ ಸಾಹಸವನ್ನು ಕೈಗೊಳ್ಳುವುದಾಯಿತು.

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯು ಪ್ರಕಟಿಸಲಿರುವ ‘ಡಿ.ವಿ.ಜಿ. ಸಾರಸಂಗ್ರಹ’ ಎಂಬ ಹೆಸರಿನ ಈ ವಾಚಿಕೆಯಲ್ಲಿ ಸುಮಾರು ಸಾವಿರ ಪುಟಗಳ ವ್ಯಾಪ್ತಿಯ ಒಳಗೆ (ಎರಡು ಸಂಪುಟಗಳಲ್ಲಿ) ಡಿವಿಜಿಯವರ ಸಾಹಿತ್ಯಷಣ್ಮುಖನ ಶಕ್ತಿಸಂಚಯವಾಗಿದೆ. ಕಾವ್ಯ-ನಾಟಕ, ಭಾಷೆ-ಸಾಹಿತ್ಯಮೀಮಾಂಸೆ-ವಿಮರ್ಶೆ, ಜ್ಞಾಪಕಚಿತ್ರಶಾಲೆ, ಪತ್ರಿಕೋದ್ಯಮ-ರಾಜ್ಯಶಾಸ್ತ್ರ, ಸಂಶೋಧನೆ-ವ್ಯಕ್ತಿಚಿತ್ರ, ಅಧ್ಯಾತ್ಮ-ಸಂಸ್ಕೃ-ಮೌಲ್ಯಮೀಮಾಂಸೆ ಎಂಬ ಈ ಆರು ಮುಖಗಳ ಮೂಲಕ ಸಹೃದಯರು ಸಾಹಿತ್ಯಸುಬ್ರಹ್ಮಣ್ಯನ ಬ್ರಾಹ್ಮವನ್ನೂ ಸಾರ್ವಜನಿಕಸೇವೆಯೆಂಬ ದೇವಸೇನಾಪತಿಯ ಕ್ಷಾತ್ರವನ್ನೂ ಏಕತ್ರ ಸಾಕ್ಷಾತ್ಕರಿಸಿಕೊಳ್ಳಬಹುದು.

ಇಲ್ಲಿ ಡಿವಿಜಿಯವರ ಕನ್ನಡದ ಬರೆವಣಿಗೆಗಳನ್ನೆಲ್ಲ ಪರಾಮಶಿಸಿ ಆಯ್ಕೆ ಮಾಡುವುದಾಯಿತು. ಇಲ್ಲಿರುವ ಆಯ್ಕೆಯ ಹಿನ್ನೆಲೆಯಲ್ಲಿ ನಮ್ಮ ಒಲವು-ನಿಲವುಗಳು ಒಂದಿಷ್ಟು ಕಾರಣವಾಗಿರಬಹುದಾದರೂ ಬಲುಮಟ್ಟಿಗೆ ಡಿವಿಜಿಯವರ ಭಾವ-ಬುದ್ಧಿಗಳ ಅತ್ಯುತ್ತಮವೂ ಅತ್ಯಂತಸಂಗತವೂ ಆದ ಅಭಿವ್ಯಕ್ತಿಯನ್ನೇ ನಮಗಿರುವ ಪುಟವ್ಯಾಪ್ತಿಯಲ್ಲಿ ಅಡಕಗೊಳಿಸುವ ಪ್ರಯತ್ನ ಮಾಡಿದ್ದೇವೆ. ಹೀಗೆ ಡಿವಿಜಿಯವರ ಬುದ್ಧಿ-ಭಾವಗಳ ಪ್ರಾತಿನಿಧಿಕರೂಪವಾದ ಈ ಸಂಗ್ರಹವು ಸರ್ವಾರ್ಥಗಳಲ್ಲಿ ಗೌಂಡ್ಯದರ್ಶನ, ಗುಂಡೋಪನಿಷತ್ತು.

(ಶತಾವಧಾನಿ ಡಾ. ರಾ. ಗಣೇಶ್ ಮತ್ತು ಬಿ.ಎನ್. ಶಶಿಕಿರಣ್ ಸಂಪಾದಿಸಿರುವ ‘ಡಿ.ವಿ.ಜಿ. ಸಾರಸಂಗ್ರಹ’ದ ಎರಡೂ ಸಂಪುಟಗಳನ್ನು ಇದೇ ಜುಲೈ 22ರ ಸಂಜೆ ಬೆಂಗಳೂರಿನ ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆಯ ಡಿ.ವಿ.ಜಿ. ಸಭಾಂಗಣದಲ್ಲಿ ಡಾ. ಎಸ್.ಎಲ್. ಭೈರಪ್ಪ ಲೋಕಾರ್ಪಣೆ ಮಾಡಲಿದ್ದಾರೆ.)

Leave a Reply

Your email address will not be published. Required fields are marked *

Back To Top