ಇಂದಿನಿಂದ ದುರ್ಗಮ್ಮ-ಮರ್ಗಮ್ಮ ದೇವಿ ವಾರ್ಷಿಕೋತ್ಸವ

ಹುಣಸೂರು: ಪಟ್ಟಣದ ಸರಸ್ವತಿಪುರಂ ಬಡಾವಣೆಯ ಶ್ರೀ ದುರ್ಗಮ್ಮ-ಮರ್ಗಮ್ಮ ದೇವಿಯ 112 ವಾರ್ಷಿಕೋತ್ಸವ ಹಾಗೂ ಅಡ್ಡ ಪಲ್ಲಕ್ಕಿ ಉತ್ಸವ ಮಾ.19ರಿಂದ 21ರ ವರೆಗೆ ಜರುಗಲಿದೆ.
ಹೆಂಚಿನ ಮನೆಯಲ್ಲಿದ್ದ ದೇವಾಲಯವು ದಶಕದ ಹಿಂದೆ ಜೀರ್ಣೋದ್ಧಾರಗೊಂಡು ಸುಂದರ ದೇವಾಲಯವಾಗಿ ಪರಿವರ್ತಿತಗೊಂಡಿದೆ. ಇಡೀ ಬಡಾವಣೆಯ ಜನರು ಒಟ್ಟಾಗಿ ಸೇರಿ ಆಚರಿಸುವ ಈ ಅಡ್ಡಪಲ್ಲಕ್ಕಿ ಉತ್ಸವವನ್ನು ಕಳೆದ ನೂರ ಹನ್ನೆರಡು ವರ್ಷಗಳಿಂದ ಶ್ರದ್ಧಾ ಭಕ್ತಿಯಿಂದ ಪ್ರತಿವರ್ಷ ಶಿವರಾತ್ರಿ-ಯುಗಾದಿ ನಡುವಿನ ಸಮಯದಲ್ಲಿ ಆಚರಿಸಿಕೊಂಡು ಬರುತ್ತಿದ್ದಾರೆ. ಈ ಹಬ್ಬಕ್ಕೆ ತಮ್ಮ ನೆಂಟರಿಷ್ಟರನ್ನು ಆಹ್ವಾನಿಸಿ, ಆತಿಥ್ಯ ನೀಡುತ್ತಾರೆ.

ಒಗ್ಗರಣೆ ಹಾಕಲ್ಲ : ಈ ಉತ್ಸವ ಆಚರಿಸುವ ವಾರದ ಮೊದಲು ತಾಲೂಕಿನ ರಾಮಪಟ್ಟಣದ ಮಹದೇಶ್ವರ ದೇವಾಲಯಕ್ಕೆ ತೆರಳಿ ವರ ಪಡೆದುಕೊಂಡು ದಿನ ನಿಗದಿಪಡಿಸುತ್ತಾರೆ. ಪ್ರತಿಮನೆಗೂ ಸುಣ್ಣ ಬಣ್ಣ ಹೊಡೆಸುತ್ತಾರೆ. ಅಂದಿನಿಂದ ವಾರಕಾಲ ಇಡೀ ಬಡಾವಣೆಯ ಜನರು ಅಡುಗೆಯಲ್ಲಿ ಒಗ್ಗರಣೆ ಹಾಕುವಂತಿಲ್ಲ. ಉತ್ಸವದಂದು ಎಲ್ಲರೂ ಹೊಸಬಟ್ಟೆ ತೊಡುವುದು ವಾಡಿಕೆ. ದೇವಾಲಯ ಹಾಗೂ ಟಿಎಪಿಸಿಎಂಎಸ್ ರಸ್ತೆಯನ್ನು ಜಗಮಗಿಸುವ ವಿದ್ಯುತ್‌ದೀಪಗಳಿಂದ ಅಲಂಕರಿಸುತ್ತಾರೆ.

ಸಾಕಿ(ಮದ್ಯ) ನೈವೇದ್ಯ: ಮಾ.19ರಂದು ಹಿಂದಿನ ಸಂಪ್ರದಾಯದಂತೆ ದೇವರಿಗೆ ಸಾಕಿ ತಂದು ಬಡಾವಣೆಯ ಅಶ್ವತ್ಥಕಟ್ಟೆಯಲ್ಲಿ ಪೂಜೆ ಸಲ್ಲಿಸಿ, ಅಲ್ಲಿಂದ ಹೆಂಗಳೆಯರು ಮಡಕೆಯಲ್ಲಿ ಸಾಕಿ ನೈವೇದ್ಯವನ್ನು ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ತಂದು ದೇವರಿಗೆ ಸಮರ್ಪಿಸುವರು. ಮಾರನೇ ದಿನ ಸಾಕಿಯನ್ನು ತೀರ್ಥದ ರೂಪದಲ್ಲಿ ಭಕ್ತರಿಗೆ ವಿತರಿಸುವರು.

ಅಡ್ಡ ಪಲ್ಲಕ್ಕಿ ಉತ್ಸವ: ಮಾ.19ರಂದು ಸಂಜೆ 4ಕ್ಕೆ ಅಲಂಕರಿಸಿದ ಹೂವಿನ ಪಲ್ಲಕ್ಕಿಯಲ್ಲಿ ದುರ್ಗಮ್ಮ-ಮರ್ಗಮ್ಮ ದೇವಿಯರ ಉತ್ಸವಮೂರ್ತಿಯನ್ನು ಲಕ್ಷ್ಮಣತೀರ್ಥ ನದಿ ತಟಕ್ಕೆ ತಂದು ವಿಶೇಷ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದ ನಂತರ ಅಲ್ಲಿಂದ ಪಟ್ಟಣದ ರಾಜಬೀದಿಗಳಲ್ಲಿ ಮಂಗಳವಾದ್ಯ, ಡೊಳ್ಳುಕುಣಿತ, ನಗಾರಿ, ತಮಟೆ, ಪಟಾಕಿಗಳೊಂದಿಗೆ ಮೆರೆವಣಿಗೆ ಮೂಲಕ ದೇವಸ್ಥಾನದ ಬಳಿಗೆ ಆಗಮಿಸಿ ನಂತರ ಬಡಾವಣೆ ಜನರು ಪೂಜೆಸಲ್ಲಿಸಿದ ನಂತರ ಮಧ್ಯರಾತ್ರಿ ಮಾರಮ್ಮದೇವಿಗೆ ನಾಲ್ಕು ಮೂಲೆಗಳಲ್ಲಿ ಬಲಿ ಅನ್ನನೈವೇದ್ಯ(ಕಟ್ಟು) ಸಲ್ಲಿಸುವರು.


ತಂಬಿಟ್ಟು ಆರತಿ: ಮಾ.20ರಂದು ಮುಂಜಾನೆ 5.30ಕ್ಕೆ ಪ್ರತಿಮನೆಯಿಂದ ಕಣಗಲೆ ಹೂವಿನಿಂದ ಅಲಂಕರಿಸಿದ ತಂಬಿಟ್ಟುನ್ನು ತಲೆ ಮೇಲೆ ಹೊತ್ತು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನಕ್ಕಾಗಮಿಸಿ ತಂಪು ಸಲ್ಲಿಸುವರು.
ಮಾ.21ರಂದು ಬೆಳಗ್ಗೆ 8ರಿಂದ ಸಂಜೆವರೆವಿಗೂ ಬಡಾವಣೆಯ ಪ್ರತಿ ಮನೆ ಬಳಿಯೂ ಮಕ್ಕಳು, ಹೆಂಗಸರು-ದೊಡ್ಡವರಾದಿಯಾಗಿ ಓಕುಳಿ ಆಡುವುದು. ಇದೇ ವೇಳೆ ಹೊಸ ಅಳಿಯಂದಿರಿಗೆ ನೀರು ಹಾಕುವ ಪದ್ಧತಿ ಇದ್ದು, 9ನೇ ದಿನಕ್ಕೆ ಮರಪೂಜೆ ಸಲ್ಲಿಸಿ, ಬಡಾವಣೆ ಜನರಿಗೆ ಪ್ರಸಾದ ವಿನಿಯೋಗ ನಡೆಸುವರು.

ಬೆಳ್ಳಿ ಉತ್ಸವ ಮೂರ್ತಿ: ಈ ಬಾರಿ ಬಡಾವಣೆಯ ಜನರ ನೆರವಿನೊಂದಿಗೆ ನಿರ್ಮಿಸಲಾಗಿರುವ 10ಕೆ.ಜಿ.ಬೆಳ್ಳಿ ಉತ್ಸವಮೂರ್ತಿಯನ್ನು ಮೆರವಣಿಯಲ್ಲಿ ಕೊಂಡೊಯ್ಯಲಾಗುವುದೆಂದು ದೇವಸ್ಥಾನ ಸಮಿತಿ ತಿಳಿಸಿದೆ.