ಪ್ರವಾಹಕ್ಕೆ ಸಿಲುಕಿದ್ದ 156 ಮಂದಿ ರಕ್ಷಿಸಿದ್ದ ಸಂತ್ರಸ್ತರಿಂದ ಯೋಧರಿಗೆ ಕಣ್ಣೀರ ಬೀಳ್ಕೊಡುಗೆ

ಚಿಕ್ಕಮಗಳೂರು: ಅವರ ಕಣ್ಣಲ್ಲಿ ಪ್ರವಾಹದಲ್ಲಿ ಬದುಕು ಕಳೆದುಕೊಂಡವರನ್ನು ಪರಿಹಾರ ಕೇಂದ್ರಗಳಿಗೆ ಕರೆತಂದು ಬಿಟ್ಟ ಸಂತೃಪ್ತಿ… ದುರ್ಗಮ ವಾತಾವರಣದಲ್ಲಿ ಒಬ್ಬರಿಗೂ ತೊಂದರೆಯಾಗದಂತೆ ಸುರಕ್ಷಿತ ಸ್ಥಳಕ್ಕೆ ಹೊತ್ತು ತಂದ ಧನ್ಯತಾ ಭಾವ… ಸಂಕಷ್ಟಕ್ಕೆ ಸಿಲುಕಿದವರ ಕಣ್ಣೀರು ಒರೆಸಿದ ಸಾರ್ಥಕ ಮಂದಹಾಸ…

ಅವರು ಇಲ್ಲಿ ಇದ್ದಿದ್ದು ನಾಲ್ಕೇ ದಿನ, ಆದರೆ ಕಾಫಿ ನಾಡಿನ ಜನರು ಮನದಲ್ಲಿ ನೆನಪಿಟ್ಟುಕೊಳ್ಳುವಂತಹ ಕಾರ್ಯವನ್ನು ಮಾಡಿದ್ದರು. ಅವರೇ ನಮ್ಮ ಹೆಮ್ಮೆಯ ಯೋಧರು.

ಜಿಲ್ಲೆಯ ಪ್ರವಾಹಪೀಡಿತ ಪ್ರದೇಶದಿಂದ ನಾಲ್ಕು ದಿನಗಳಲ್ಲಿ 156 ಸಂತ್ರಸ್ತರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ವಿಶೇಷವಾಗಿ ಮೂಡಿಗೆರೆ ತಾಲೂಕು ಮಲೆಮನೆ, ಬಾಳೂರು ಮುಂತಾದ ಕುಗ್ರಾಮಗಳಿಂದ ಏಳೆಂಟು ಕಿಮೀ ದೂರದಷ್ಟು ವೃದ್ಧರು ಮತ್ತು ರೋಗಿಗಳನ್ನು ಹೊತ್ತು ತಂದಿದ್ದಾರೆ.

ದೇಶದ ಯಾವುದೇ ಮೂಲೆಯಲ್ಲಿ ನಾಗರಿಕರಿಗೆ ಏನೇ ತೊಂದರೆಯಾದರೂ ನಾವು ರಕ್ಷಣೆ ಸಿದ್ಧ ಎನ್ನುತ್ತಿದ್ದ ಯೋಧರು ಮಲೆನಾಡಿನ ಜನತೆಗೂ ನಾವಿದ್ದೇವೆ ಎಂಬ ಮಾನಸಿಕ ಸ್ಥೈರ್ಯ ತುಂಬಿ ಹೋಗಿದ್ದಾರೆ. ಮಳೆ ಮತ್ತೆ ಮರುಕಳಿಸಿದರೆ ಕೇವಲ ಆರೇಳು ಗಂಟೆಯಲ್ಲಿ ಜಿಲ್ಲೆಗೆ ಆಗಮಿಸುತ್ತೇವೆ ಎಂಬ ಅಭಯ ನೀಡಿದರು.

ಬೆಂಗಳೂರಿನ ಎಂಇಜಿಯಲ್ಲಿರುವ 10ನೇ ಬೆಟಾಲಿಯನ್​ನ ಇಂಜಿನಿಯರಿಂಗ್ ಟಾಸ್ಕ್​ಫೋರ್ಸ್ 34 ಯೋಧರ ತಂಡ ಯಶಸ್ವಿ ರಕ್ಷಣಾ ಕಾರ್ಯ ನಡೆಸಿತು. ಜಿಲ್ಲೆಯ ನೆರ ಸಂತ್ರಸ್ತರ ಸೇವೆ ಮಾಡುವ ಮೂಲಕ ಜೀವನದಲ್ಲಿ ಸಾರ್ಥಕ ಸೇವೆ ಮಾಡಿದ ನೆನಪಿನ ಬುತ್ತಿಯನ್ನು ಅವರು ಹೊತ್ತೊಯ್ದುರು.

ಮೂಡಿಗೆರೆ ತಾಲೂಕಿನ ಅನೇಕ ಸಂತ್ರಸ್ತರು ಯೋಧರಿಗೆ ಕಣ್ಣೀರಿನ ಮೂಲಕ ಧನ್ಯವಾದ ಅರ್ಪಿಸಿದ್ದಾರೆ. ಮತ್ತೆ ಕೆಲ ಮಹಿಳೆಯರು ರಾಕಿ ಕಟ್ಟುವ ಮೂಲಕ ಅವರಿಗೆ ಯಾವತ್ತೂ ನಿಮ್ಮ ಸಹಾಯ ಮರೆಯುವುದಿಲ್ಲವೆಂದು ಮನದುಂಬಿ ಹೇಳಿದ್ದಾರೆ.

ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸೇರಿಸುವ ಜಾವಾಬ್ದಾರಿ ಮುಗಿದ ನಂತರ ಯೋಧರು ಬೆಂಗಳೂರಿನತ್ತ ಮುಖಮಾಡಿದರು. ಕೇವಲ ನಾಲ್ಕು ದಿನದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲೆಯ ಜನರೊಂದಿಗೆ ಪ್ರೀತಿ ಸಂಪಾದಿಸಿದ್ದ ಅವರು ಹೋಗುವಾಗ ಭಾರವಾದ ಮನಸ್ಸಿನಿಂದಲೇ ಕೈ ಬೀಸುತ್ತ ಬೆಟಾಲಿಯನ್ ವಾಹನದಲ್ಲಿ ಬೆಂಗಳೂರಿಗೆ ಸಾಗಿದರು.