ಧೃತಿಗೆಡದೆ ಕರ್ತವ್ಯ ನಿರ್ವಹಿಸಿ

ಚಾಮರಾಜನಗರ: ವಿಕೋಪದ ಸಂದರ್ಭಗಳಲ್ಲಿ ಅಧಿಕಾರಿಗಳು ಧೃತಿಗೆಡದೆ ಕರ್ತವ್ಯ ನಿರ್ವಹಿಸಿದಾಗ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಜಿಲ್ಲಾ ತರಬೇತಿ ಸಂಸ್ಥೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ವಿಕೋಪ ನಿರ್ವಹಣಾ ಕ್ರಿಯಾ ಯೋಜನೆ ಪರಿಷ್ಕರಣೆ ಹಾಗೂ ತಯಾರಿಕೆ ಕುರಿತ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ವಿಕೋಪಗಳು ನಡೆದಾಗ ಸೂಕ್ಷ್ಮವಾಗಿ ಕೆಲಸ ಮಾಡುವ ಅಗತ್ಯವಿರುತ್ತದೆ. ಇಂತಹ ಸಂದರ್ಭಗಳಲ್ಲಿ ಹೆಚ್ಚಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಹೊರತುಪಡಿಸಿ ಬೇರೆ ಯಾರೂ ಕಾಣಿಸಿಕೊಳ್ಳುವುದಿಲ್ಲ. ಆದರೆ ಘಟನೆ ನಡೆದ ವ್ಯಾಪ್ತಿಯಲ್ಲಿನ ಎಲ್ಲ ಇಲಾಖೆಗಳ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು ಎಂದರು.

ಅಪಘಾತಗಳು ಸಂಭವಿಸಿದಾಗ ರಸ್ತೆಯಲ್ಲಿ ಹೋಗುವ ಸರ್ಕಾರಿ ಅಧಿಕಾರಿಗಳು ಗಾಯಗೊಂಡವರಿಗೆ ಸಹಾಯ ಮಾಡಲು ಮುಂದೆ ಬರಬೇಕು. ನೆರೆಯಾದಾಗ ಪೂರ್ವ ಸಿದ್ಧತಾ ಕ್ರಮಗಳನ್ನು ಕೈಗೊಂಡರೆ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ. ಸುಳವಾಡಿ ಪ್ರಕರಣದಲ್ಲಿ ನೂರಾರು ಜನರು ಬಂದಾಗ ಅವರನ್ನು ನಿರ್ವಹಣೆ ಮಾಡುವುದು ಕಷ್ಟವಾಯಿತು ಎಂದರು.

ದುರ್ಘಟನೆಗಳಾದಾಗ ಅಲ್ಲಿ ಸೇರುವ ಹೆಚ್ಚಿನ ಪ್ರಮಾಣದ ಜನರಿಂದ ಗಾಯಾಳುಗಳು ಮೃತಪಡುವ ಸಂಭವ ಹೆಚ್ಚಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಜನರನ್ನು ಗಾಯಾಳುಗಳಿಂದ ದೂರ ಇರುವಂತೆ ನೋಡಿಕೊಳ್ಳಬೇಕು. ಜತೆಗೆ ವಿಕೋಪ ಸಂದರ್ಭದಲ್ಲಿ ಸರ್ಕಾರ, ಸಂಘ ಸಂಸ್ಥೆಗಳು ನೀಡುವ ಸವಲತ್ತುಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಮಳೆ, ಬಿರುಗಾಳಿ ಬರುವ ಮುನ್ಸೂಚನೆಯನ್ನು ಅಧಿಕಾರಿಗಳು ಸರಿಯಾಗಿ ಅವಲೋಕನ ಮಾಡಿ ಸಂಘಟಿತವಾಗಿ ಕರ್ತವ್ಯ ನಿರ್ವಹಿಸಬೇಕು. ಕಾಡಿನಲ್ಲಿ ಬೆಂಕಿ ಬಿದ್ದಾಗಲೂ ತಮ್ಮ ಕರ್ತವ್ಯನಿಷ್ಠೆಯನ್ನು ತೋರಬೇಕು. ಪ್ರಬುದ್ಧತೆಯಿಂದ ಕರ್ತವ್ಯ ನಿರ್ವಹಿಸಿದಾಗ ಯಶಸ್ಸು ಗಳಿಸಲು ಸಾಧ್ಯ ಎಂದರು.
ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ನಾಗರಾಜ, ವಿಕೋಪ ನಿರ್ವಹಣಾ ಕೇಂದ್ರದ ಬೋಧಕ ಚಂದ್ರನಾಯಕ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *