ಆಲ್ದೂರು: ಕಿರಿದಾದ ರಸ್ತೆಗಳು, ಹೆಚ್ಚಿದ ವಾಹನ ಸಂಚಾರ ಹಾಗೂ ಪಟ್ಟಣದ ಪ್ರಮುಖ ರಸ್ತೆ ರಾಜ್ಯಹೆದ್ದಾರಿ 27 ರಸ್ತೆ ಆಗಲೀಕರಣವಾಗದಿರುವುದರಿಂದ ಪಟ್ಟಣದಲ್ಲಿ ಪ್ರತಿದಿನ ಟ್ರಾಫಿಕ್ ಸಮಸ್ಯೆಯಿಂದ ಜನತೆ ಹೈರಾಣಾಗಿದ್ದಾರೆ.
ಆಲ್ದೂರು ಪಟ್ಟಣದಲ್ಲಿ ಪ್ರಮುಖವಾಗಿ ಚಿಕ್ಕಮಗಳೂರು-ಬಾಳೆಹೊನ್ನೂರು ರಸ್ತೆ, ಆಲ್ದೂರು-ಮೂಡಿಗೆರೆ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಹಲವು ವರ್ಷಗಳಿಂದ ಈ ಎರಡೂ ರಸ್ತೆಗಳು ಅಗಲೀಕರಣವಾಗಿಲ್ಲ. ಕಿರಿದಾದ ರಸ್ತೆ ಹಾಗೂ ಪುಟ್‌ಪಾತ್ ಇಲ್ಲದಿರುವುದರಿಂದ ಜನ ರಸ್ತೆಯ ಮೇಲೆ ಭಯದಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಕಿರಿದಾಗಿದ್ದು ವಾಹನ ಪಾರ್ಕಿಂಗ್ ಮಾಡಲು ಸೂಕ್ತ ಜಾಗವಿಲ್ಲದೇ ರಸ್ತೆ ಪಕ್ಕದಲ್ಲಿಯೇ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಪಟ್ಟಣದ ಗಣಪತಿ ದೇವಸ್ಥಾನ, ಶಾದಿಮಹಲ್ ಮುಂಭಾಗದಿಂದ ಅಂಬೇಡ್ಕರ್ ವೃತ್ತದವರೆಗೆ ವಾಹನಗಳನ್ನು ಪಾರ್ಕಿಂಗ್ ಮಾಡಲಾಗುತ್ತಿದೆ. ರಸ್ತೆಯ ಎರಡು ಬದಿ ಅಂಗಡಿಗಳ ಮುಂದೆ ವಾಹನಗಳನ್ನು ನಿಲ್ಲಿಸುವುದರಿಂದ ಅಂಗಡಿ ವ್ಯಾಪಾರಿಗಳಿಗೂ ವ್ಯಾಪಾರಕ್ಕೆ ತೊಂದರೆಯಾಗುತ್ತಿದೆ. ಈ ಸಮಸ್ಯೆಯಿಂದ ಪ್ರತಿ ದಿನ ಪಾದಚಾರಿಗಳು, ಅಂಗಡಿ ಮಾಲೀಕರು ತೊಂದರೆ ಅನುಭವಿಸುವಂತಾಗಿದೆ.
ಪಟ್ಟಣದ ಕೆಂಪೇಗೌಡ ವೃತ್ತದಿಂದ ಚಿಕ್ಕಮಗಳೂರಿಗೆ ಹೋಗುವ ರಸ್ತೆಯ ಎಡಭಾಗದಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ನಂತರ 100 ಅಡಿ ಅಂತರದಲ್ಲಿ ಕಾರು, ಜೀಪ್, ಆಟೋಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕೆಂಪೇಗೌಡ ವೃತ್ತದಿಂದ ಬಾಳೆಹೊನ್ನೂರಿಗೆ ಹೋಗುವ ಎಡ ಭಾಗದಲ್ಲಿ ಪೊಲೀಸ್ ಠಾಣೆಯಿಂದ ಅಂಬೇಡ್ಕರ್ ವೃತ್ತದವರೆಗೆ ದ್ವಿ ಚಕ್ರವಾಹನಗಳು,ಕಾರು,ಜೀಪ್‌ಗಳ ಪಾರ್ಕಿಂಗ್ ಮಾಡಲು ಜಿಲ್ಲಾಧಿಕಾರಿಗಳ ಆದೇಶದಂತೆ ನಾಮ ಲಕಗಳನ್ನು ಅಳವಡಿಸಲಾಗಿದೆ. ಆದರೆ ಈ ಯಾವುದೇ ನಿಯಮಗಳು ಪಟ್ಟಣದಲ್ಲಿ ಅನ್ವಯವಾಗುತ್ತಿಲ್ಲ. ಪಾರ್ಕಿಂಗ್ ನಿಯಮಗಳನ್ನು ಪಾಲನೆ ಮಾಡಿಸವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಲವಾಗಿದೆ.
