ನಗರ ಜಿಲ್ಲೆ ಅಭಿವೃದ್ಧಿಗೆ 50,447 ಕೋಟಿ ರೂ. ಕ್ರಿಯಾಯೋಜನೆ

ಬೆಂಗಳೂರು: 2019-20ನೇ ಆರ್ಥಿಕ ವರ್ಷಕ್ಕೆ ಬೆಂಗಳೂರು ನಗರ ಜಿಲ್ಲೆಗೆ ವಿವಿಧ ಯೋಜನೆಗಳಡಿ 50,447 ಕೋಟಿ ರೂ. ಮೀಸಲಿರಿಸಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಆರ್ಥಿಕ ಕ್ರಿಯಾಯೋಜನೆ (ಪಿಎಲ್​ಪಿ) ಸಿದ್ಧಪಡಿಸಿದೆ. 2018-19ನೇ ಸಾಲಿಗೆ ಹೋಲಿಸಿದರೆ ಪಿಎಲ್​ಪಿ ಶೇ.34 ಅಧಿಕವಾಗಿದೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ.

ಬನಶಂಕರಿಯಲ್ಲಿರುವ ನಗರ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಶನಿವಾರ (ಡಿ.29) ತಮ್ಮ ನೇತೃತ್ವದಲ್ಲಿ ನಡೆದ 2018-19ನೇ ಸಾಲಿನ ಪಿಎಲ್​ಪಿ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. 2018-19ರಲ್ಲಿ ವಿವಿಧ ಸಾಲ ಯೋಜನೆಗಳಿಗೆ 37,647 ಕೋಟಿ ರೂ.ಮೀಸಲಿರಿಸಲಾಗಿತ್ತು. ಆರ್ಥಿಕ ವರ್ಷ ಮುಗಿಯುವುದರೊಳಗೇ ಈ ಗುರಿ ದಾಟಲಾಗಿದೆ. 2019-20ಕ್ಕೆ ಪಿಎಲ್​ಪಿ ಶೇ.34 ಹೆಚ್ಚಳವಾಗಿದೆ. ಒಟ್ಟು ಮೊತ್ತದಲ್ಲಿ ಶೇ.55.02ರನ್ನು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗೆ, ಗೃಹ ನಿರ್ವಣಕ್ಕಾಗಿ ಶೇ.25.21, ಶೇ.14.06 ಕೃಷಿ ನಿರ್ವಹಣೆ, ಮಾರುಕಟ್ಟೆ, ಸಾಲಕ್ಕೆ ಹಾಗೂ ಇತರೆ ಕ್ಷೇತ್ರಗಳಿಗೆ ಉಳಿದ ಮೊತ್ತ ಮೀಸಲಿರಿಸಲಾಗುವುದು ಎಂದು ವಿವರಿಸಿದರು.

ಸಾಲ ಮನ್ನಾ ಚರ್ಚೆಯಾಗಿಲ್ಲ: ಕೇಂದ್ರ ಸಚಿವ ಸಂಪುಟದಲ್ಲಿ ಬೆಳೆ ಸಾಲ ಮನ್ನಾ ಕುರಿತು ಚರ್ಚೆಯಾಗಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ರೈತರನ್ನು ಸ್ವಾವಲಂಬಿ ಮಾಡುವ ಪ್ರಯತ್ನದಲ್ಲಿದ್ದಾರೆ. ಈ ಹಿನ್ನೆಲೆಯಲ್ಲೇ ಬೆಳೆ ವಿಮೆ, ಕೃಷಿ ಸಿಂಚಯ ಹೀಗೆ ಹಲವು ಯೋಜನೆ ಮೂಲಕ ರೈತರ ಆದಾಯ ದುಪ್ಪಟ್ಟುಗೊಳಿಸಲಾಗುತ್ತಿದೆ. ಬಜೆಟ್ ಇರುವುದರಿಂದ ರೈತರಿಗೆ ಅನುಕೂಲವಾಗುವ ಹಲವು ವಿಚಾರಗಳ ಬಗ್ಗೆ ರ್ಚಚಿಸಿದ್ದಾರೆ. ಆದರೆ, ಈ ಘೋಷಣೆಗಳು ಚುನಾವಣೆ ದೃಷ್ಟಿಯಿಂದ ಮಾಡಲಾಗುತ್ತಿಲ್ಲ ಎಂದರು.

ಸುಮ್ಮನೇ ಅರ್ಜಿ ಸ್ವೀಕರಿಸಬೇಡಿ!‘ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅನುಷ್ಠಾನ ಕುರಿತು ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಪ್ರಗತಿ ಪರಿಶೀಲನಾ ಸಭೆಯಲ್ಲೇ ಡಿವಿಎಸ್ ಸಿಟ್ಟಾದರು. ಪಿಎಂಎವೈನಡಿ 10,972 ಅರ್ಜಿಗಳನ್ನು ಪೋರ್ಟಲ್ ಮೂಲಕ ಸ್ವೀಕರಿಸಲಾಗಿದೆ. ಇದರಲ್ಲಿ ಕೇವಲ 40 ಅರ್ಜಿಗಳಷ್ಟೇ ಸಾಲ ಪಡೆಯಲು ಅರ್ಹವಾಗಿದ್ದು, 15 ಅರ್ಜಿಗಳಿಗಷ್ಟೇ ಸಾಲ ನೀಡಲಾಗಿದೆ. 2020ರೊಳಗೆ ಎಲ್ಲರಿಗೂ ಸೂರು ನೀಡುವ ಯೋಜನೆ ಇದಾಗಿದೆ. ಇಷ್ಟೊಂದು ಅರ್ಜಿ ಸ್ವೀಕರಿಸಿ ಜನರನ್ನು ಅಲೆದಾಡಿಸುವ ಬದಲು, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸಂದರ್ಭದಲ್ಲೇ ಅರ್ಹತೆಯ ಬಗ್ಗೆ ಪರಿಶೀಲಿಸಿ ಎಂದು ಖಡಕ್ ಸೂಚನೆ ನೀಡಿದರು.ಭಾರತೀಯ ರಿಸರ್ವ್ ಬ್ಯಾಂಕ್ ಎಜಿಎಂ ನಾಗರಾಜ್, ಕೆನರಾ ಬ್ಯಾಂಕ್ ಡಿಜಿಎಂ ವಿಜಯಲಕ್ಷ್ಮೀ ಮತ್ತಿತರರಿದ್ದರು.

ಆಪರೇಷನ್ ಕಮಲ ಬೇಕಿಲ್ಲ

ಬೆಂಗಳೂರು: ಅಧಿಕಾರ ಹಿಡಿಯಲು ಆಪರೇಷನ್ ಕಮಲ ಬೇಕಾಗಿಲ್ಲ. ಅತೃಪ್ತರು ಪಕ್ಷದಿಂದ ದೂರ ಉಳಿದರೆ ಸರ್ಕಾರವೇ ಆಡಳಿತದಲ್ಲಿ ಇರುವುದಿಲ್ಲ ಎಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ. ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಪ್ರಗತಿ ಪರಿಶೀಲನೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿವಿಎಸ್, ಪ್ರಜಾಪ್ರಭುತ್ವದಲ್ಲಿ 49 ಎಂದರೆ ಶೂನ್ಯ, 51 ಎಂದರೆ ನೂರು. ಇಂತಹ ಸಂದರ್ಭ ಎದುರಾದಲ್ಲಿ ಅದು ಆಪರೇಷನ್ ಕಮಲ ಅಲ್ಲ. ಅತೃಪ್ತರೆಲ್ಲರೂ ರಾಜಕೀಯ ಸನ್ಯಾಸತ್ವ ತೆಗೆದುಕೊಂಡರೆ ಸರ್ಕಾರ ತನ್ನಿಂದ ತಾನಾಗಿಯೇ ಬಿದ್ದು ಹೋಗಲಿದೆ. ಲೋಕಸಭೆ ಚುನಾವಣೆಗೂ ಮೊದಲೇ ಬೀಳಬಹುದು ಎಂದರು.

ರೇವಣ್ಣ ಹಿಡಿತದಲ್ಲಿ ಸರ್ಕಾರ!: ಸರ್ಕಾರ ಅವರ ನಿಯಂತ್ರಣದಲ್ಲೇ ಇರಬೇಕು ಎನ್ನುವ ರೀತಿ ಎಚ್.ಡಿ. ರೇವಣ್ಣ ಮಾತನಾಡುತ್ತಿದ್ದಾರೆ. ಎಲ್ಲವೂ ಅಧಃಪತನದ ಕಡೆ ಸಾಗಿದೆ ಎಂದು ಡಿವಿಎಸ್ ವ್ಯಾಖ್ಯಾನಿಸಿದರು.

ಸಮಗ್ರ ಕೃಷಿ, ನವೀಕರಿಸಬಹುದಾದ ಇಂಧನ, ನೀರಿನ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಬ್ಯಾಂಕ್​ಗಳು ವಿಂಗಡಿಸಿದ ಡೇಟಾ ನೀಡದೆ ಇರುವುದು ಕ್ರಿಯಾ ಯೋಜನೆ ಸಿದ್ಧಪಡಿಸಲು ಸಮಸ್ಯೆಯಾಗಿದೆ.

| ಪ್ರಭಾ ನಬಾರ್ಡ್