ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿದ ಕೇಂದ್ರ ತಂಡ

ದಾವಣಗೆರೆ: ಕೇಂದ್ರ ಬರ ಅಧ್ಯಯನ ತಂಡ ಭಾನುವಾರ ಜಿಲ್ಲೆಯ ಹರಪನಹಳ್ಳಿ, ಜಗಳೂರು, ದಾವಣಗೆರೆ ತಾಲೂಕಿನ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆನಷ್ಟ ಪರಿಶೀಲಿಸಿತು.

ತಾಲೂಕಿನ ಆನಗೋಡು ಗ್ರಾಮಕ್ಕೆ ಸಂಜೆ ಭೇಟಿ ನೀಡಿದ ತಂಡ ಅಲ್ಲಿನ ರೈತರು ತಮಗಾದ ಬೆಳೆ ಹಾನಿಯ ಕುರಿತು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು. ಗ್ರಾಮದ ಅಣಜಿ ರಸ್ತೆಯಲ್ಲಿರುವ ವಿರೂಪಾಕ್ಷಪ್ಪ ಅವರ ಜಮೀನಿಗೆ ಭೇಟಿ ನೀಡಿದ ಕೇಂದ್ರದ ಅಧಿಕಾರಿಗಳು, ಒಣಗಿದ ಮೆಕ್ಕೆಜೋಳದ ಪೈರನ್ನು ವೀಕ್ಷಿಸಿದರು.

ರೈತ ವಿರೂಪಾಕಪ್ಪ ಮಾತನಾಡಿ, ಎರಡೂವರೆ ಎಕರೆಯಲ್ಲಿ ಕಳೆದ ಜೂನ್‌ನಲ್ಲಿ ಬಿತ್ತನೆ ಮಾಡಿದೆ, ಬೆಳೆ ಹುಟ್ಟಲೇ ಇಲ್ಲ. ಹಸಿ ಮಳೆಯಾದ ನಂತರ 2ನೇ ಬಾರಿ ಬಿತ್ತನೆ ಮಾಡಿದೆ. ನಂತರ ಕಾಳು ಕಟ್ಟುವ ಹಂತದಲ್ಲಿ ಮಳೆಯಾಗಲೇ ಇಲ್ಲ ಎಂದು ಅಳಲು ತೋಡಿಕೊಂಡರು.

ಬೆಳೆಗೆ 30ರಿಂದ 40 ಸಾವಿರ ರೂ. ಖರ್ಚು ಮಾಡಿದ್ದೇನೆ, ಪರಿಹಾರ ಕೊಡಿಸಿ ಎಂದು ಮನವಿ ಮಾಡಿದರು. ನೀರಿನ ಲಭ್ಯತೆ, ಅಂತರ್ಜಲ ಮಟ್ಟದ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದುಕೊಂಡರು. ಪರಿಸ್ಥಿತಿ ಸುಧಾರಿಸಲು ಏನು ಮಾಡಬೇಕು ಎಂದು ಅಧಿಕಾರಿಗಳು ಪ್ರಶ್ನಿಸಿದರು.

ಕೆರೆಗಳನ್ನು ತುಂಬಿಸಬೇಕು. ಕೆರೆ ತುಂಬಿಸಿದರೆ ನಮಗೇನೂ ಸರ್ಕಾರ ಸಾಲ ಮನ್ನಾ ಮಾಡುವುದೇ ಬೇಡ, ನಾವೇ ಸರ್ಕಾರಕ್ಕೆ ಸಾಲ ಕೊಡುತ್ತೇವೆ ಎಂದು ರೈತನೊಬ್ಬ ತಿಳಿಸಿದ. ಗ್ರಾಮದ ಮತ್ತೊಬ್ಬ ರೈತ ಮಲ್ಲಿಕಾರ್ಜುನ್ ತನ್ನ 3 ಎಕರೆ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ ಹಾನಿಯಾಗಿರುವ ಬಗ್ಗೆ ಮಾಹಿತಿ ನೀಡಿದ.

ಪರಿಹಾರಕ್ಕೆ ಶಿಫಾರಸು: ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಂಡದ ಮುಖ್ಯಸ್ಥ ಅಮಿತಾಬ್ ಗೌತಮ್, ರಾಷ್ಟ್ರಿಯ ವಿಪತ್ತು ಪರಿಹಾರ ನಿಧಿ(ಎನ್‌ಡಿಆರ್‌ಎಫ್)ಯಿಂದ ರೈತರಿಗೆ ಸಾಧ್ಯವಾದಷ್ಟು ಹೆಚ್ಚಿನ ಪರಿಹಾರ ದೊರೆಯುವ ನಿಟ್ಟಿನಲ್ಲಿ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಭರವಸೆ ನೀಡಿದರು.

ಕೇಂದ್ರದಿಂದ 2017-18ರಲ್ಲಿ 229 ಕೋಟಿ ರೂ, 2018-19ರಲ್ಲಿ 145 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಲಾಗಿದೆ ಎಂದರು. ಜಿಲ್ಲಾಧಿಕಾರಿ ಡಾ.ಗೌತಮ್, ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ತಹಸೀಲ್ದಾರ್ ಸಂತೋಷ್ ಕುಮಾರ್ ಇತರರಿದ್ದರು.