ಸಲಿಂಗಿ ದ್ಯುತಿಗೆ ತಾಯಿಯಿಂದ ವಿರೋಧ: ಯುವತಿ ಮನೆಯವರ ಒತ್ತಡದಿಂದ ದ್ಯುತಿ ಹೇಳಿಕೆ ನೀಡಿದ್ದಾರೆಂದ ಸಹೋದರಿ

ಭುವನೇಶ್ವರ: ಯುವತಿ ಮನೆಯವರ ಒತ್ತಡ ಹಾಗೂ ಬೆದರಿಕೆಯಿಂದಲೇ ದ್ಯುತಿ ಚಂದ್ ಸಲಿಂಗ ಪ್ರೇಮ ಪ್ರಸ್ತಾಪಿಸಿದ್ದಾರೆ. ಆಸ್ತಿ ಕಬಳಿಸುವ ಉದ್ದೇಶದಿಂದಲೇ ಯುವತಿ ಕಡೆಯವರು ಇಂಥ ಹುನ್ನಾರ ನಡೆಸುತ್ತಿದ್ದಾರೆ ಎಂದು ದ್ಯುತಿ ಚಂದ್ ಹಿರಿಯ ಸಹೋದರಿ ಸರಸ್ವತಿ ಚಂದ್ ಆರೋಪಿಸಿದ್ದಾರೆ. ಭಾರತದ ಅಗ್ರ ಅಥ್ಲೀಟ್ ದ್ಯುತಿ ಚಂದ್, ತಾವು ಸಲಿಂಗಿ ಎನ್ನುವುದನ್ನು ಭಾನುವಾರ ಬಹಿರಂಗ ಪಡಿಸಿದ ಬೆನ್ನಲ್ಲಿಯೇ ಅವರ ಕುಟುಂಬ ಈ ಆರೋಪ ಮಾಡಿದೆ. ‘ದ್ಯುತಿ ಜೀವ ಹಾಗೂ ಆಸ್ತಿ ಅಪಾಯದಲ್ಲಿದ್ದು, ದ್ಯುತಿಗೆ ಒಡಿಶಾ ಸರ್ಕಾರ ಸೂಕ್ತ ಭದ್ರತೆ ಒದಗಿಸಬೇಕು’ ಎಂದು ಸರಸ್ವತಿ ಒತ್ತಾಯಿಸಿದ್ದಾರೆ.

ದ್ಯುತಿ ಚಂದ್ ವೃತ್ತಿ ಜೀವನಕ್ಕೆ ಅಡ್ಡಿಯುಂಟು ಮಾಡುವ ಸಲುವಾಗಿಯೇ ಯುವತಿ ಕಡೆಯವರು ಇಂಥ ಹುನ್ನಾರ ನಡೆಸಿದ್ದು, ದ್ಯುತಿಗೆ ಬ್ಲಾಕ್​ವೆುೕಲ್ ಮಾಡಲಾಗುತ್ತಿದೆ ಎಂದು ಅಥ್ಲೀಟ್ ಕೂಡ ಆಗಿರುವ ಸರಸ್ವತಿ ಈ ಆರೋಪ ಮಾಡಿದ್ದಾರೆ. ದ್ಯುತಿ ಸಲಿಂಗ ಪ್ರೇಮ ಪ್ರಸ್ತಾಪದ ಬಗ್ಗೆ ಮಾತನಾಡಿದ ಸರಸ್ವತಿ, ದ್ಯುತಿ ಈಗ ವಯಸ್ಸಿಗೆ ಬಂದ ಹುಡುಗಿ. ಮದುವೆ ಬಗ್ಗೆ ನಿರ್ಧರಿಸುವುದಕ್ಕೆ ಅವಳು ಸ್ವತಂತ್ರಳು, ಹುಡುಗ ಅಥವಾ ಹುಡುಗಿಯಾರನ್ನೇ ಮದುವೆಯಾಗಲಿ, ಅಭ್ಯಂತರವಿಲ್ಲ. ಆದರೆ, ದ್ಯುತಿ ಹೇಳಿರುವ ಹೇಳಿಕೆ ಹಿಂದೆ ಯುವತಿ ಕುಟುಂಬಸ್ಥರ ಕೈವಾಡವಿದೆ ಎಂದು ಸರಸ್ವತಿ ಗಂಭೀರ ಆರೋಪ ಮಾಡಿದ್ದಾರೆ.

‘ದ್ಯುತಿ ಅವರನ್ನು ವಿವಾದದ ಕೇಂದ್ರಬಿಂದು ಮಾಡಿ, ಆಕೆ ವೃತ್ತಿ ಜೀವನವನ್ನು ಮುಗಿಸಲು ಯುವತಿ ಕುಟುಂಬಸ್ಥರು ನಿರ್ಧರಿಸಿದ್ದಾರೆ. 2020ರ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಪದಕ ನಿರೀಕ್ಷೆ ಇಟ್ಟುಕೊಂಡಿರುವ ದ್ಯುತಿ ಚಂದ್​ರಿಂದ ಅಸಂಬದ್ಧ ಹೇಳಿಕೆಗಳನ್ನು ಹೇಳಿಸುವ ಮೂಲಕ ಆಕೆಯ ಜೀವನವನ್ನು ಹಾಳು ಮಾಡಲು ಯತ್ನಿಸುತ್ತಿದ್ದಾರೆ’ ಎಂದು ಸರಸ್ವತಿ ಕಿಡಿ ಕಾರಿದ್ದಾರೆ. ‘ಮಕ್ಕಳು ಸಾಧನೆ ಮಾಡಿದರೆ ಎಲ್ಲ ಕಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತದೆ. ಅದೇ ಮಕ್ಕಳು ತಪು್ಪ ಮಾಡಿದರೆ ಪಾಲಕರನ್ನು ಹೊಣೆಯಾಗಿಸುತ್ತಾರೆ. ಇದು ದ್ಯುತಿ ಚಂದ್ ಪ್ರಕರಣದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ’ ಎಂದರು.

ಸಲಿಂಗ ಪ್ರೇಮವನ್ನು ಸಮಾಜ ಒಪ್ಪುವುದಿಲ್ಲ

ದ್ಯುತಿ ಚಂದ್ ಪ್ರಸ್ತಾಪಿಸಿರುವ ಸಲಿಂಗ ಪ್ರೇಮವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಆಕೆಯ ತಾಯಿ ಅಖೋಜಿ ಚಂದ್ ಒಡಿಶಾ ಜಾಜ್ಪುರದಲ್ಲಿ ಹೇಳಿದ್ದಾರೆ. ‘ದ್ಯುತಿ ಚಂದ್ ಮದುವೆಯಾಗಲು ನಿರ್ಧರಿಸಿರುವ ಹುಡುಗಿ, ನನ್ನ ಸಹೋದರಿಯ ಮೊಮ್ಮಗಳು ಆಕೆ. ಸಂಬಂಧದಲ್ಲಿ ನನಗೆ ಮೊಮ್ಮಗಳಾದರೆ, ಆಕೆಗೆ ದ್ಯುತಿ ತಾಯಿ ಸಮಾನ. ಇಂಥ ಮದುವೆಯಾದರೆ, ಸಮಾಜ ಒಪು್ಪವುದಿಲ್ಲ ಎಂದು ಅಖೋಜಿ ಹೇಳಿದ್ದಾರೆ. ‘ನಾನು ಬದುಕಿರುವವರೆಗೂ ಇದಕ್ಕೆ ಒಪ್ಪಿಗೆ ಸೂಚಿಸುವುದಿಲ್ಲ. ಅವಳ (ದ್ಯುತಿ) ಪರ ಕೋರ್ಟ್ ತೀರ್ಪು ಬಂದರೂ ನಾನು ಒಪು್ಪವುದಕ್ಕೆ ಸಾಧ್ಯವಿಲ್ಲ’ ಎಂದಿದ್ದಾರೆ.

Leave a Reply

Your email address will not be published. Required fields are marked *