ದಸರಾ ಆಹಾರ ಮೇಳಕ್ಕೆ ಇಂದು ತೆರೆ

ಮೈಸೂರು: ಪಾರಂಪರಿಕ ತಿನಿಸು, ಬುಡಕಟ್ಟು ಜನಾಂಗದ ವಿಶೇಷ ಖಾದ್ಯ ಬೊಂಬು ಬಿರಿಯಾನಿ, ಬಿದಿರಕ್ಕಿ ಪಾಯಸ, ಸಿರಿಧಾನ್ಯಗಳ ಉಪಾಹಾರ…!

ಹೀಗೆ.. ಸಾಂಸ್ಕೃತಿಕ ನಗರಿಯಲ್ಲಿ ರಾಜ್ಯ, ಹೊರರಾಜ್ಯ, ದೇಶ-ವಿದೇಶಿಯ ಬಗೆ ಬಗೆಯ ಆಹಾರ ಪದಾರ್ಥಗಳ ಘಮಲು ಹಂಚಿದ ದಸರಾ ಆಹಾರ ಮೇಳಕ್ಕೆ ಶುಕ್ರವಾರ ತೆರೆ ಬೀಳಲಿದೆ. ನಗರದ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಮೈದಾನ ಹಾಗೂ ಲಲಿತ್ ಮಹಲ್ ಪ್ಯಾಲೇಸ್ ಪಕ್ಕದ ಮುಡಾ ಮೈದಾನದಲ್ಲಿ ಆಯೋಜಿಸಿರುವ ದಸರಾ ಆಹಾರ ಮೇಳದಲ್ಲಿ ಲಕ್ಷಾಂತರ ಜನ ನಾನಾ ಬಗೆಯ ತಿನಿಸುಗಳನ್ನು ಸವಿದಿದ್ದಾರೆ.

ಗುರುವಾರವೂ ಆಹಾರ ಮೇಳಕ್ಕೆ ಸಾವಿರಾರು ಆಹಾರ ಪ್ರಿಯರು ಲಗ್ಗೆಯಿಟ್ಟಿದ್ದು, ಎಲ್ಲರಿಗೂ ತಕ್ಕಮಟ್ಟಿನ ವ್ಯಾಪಾರವಾಗಿದೆ. ಕುಟುಂಬದ ಜತೆಗೆ, ಸ್ನೇಹಿತರು, ಪ್ರೇಯಸಿ, ಪ್ರಿಯಕರನೊಂದಿಗೆ ಆಗಮಿಸಿದ ಆಹಾರ ಪ್ರಿಯರು ನೆಚ್ಚಿನ ರುಚಿ ರುಚಿಯಾದ ತಿಂಡಿ ತಿನಿಸುಗಳ ಸವಿಯನ್ನು ಸವಿದರು. ಮಧ್ಯಾಹ್ನದ ವೇಳೆಗೆ ಬೆರಳೆಣಿಕೆಯಷ್ಟಿದ್ದ ಜನರು ಸಂಜೆಯಾಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಬಂದರು. ನಾನಾ ಬಗೆಯ ತಿನಿಸುಗಳ ಅಂಗಡಿ ಮುಂದೆ ಜಮಾಯಿಸಿದ್ದ ಜನರು, ತಮಗಿಷ್ಟವಾದ ತಿಂಡಿಯನ್ನು ಚಪ್ಪರಿಸಿದರು.

ನಾನಾ ಸ್ಪರ್ಧೆ:  ಭಾರತ್ ಸ್ಕೌಟ್ ಮತ್ತು ಗೈಡ್ಸ್ ಮೈದಾನದಲ್ಲಿ ಗುರುವಾರ ನಾನಾ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಸಿಪ್ಪೆ ಸಹಿತ ಹುರಿದ ಕಡ್ಲೆಕಾಯಿ ಬೀಜ ತಿನ್ನುವ ಸವಿಭೋಜನ ಸ್ಪರ್ಧೆ ಗಮನ ಸೆಳೆಯಿತು. ನಂಜನಗೂಡಿನ ರೈತ ಮಹದೇವ ಸ್ವಾಮಿ 3 ನಿಮಿಷದಲ್ಲಿ 43 ಕಡ್ಲೆ ಕಾಯಿ ಬೀಜವನ್ನು ಬಿಡಿಸಿ ತಿಂದು ಪ್ರಥಮ ಸ್ಥಾನ ಪಡೆದರು. ಅಂತೆಯೇ ನಗರದ ಮಂಜುನಾಥ್ 40 ಕಡ್ಲೆಕಾಯಿ ಬೀಜ ತಿಂದು ದ್ವಿತೀಯ ಗಾಹೂ ನಾಗರತ್ನಮ್ಮ 38 ಕಡ್ಲೆಕಾಯಿ ಬೀಜ ತಿಂದು ತೃತೀಯ ಸ್ಥಾನ ಪಡೆದರು.

ಸಂಜೆ ಮೈಸೂರಿನ ರೇಖಾರಾಜ್ ಮಿತ್ರ ಮಂಡಳಿಯಿಂದ ಸುಗಮ ಸಂಗೀತ, ವಾಯ್ಸ ಆಫ್ ಮ್ಯೂಜಿಕ್‌ನಿಂದ ವಾದ್ಯಗೋಷ್ಠಿ, ನಂಜನಗೂಡಿನ ವಿದುಷಿ ಕೆ.ಎಸ್.ರಂಜಿತಾ ಅವರಿಂದ ಭರತನಾಟ್ಯ, ಹೆಬ್ಬಾಳಿನ ಯುನಿಕ್ ಸಿಪ್ಲರ್ಸ್‌ ಅಕಾಡೆಮಿ ವತಿಯಿಂದ ನೃತ್ಯಪ್ರದರ್ಶನ, ಮೈಸೂರಿನ ಮಧುರಜ್ಯೋತಿ ಕಲಾಸುರುಚಿ ಅವರಿಂದ ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಯಿತು.

Leave a Reply

Your email address will not be published. Required fields are marked *