ಸಲಿಂಗಿ ದ್ಯುತಿ ಚಂದ್​ಗೆ ಬಹಿಷ್ಕಾರದ ಎಚ್ಚರಿಕೆ!

ನವದೆಹಲಿ: ಭಾರತದ ಅಗ್ರ ಅಥ್ಲೀಟ್ ದ್ಯುತಿ ಚಂದ್, ತಾವು ಸಲಿಂಗಿ ಎನ್ನುವುದನ್ನು ಬಹಿರಂಗ ಪಡಿಸಿದ ಬೆನ್ನಲ್ಲಿಯೇ ಕುಟುಂಬದಿಂದ ಬಹಿಷ್ಕಾರ ಎಚ್ಚರಿಕೆಯನ್ನೂ ಎದುರಿಸಿದ್ದಾರೆ. ಒಡಿಶಾದ ತಮ್ಮ ಗ್ರಾಮವಾದ ಚಾಕಾ ಗೋಪಾಲಪುರದಲ್ಲಿ ಸಂಬಂಧಿಯೊಬ್ಬರ ಜತೆ ಸಲಿಂಗ ಸ್ನೇಹ ಹೊಂದಿರುವುದಾಗಿ ದ್ಯುತಿ ಪ್ರಕಟಿಸಿದ್ದರು.

2018ರ ಏಷ್ಯನ್ ಗೇಮ್ಸ್​ನಲ್ಲಿ ಎರಡು ಬೆಳ್ಳಿ ಪದಕ ಜಯಿಸಿದ್ದ ದ್ಯುತಿ ಚಂದ್, ಸಲಿಂಗ ಪ್ರೇಮವನ್ನು ಮುಕ್ತವಾಗಿ ಒಪ್ಪಿಕೊಂಡ ವಿಶ್ವದ ಕೆಲವೇ ಕೆಲವು ಅಥ್ಲೀಟ್​ಗಳಲ್ಲಿ ಒಬ್ಬರಾಗಿದ್ದಾರೆ. ‘ನನ್ನ ಗ್ರಾಮದ 19 ವರ್ಷದ ಯುವತಿಯ ಜತೆ ಕಳೆದ ಐದು ವರ್ಷಗಳಿಂದ ಸಂಬಂಧದಲ್ಲಿದ್ದೇನೆ. ಆಕೆ, ಭುವನೇಶ್ವರ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎ ಓದುತ್ತಿದ್ದಾಳೆ. ಆಕೆ ನನ್ನ ಸಂಬಂಧಿ ಕೂಡ ಹೌದು. ನಾನು ಮನೆಗೆ ಹೋದ ಸಮಯದಲ್ಲಿ ಹೆಚ್ಚಿನ ಸಮಯವನ್ನು ಆಕೆಯೊಂದಿಗೆ ಕಳೆಯುತ್ತೇನೆ. ಆಕೆ ನನ್ನ ಆತ್ಮೀಯ ಗೆಳತಿ. ಭವಿಷ್ಯದಲ್ಲಿ ಆಕೆಯೊಂದಿಗೆ ಜತೆಯಾಗಿರಲು ಬಯಸುತ್ತೇನೆ’ ಎಂದು 23 ವರ್ಷದ ದ್ಯುತಿ ಚಂದ್ ಹೇಳಿದ್ದಾರೆ. ಹೈದರಾಬಾದ್​ನಲ್ಲಿ ತರಬೇತಿಯಲ್ಲಿ ನಿರತವಾಗಿರುವ ದ್ಯುತಿ ವಿಶೇಷ ಸಂದರ್ಶನದಲ್ಲಿ ಇದನ್ನು ಪ್ರಕಟಿಸಿದ್ದಾರೆ.

ಕಳೆದ ವರ್ಷ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ ಸಲಿಂಗ ಸ್ನೇಹವನ್ನು ಕ್ರಿಮಿನಲ್ ಅಪರಾಧವಲ್ಲ ಎಂದಿತ್ತು. ಆದರೆ, ಸಲಿಂಗಿ ಮದುವೆ ಮಾತ್ರ ಭಾರತದಲ್ಲಿ ಇನ್ನೂ ಕಾನೂನುಬದ್ಧವಲ್ಲ. ಆದರೆ, ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಕಾರಣಕ್ಕಾಗಿಯೇ ಸಾರ್ವಜನಿಕವಾಗಿ ಇದನ್ನು ಹೇಳಿದ್ದಾಗಿ ದ್ಯುತಿ ತಿಳಿಸಿದ್ದಾರೆ.

100 ಮೀಟರ್​ನಲ್ಲಿ ರಾಷ್ಟ್ರೀಯ ದಾಖಲೆ (11.24 ಸೆಕೆಂಡ್ಸ್) ಹೊಂದಿರುವ ದ್ಯುತಿ ಚಂದ್​ರ ಪಾಲಕರು, ಸಲಿಂಗ ಪ್ರೇಮಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಆದರೆ, ದ್ಯುತಿಯ ಹಿರಿಯ ಸಹೋದರಿ ಆಕೆಯನ್ನು ಕುಟುಂಬದಿಂದ ಹೊರಹಾಕುವುದು ಮಾತ್ರವಲ್ಲ, ಜೈಲಿಗೆ ಹಾಕುವುದಾಗಿ ಬೆದರಿಕೆ ಒಡ್ಡಿದ್ದಾರೆ.

‘ನನ್ನ ಹಿರಿಯ ಸಹೋದರಿ ಕುಟುಂಬದಲ್ಲಿ ಹೆಚ್ಚಿನ ಅಧಿಕಾರ ಹೊಂದಿದ್ದಾರೆ. ಹಿರಿಯ ಅಣ್ಣನ ಪತ್ನಿ ಇಷ್ಟವಾಗದ ಕಾರಣಕ್ಕಾಗಿ ಅಣ್ಣನ ಸಂಸಾರವನ್ನು ಕುಟುಂಬದಿಂದ ಹೊರಹಾಕಿದ್ದಳು. ಅದೇ ರೀತಿ ನನಗೂ ಆಗುತ್ತದೆ ಎಂದು ಎಚ್ಚರಿಸಿದ್ದಾರೆ. ಆದರೆ, ನಾನು ವಯಸ್ಕಳು. ವೈಯಕ್ತಿಕ ಸ್ವಾತಂತ್ರ್ಯ ನನಗಿದೆ. ಹಾಗಾಗಿ ನಾನು ಸಂಬಂಧವನ್ನು ಮುಂದುವರಿಸಿಕೊಂಡು ಹೋಗುವುದು ಮಾತ್ರವಲ್ಲ, ಸಾರ್ವಜನಿಕವಾಗಿ ತಿಳಿಸಲು ಬಯಸಿದೆ’ ಎಂದು ಹೇಳಿದ್ದಾರೆ. ನನ್ನ ಜತೆಗಾರ್ತಿ, ಆಸ್ತಿಯ ಮೇಲೆ ಕಣ್ಣಿಟ್ಟಿದ್ದಾಳೆ ಎಂದು ಅಕ್ಕ ಅಂದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಹೆಸರು ಬಹಿರಂಗವಿಲ್ಲ

ಜತೆಗಾರ್ತಿಯ ಹೆಸರು ಬಹಿರಂಗ ಮಾಡಲು ಒಪ್ಪದ ದ್ಯುತಿ, ಆಕೆಯ ಒಪ್ಪಿಗೆಯಿಂದಾಗಿ ಇದನ್ನು ತಿಳಿಸಿರುವುದಾಗಿ ಹೇಳಿದ್ದಾರೆ. ಅಥ್ಲೀಟ್ ಪಿಂಕಿ ಪ್ರಮಾಣಿಕ್ ಮೇಲೆ ಲಿವ್-ಇನ್ ಜತೆಗಾರ್ತಿಯೇ ರೇಪ್​ನ ಆರೋಪ ಮಾಡಿದ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಕಾರಣ ಇದನ್ನು ಸಾರ್ವಜನಿಕವಾಗಿ ತಿಳಿಸಿದ್ದೇನೆ ಎಂದಿದ್ದಾರೆ. 2014ರಲ್ಲಿ ಪುರುಷರ ಹಾಮೋನು ಹೆಚ್ಚಿದ್ದ ಕಾರಣಕ್ಕೆ ಐಎಎಎಫ್​ನಿಂದ 1 ವರ್ಷ ನಿಷೇಧಕ್ಕೆ ಒಳಗಾಗಿದ್ದ ದ್ಯುತಿ, ಆ ಬಳಿಕ ಇದನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ಪ್ರಶ್ನಿಸಿ ಯಶ ಕಂಡಿದ್ದರು.