ಮಹಿಳೆಯರಿಗೆ ಬೇಕು ಸಾಧಿಸುವ ಛಲ

ಚಿಕ್ಕಮಗಳೂರು: ಮಹಿಳೆಯಲ್ಲಿ ಸಾಧಿಸುವ ಛಲವೊಂದಿದ್ದರೆ ಕುಟುಂಬ ಮತ್ತು ಸಮಾಜವನ್ನು ಆಕೆ ಸರಿಯಾದ ಮಾರ್ಗದಲ್ಲಿ ಒಯ್ಯಬಲ್ಲಳು ಎಂದು ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯು ಡಾ. ಕೆ.ಆರ್.ಶಶಿರೇಖಾ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದಿಂದ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಉನ್ನತ ಹುದ್ದೆಗಳನ್ನು ಪಡೆದು ಅತ್ಯಂತ ಪ್ರಾಮಾಣಿಕತೆ ಮತ್ತು ಪಾರದರ್ಶಕವಾಗಿ ಆಡಳಿತ ನಡೆಸಿ ಉತ್ತಮ ಕರ್ತವ್ಯ ನಿರ್ವಹಿಸಿ ಜನರ ವಿಶ್ವಾಸ ಗಳಿಸಿದ್ದಾರೆ ಎಂದರು.

ಮಹಿಳೆಯರು ಧಾರಾವಾಹಿ ಮತ್ತು ಮೊಬೈಲ್ ಹೆಚ್ಚಾಗಿ ಬಳಸುವುದರಿಂದ ಮಾನಸಿಕವಾಗಿ ಬಳಲುತ್ತಾರೆ. ಬದಲಾಗಿ ದಿನನಿತ್ಯದ ಚಟುವಟಿಕೆಯ ಜತೆಗೆ ಮಾನಸಿಕವಾಗಿ ಕ್ರಿಯಾಶೀಲರಾಗಿರಲು ಯೋಗ, ಧ್ಯಾನ ಮಾಡುವುದಲ್ಲದೆ, ಸಂಘ ಸಂಸ್ಥೆಗಳೊಂದಿಗೆ ಸೇರಿಕೊಂಡು ಕುಟುಂಬ ಹಾಗೂ ಸಮಾಜ ಸೇವಾ ಕೆಲಸದಲ್ಲಿ ಭಾಗಿಯಾಗಬೇಕು ಎಂದರು.

ರಾಜ್ಯದಲ್ಲಿ ಚಿಕ್ಕಮಗಳೂರಿನ ಸಂಸ್ಕೃತಿ ಮತ್ತು ಮಹಿಳೆಯರಿಗೆ ಮೊದಲ ಸ್ಥಾನ ಇದೆ. ಇದನ್ನು ಮುಂದುವರಿಸಿಕೊಂಡು ಹೋಗಬೇಕು. ಶಿಕ್ಷಣ ಎಂಬುವುದು ಒಂದು ಮಾಧ್ಯಮವಾಗಿರಬೇಕು. ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು. ಏಷಿಯನ್ ಪ್ಯಾರಾ ಗೇಮ್ಸ್​ನಲ್ಲಿ ಚಿನ್ನದ ಪದಕ ಪಡೆದ ಆಶಾಕಿರಣ ಶಾಲೆಯ ವಿದ್ಯಾರ್ಥಿನಿ ರಕ್ಷಿತರಾಜು ಅವರನ್ನು ಸನ್ಮಾನಿಸಲಾಯಿತು.

ದೇಶೀಯ ಸಂಸ್ಕೃತಿ ಬೆಳೆಸಿ: ಗೌರವ ಸ್ವೀಕರಿಸಿ ಮಾತನಾಡಿ ಡಾ. ಶ್ರೀಲತಾ ನಾಗೇಂದ್ರ, ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಪ್ರತೀ ವರ್ಷ ತಮ್ಮ ಆರೋಗ್ಯ ತಪಾಸಣೆ ಮಾಡುವುದರ ಜತೆಗೆ ಗುಣಮಟ್ಟದ ಆಹಾರ ಸೇವಿಸಬೇಕು ಎಂದರು. ಆಧುನಿಕ ಯುಗದಲ್ಲಿ ಮಹಿಳೆಯರು ವಿದೇಶಿ ಸಂಸ್ಕೃತಿಗೆ ಮಾರು ಹೋಗದೆ ನಮ್ಮ ಸಂಸ್ಕೃತಿ ಬೆಳೆಸಬೇಕು. ತಂದೆ ತಾಯಿಗಳು ಮಕ್ಕಳ ಆಸಕ್ತಿಗೆ ತಕ್ಕಂತೆ ಪ್ರೋತ್ಸಾಹಿಸಿದಾಗ ಹಾಡುಗಾರಿಕೆ, ನೃತ್ಯ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಉತ್ತಮ ಅವಕಾಶವಿದೆ ಎಂದರು.