ಸವಣೂರ: ತಾಲೂಕಿನ ಹುರಳಿಕುಪ್ಪಿ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವವು ಜ. 7ರಿಂದ 10ರವರೆಗೆ ಮೂರು ದಿನ ಸಂಭ್ರಮದಿಂದ ನಡೆಯಲಿದೆ.. 7ರಂದು ಬೆಳಗ್ಗೆ 8 ಗಂಟೆಗೆ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಿಂದ ಹೊರಡುವ ಶ್ರೀ ದುರ್ಗಾದೇವಿ ಉತ್ಸವವು ಸಕಲ ವಾಧ್ಯ ವೈಭವಗಳೊಂದಿಗೆ ಮೆರವಣಿಗೆ ನಡೆಯಲಿದೆ. ನಂತರ ಶ್ರೀದೇವಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ.
ರಾತ್ರಿ 10 ಗಂಟೆಗೆ ಮಂಜುನಾಥ ವಾಲ್ಮೀಕಿ ಸ್ನೇಹಾ ಮೆಲೋಡಿಸ್ ಅವರಿಂದ ಹಾಸ್ಯ, ಮಿಮಿಕ್ರಿ, ಜಾನಪದ ರಸಮಂಜರಿ ಮತ್ತು ಪೃಥ್ವಿ ಡ್ಯಾನ್ಸ್ ತಂಡದಿಂದ ನೃತ್ಯ ಕಾರ್ಯಕ್ರಮ ಜರುಗುವುದು. ಜ. 8ರಂದು ಶ್ರೀ ಬೀರಲಿಂಗೇಶ್ವರ ಡೊಳ್ಳಿನ ಮೇಳದವರಿಂದ ಡೊಳ್ಳಿನ ಪದಗಳ ಸ್ಪರ್ಧೆ ಜರುಗಲಿದೆ. ಜ. 9ರಂದು ರಾತ್ರಿ ಶ್ರೀ ಕನಕ ಕೋಲಿನ ಮೇಳದವರಿಂದ ಕೋಲಾಟದ ಪದಗಳು ಹಾಗೂ ಬೀರಲಿಂಗೇಶ್ವರ ಭಜನಾ ಮೇಳದವರಿಂದ ಭಜನಾ ಪದಗಳ ಕಾರ್ಯಕ್ರಮ ಜರುಗಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಜ. 8ರಿಂದ 10ರವರೆಗೆ ನಿತ್ಯ ಮಧ್ಯಾಹ್ನ 3 ಗಂಟೆಗೆ ಜಂಗಿ ಬಯಲು ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ.