ತುಕ್ಕು ಹಿಡಿಯುತ್ತಿದೆ ಡಸ್ಟ್‌ಬಿನ್!

>

ಪಿ.ಬಿ.ಹರೀಶ್ ರೈ ಮಂಗಳೂರು
ನಗರದ ವಿವಿಧ ಪ್ರದೇಶಗಳಲ್ಲಿ ಹಿಂದೆ ರಸ್ತೆ ಬದಿ ಇರಿಸಲಾಗಿದ್ದ ಬೃಹತ್ ಗಾತ್ರದ ಕಬ್ಬಿಣದ ಕಸದ ತೊಟ್ಟಿಗಳು ಈಗ ಮಾಯವಾಗಿವೆ. ಹಾಗೆಂದು ಈ ತೊಟ್ಟಿಗಳು ನಗರದಿಂದ ಮಾಯವಾಗಿಲ್ಲ. ನಗರದ ಅಳಕೆ ಮಾರ್ಕೆಟ್‌ನ ಹಿಂಬದಿ ವೀಕ್ಷಿಸಿದರೆ ಕಸದ ತೊಟ್ಟಿಗಳ ರಾಶಿಯನ್ನೇ ಕಾಣಬಹುದು. ಇದನ್ನು ವಿಲೇವಾರಿ ಮಾಡಲು ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಇನ್ನು ಮನಸ್ಸು ಮಾಡಿಲ್ಲ..!
ಮನಪಾ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹ, ಸಾಗಾಟ ಮತ್ತು ಸ್ವಚ್ಛತಾ ಕಾರ್ಯದ ಗುತ್ತಿಗೆಯನ್ನು 2015ರಲ್ಲಿ ಮುಂಬೈ ಮೂಲದ ಆ್ಯಂಟನಿ ವೇಸ್ಟ್ ಹ್ಯಾಂಡ್ಲಿಂಗ್ ಸಂಸ್ಥೆಗೆ ನೀಡಲಾಗಿತ್ತು. ಬಳಿಕ ಮನೆಮನೆ ತ್ಯಾಜ್ಯ ಸಂಗ್ರಹ ಆರಂಭಗೊಂಡು, ನಗರದ ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ ರಸ್ತೆ ಬದಿ ಇರಿಸಿದ ಎಲ್ಲ ಕಬ್ಬಿಣದ ಬೃಹತ್ ಕಸದ ತೊಟ್ಟಿಗಳನ್ನು ತೆರವುಗೊಳಿಸಲಾಗಿತ್ತು. ಬಳಿಕ ಈ ತೊಟ್ಟಿಗಳು ನಿರುಪಯುಕ್ತವಾಗಿವೆ. ಅದನ್ನು ತಕ್ಷಣ ವಿಲೇವಾರಿ ಮಾಡುವುದು ಪಾಲಿಕೆ ಜವಾಬ್ದಾರಿ. ಕಬ್ಬಿಣದ ತೊಟ್ಟಿಗಳನ್ನು ಏಲಂ ಮಾಡಿದರೆ ಗುಜರಿ ವ್ಯಾಪಾರಿಗಳು ಪಡೆಯುತ್ತಾರೆ. ನಗರ ಪಾಲಿಕೆಗೆ ಆದಾಯವೂ ಬರುತ್ತದೆ. ಆದರೆ ಪಾಲಿಕೆಯಲ್ಲಿ ಅಂತಹ ಒಂದು ವ್ಯವಸ್ಥೆಯೇ ಇಲ್ಲ. ಏನಿದ್ದರೂ ಜನರ ತೆರಿಗೆ ಹಣ. ಹಾಗಾಗಿ ಆಡಳಿತ ವ್ಯವಸ್ಥೆಯ ದಿವ್ಯ ನಿರ್ಲಕ್ಷೃ. 60ಕ್ಕೂ ಅಧಿಕ ಕಸದ ತೊಟ್ಟಿಗಳನ್ನು ಕುದ್ರೋಳಿ ವೆಟ್‌ವೆಲ್ ಬಳಿ ಒಂದು ಮರದ ಕೆಳಗೆ ಇಡಲಾಗಿದೆ. ಆ ಬಳಿಕ ಮನಪಾ ಅಧಿಕಾರಿಗಳು ಅತ್ತ ಸುಳಿದಿಲ್ಲ.

ಸ್ವಚ್ಛತೆ ನಿರ್ಲಕ್ಷೃ:  ಅಳಕೆ ಮಾರ್ಕೆಟ್ ಹಿಂಬದಿಯ ಈ ಜಾಗದಲ್ಲಿ ಒಂದೆಡೆ ವೆಟ್‌ವೆಲ್‌ನ ದುರ್ನಾತ. ಇನ್ನೊಂದೆಡೆ ತುಕ್ಕು ಹಿಡಿಯುತ್ತಿರುವ ಕಬ್ಬಿಣ ಕಸದ ತೊಟ್ಟಿಗಳು ಬಿದ್ದಿವೆ. ನಗರದ ಮುಖ್ಯ ರಸ್ತೆಗಳ ಅಂದ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡುವ ಮನಪಾ ನಗರದ ಒಳಭಾಗದ ಸ್ವಚ್ಛತೆ ಬಗ್ಗೆ ನಿರ್ಲಕ್ಷೃವಹಿಸಿದೆ ಎನ್ನುವುದು ಸ್ಪಷ್ಟ. ಪಾಲಿಕೆ ವ್ಯಾಪ್ತಿಯ ಖಾಲಿ ಜಾಗಗಳು ನಿರುಪಯುಕ್ತ ವಸ್ತುಗಳನ್ನು ಬಿಸಾಡುವ ತಾಣವಾಗಿದೆ. ಇದಕ್ಕೆ ಉದಾಹರಣೆ ಅಳಕೆ ಮತ್ತು ಕುದ್ರೋಳಿ ಪರಿಸರ.

ನಗರದ ಪಾಲಿಕೆಯ ಹಳೇ ವಾಹನಗಳನ್ನು ಕೂಡ ಏಲಂ ಮಾಡದೆ ಪಾಲಿಕೆ ಆವರಣದಲ್ಲಿ ಇಡಲಾಗಿದೆ. ಅಧಿಕಾರಿಗಳ ಇಂತಹ ನಿರ್ಲಕ್ಷೃದಿಂದ ಪಾಲಿಕೆಗೆ ಲಕ್ಷಾಂತರ ರೂ. ನಷ್ಟವಾಗುತ್ತಿದೆ. ಕಬ್ಬಿಣದ ಕಸದ ತೊಟ್ಟಿಗಳನ್ನು 4 ವರ್ಷದ ಹಿಂದೆಯೇ ಏಲಂ ಮಾಡಬಹುದಿತ್ತು. ಈಗ ತುಕ್ಕು ಹಿಡಿದ ಸ್ಥಿತಿಯಲ್ಲಿದೆ. ಇನ್ನು ಏಲಂ ಮಾಡಿದರೂ ಜುಜುಬಿ ಹಣ ಸಿಗಬಹುದು.
ಹನುಮಂತ ಕಾಮತ್ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ

ರಸ್ತೆ ಬದಿಯಿಂದ ತೆರವುಗೊಳಿಸಿದ ಕಸದ ತೊಟ್ಟಿಗಳನ್ನು ಅಳಕೆ ಮಾರ್ಕೆಟ್ ಬಳಿಯ ಮೈದಾನದಲ್ಲಿ ಸಂಗ್ರಹಿಸಿ ಇಡಲಾಗಿದೆ. ಶೀಘ್ರ ಅದನ್ನು ಏಲಂ ಮಾಡುವಂತೆ ಪಾಲಿಕೆ ಕಂದಾಯ ಇಲಾಖೆಗೆ ಸೂಚಿಸಲಾಗುವುದು.
ಡಾ.ಮಂಜಯ್ಯ ಶೆಟ್ಟಿ ಆರೋಗ್ಯಾಧಿಕಾರಿ ಮನಪಾ