19 ವರ್ಷದ ಬಾಲಕಿ ಜತೆ ಭಾರತದ ಚಿಗರೆ ಸಲಿಂಗ ಕಾಮ, ಸತ್ಯ ಒಪ್ಪಿಕೊಂಡ ಭಾರತದ ಮೊದಲ ಅಥ್ಲೀಟ್​

ನವದೆಹಲಿ: ಭಾರತದಲ್ಲೇ ಅತಿವೇಗವಾಗಿ ಓಡುವ ಮಹಿಳೆ ಎಂಬ ಹೆಗ್ಗಳಿಕೆ ಇವರದ್ದು. ಸಾಲದ್ದಕ್ಕೆ ಏಷ್ಯನ್​ ಗೇಮ್ಸ್​ನಲ್ಲಿ ಬೆಳ್ಳಿ ಪದಕಗಳನ್ನು ಗೆದ್ದು ರಾಷ್ಟ್ರದ ಕೀರ್ತಿ ಪತಾಕೆ ಹಾರಿಸಿದವರು. ಇದೀಗ ಇವರು ತಮ್ಮೂರಿನ ಬಾಲಕಿಯೊಂದಿಗೆ ಸಲಿಂಗ ಕಾಮ ಸಂಬಂಧ ಹೊಂದಿರುವುದಾಗಿ ಇವರು ಹೇಳಿದ್ದಾರೆ. ಈ ರೀತಿ ಬಹಿರಂಗವಾಗಿ ಸತ್ಯ ಒಪ್ಪಿಕೊಂಡ ಭಾರತದ ಮೊದಲ ಅಥ್ಲೀಟ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅವರೇ ಧ್ಯುತಿ ಚಂದ್​. 100 ಮೀಟರ್​ ಓಟದಲ್ಲಿ ರಾಷ್ಟ್ರೀಯ ದಾಖಲೆಯನ್ನು ತಮ್ಮ ಹೆಸರಿಗೆ ಹೊಂದಿರುವ 23 ವರ್ಷದ ಇವರನ್ನು ಭಾರತದ ಚಿಗರೆ ಎಂದೇ ಕರೆಯಲಾಗುತ್ತದೆ. ಅಥ್ಲೆಟಿಕ್ಸ್​ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಲು ಇವರು ಸಾಕಷ್ಟು ಕಷ್ಟಕೋಟಲೆಗಳನ್ನು ಅನುಭವಿಸಿದ್ದಾರೆ. ಇವೆಲ್ಲವನ್ನೂ ಕಣ್ಣಾರೆ ಕಂಡಿರುವ ತಮ್ಮ ಸಂಬಂಧಿ ಹಾಗೂ ಭುವನೇಶ್ವರದ ನಿವಾಸಿ 19 ವರ್ಷದ ಮಹಿಳೆಗೆ ತಮ್ಮ ಬಗ್ಗೆ ಅನುಕಂಪ ಹಾಗೂ ಪ್ರೀತಿ ಮೂಡಿದೆ. ಹಾಗಾಗಿ ತಾವಿಬ್ಬರೂ ಕಳೆದ ಐದು ವರ್ಷದಿಂದ ಸಲಿಂಗ ಸಂಬಂಧ ಹೊಂದಿರುವುದಾಗಿಯೂ, ಸಮಯ ಸಿಕ್ಕಾಗಲೆಲ್ಲಾ ತಾವಿಬ್ಬರೂ ಒಟ್ಟಾಗಿ ಸಮಯ ಕಳೆಯುವುದಾಗಿಯೂ ಧ್ಯುತಿ ಹೇಳಿದ್ದಾರೆ.

ಸಂಬಂಧ ಮುಂದುವರಿಸುವ ಬಗ್ಗೆ ಇತ್ತು ಆತಂಕ
ಭಾರತದಲ್ಲಿ ಸಲಿಂಗ ಕಾಮವನ್ನು ನ್ಯಾಯಬದ್ಧಗೊಳಿಸಿ ಸುಪ್ರೀಂಕೋರ್ಟ್​ 2018 ಸೆಪ್ಟೆಂಬರ್​ನಲ್ಲಿ ಆದೇಶ ಹೊರಡಿಸುವವರೆಗೂ ತಮ್ಮ ಸಲಿಂಗ ಕಾಮ ಸಂಬಂಧ ಮುಂದುವರಿಸುವ ಬಗ್ಗೆ ಆತಂಕ ಇದ್ದುದಾಗಿ ಧ್ಯುತಿ ಹೇಳಿದ್ದಾರೆ. ಆದರೆ, ಸುಪ್ರೀಂಕೋರ್ಟ್​ ತೀರ್ಪಿನ ಬಳಿಕ ನಾವಿಬ್ಬರೂ ಒಟ್ಟಾಗಿ ಉಳಿದ ಜೀವಿತಕಾಲವನ್ನು ಕಳೆಯಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.

ಅಕ್ಕ ತಮ್ಮನ್ನು ಮನೆಯಿಂದ ಹೊರಹಾಕುವ ಭೀತಿ
ತಮ್ಮ ಸಲಿಂಗ​ ಕಾಮ ಸಂಬಂಧದ ಬಗ್ಗೆ ಮನೆಯವರಿಗೆ ತಿಳಿಸಿದೆ. ತಮ್ಮ ಪಾಲಕರು ಇದಕ್ಕೆ ಸಮ್ಮತಿಸಿದ್ದಾರೆ. ಆದರೆ, ತಮ್ಮ ಮನೆಯ ಎಲ್ಲ ಆಗುಹೋಗುಗಳ ಜವಾಬ್ದಾರಿ ಹೊಂದಿರುವ ತಮ್ಮ ಅಕ್ಕ ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾಳೆ. ಹಾಗಾಗಿ ಆಕೆ ತಮ್ಮನ್ನು ಮನೆಯಿಂದ ಹೊರಹಾಕುವ ಸಾಧ್ಯತೆ ಇದೆ ಎಂದು ಧ್ಯುತಿ ಆತಂಕ ವ್ಯಕ್ತಪಡಿಸಿದ್ದಾರೆ.

ನನ್ನ ಅಣ್ಣನ ಪತ್ನಿ ಜತೆ ಅಕ್ಕನ ಸಂಬಂಧ ಸೌಹಾರ್ದಯುತವಾಗಿರಲಿಲ್ಲ. ಹಾಗಾಗಿ ಆಕೆ ಅವರಿಬ್ಬರನ್ನೂ ಮನೆಯಿಂದ ಹೊರಹಾಕಿ ಪ್ರತ್ಯೇಕವಾಗಿ ವಾಸಿಸುವಂತೆ ಮಾಡಿದ್ದಾಳೆ. ಅವರಂತೆ ನನ್ನನ್ನು ಕೂಡ ಆಕೆ ಮನೆಯಿಂದ ಹೊರದಬ್ಬುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *