ಮಾವು ತಿನ್ನೋ ಮುನ್ನ ಎಚ್ಚರ !

ಮೈಸೂರು : ಬೇಸಿಗೆ ಬಂತೆಂದರೆ ನೆನಪಾಗುವುದು ‘ಹಣ್ಣುಗಳ ರಾಜ’ ಮಾವು. ಹಾಗೆಂದು, ಈಗಾಗಲೇ ಮಾರುಕಟ್ಟೆ ಪ್ರವೇಶಿಸಿರುವ ಕಣ್ಣು ಕೋರೈಸುವ ಬಣ್ಣ, ಬಣ್ಣದ ಹಣ್ಣುಗಳಿಗೆ ಮರುಳಾಗಿ ತಿಂದರೆ ಆರೋಗ್ಯ ಕೆಡುವುದು ಕಟ್ಟಿಟ್ಟ ಬುತ್ತಿ.

ಮೇ ಆರಂಭದಿಂದ ಆಗಸ್ಟ್ ಅಂತ್ಯದವರೆಗೆ ಮಾವಿನ ಹಣ್ಣಿನ ಕಾಲವಾಗಿದ್ದರೂ, ಅವಧಿಗೆ ಮುನ್ನವೇ ಮಾರುಕಟ್ಟೆಗೆ ಬಂದ ಇಂತಹ ಮಾವಿನ ಹಣ್ಣುಗಳನ್ನು ರಾಸಾಯನಿಕ ಪೌಂಡರ್ ಬಳಸಿ ಕೃತಕವಾಗಿ ಹಣ್ಣು ಮಾಡಿರುವುದರಿಂದ ಅದು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.

ಬಲಿತ ಮಾವಿನ ಕಾಯಿ ಹಣ್ಣಾಗಿ ಮಾರುಕಟ್ಟೆಗೆ ಬರಲು ಇನ್ನೂ 15ರಿಂದ 20 ದಿನಗಳು ಬೇಕಾಗುತ್ತದೆ. ಆದರೆ ಅವಧಿಗೆ ಮುನ್ನವೇ ಪೂರ್ಣ ಬಲಿಯದ ಕಾಯಿಗಳನ್ನು ತಂದು ನಾನಾ ರೀತಿಯ ರಾಸಾಯನಿಕ ಸಿಂಪಡಿಸಿ ಕೃತಕವಾಗಿ ಹಣ್ಣು ಮಾಡಿ ಮಾರಾಟ ಮಾಡಲಾಗುತ್ತಿದೆ.

ಆರೋಗ್ಯದ ಮೇಲೆ ಪರಿಣಾಮ: ಕ್ಯಾಲ್ಸಿಯಂ ಕಾರ್ಬೈಡ್, ಇಥ್ರೆಲ್ ಬಳಸಿ ಹಣ್ಣು ಮಾಡುವ ದಂಧೆ ನಡೆಯುತ್ತಿದ್ದು, ಹೀಗೆ ಕೃತಕವಾಗಿ ಮಾಗಿಸಿದ ಹಣ್ಣಿನ ಸೇವನೆಯಿಂದ ನಾನಾ ತೊಂದರೆಗಳು ಕಾದಿವೆ. ಮಾವಿನ ಕಾಯಿಗೆ ರಾಸಾಯನಿಕ ಬಳಸುವುದರಿಂದ ರಾತ್ರಿ ಬೆಳಗಾಗುವುದರೊಳಗೆ ಅದು ಹಣ್ಣಿನ ಬಣ್ಣಕ್ಕೆ ತಿರುಗುತ್ತದೆ.

ಹೀಗೆ ಕೃತಕವಾಗಿ ಮಾಗಿಸಿದ ಯಾವುದೇ ಹಣ್ಣು ಸೇವಿಸಿದರೂ ಕ್ರಮೇಣ ದೇಹಾರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ರಾಸಾಯನಿಕ ಪೂರಿತ ಹಣ್ಣುಗಳು ಗಂಟಲು ಕೆರೆತ, ಕೆಮ್ಮು, ವಾಂತಿ, ಭೇದಿ, ಅಲ್ಸರ್, ಕ್ಯಾನ್ಸರ್, ಚರ್ಮದ ತೊಂದರೆ, ಹೃದಯಕ್ಕೆ ಸಂಬಧಿಸಿದ ಕಾಯಿಲೆ, ನರಮಂಡಲದ ಮೇಲೆ ದುಷ್ಪರಿಣಾಮ ಬೀರುವ ಮೂಲಕ ಮಾನಸಿಕ ಸಮಸ್ಯೆಗೂ ಕಾರಣವಾಗುತ್ತದೆ ಎನ್ನಲಾಗಿದೆ.

ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ: ರಾಸಾಯನಿಕ ಬಳಸಿ ಹಣ್ಣು ಮಾಡಿದರೆ ಅಂತಹ ಅಂಗಡಿ, ಹೋಲ್‌ಸೇಲ್ ಅಂಗಡಿಯವರ ವಿರುದ್ಧ ಪ್ರಕರಣ ದಾಖಲಿಸಲು ಈಗಾಗಲೇ ಆಹಾರ ಸುರಕ್ಷತಾ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಹೋಲ್‌ಸೇಲ್ ಹಣ್ಣು ವ್ಯಾಪಾರ, ವಹಿವಾಟು ನಡೆಸುವ ಅಂಗಡಿಗಳ ಮಾಲೀಕರಿಗೂ ಈಗಾಗಲೇ ತಿಳಿವಳಿಕೆ ನೀಡಲಾಗಿದೆ. ರಾಸಾಯನಿಕ ಬಳಕೆ ಮಾಡಿ ಮಾವಿನ ಕಾಯಿಯನ್ನು ಕೃತಕವಾಗಿ ಹಣ್ಣು ಮಾಡುತ್ತಿದ್ದ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವುದಾಗಿ ತಿಳಿಸಲಾಗಿದೆ.

ಯಾವ, ಯಾವ ಹಣ್ಣು: ರಸಪೂರಿ, ಬಾದಾಮಿ, ಆಪೂಸ್, ತೋತಾಪುರಿ, ಕಲಮಿ, ಬಗನ್‌ಪಲ್ಲಿ, ಮಲ್ಲಿಕಾ, ರತ್ನಗಿರಿ ಆಪೂಸ್, ಸಿಂಧೂರ, ಮಲಗೋಬಾ, ಮಲ್ಗೊವಾ ತಳಿಯ ಮಾವಿನ ಹಣ್ಣುಗಳು ಅವಧಿಗೂ ಮುನ್ನವೇ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ರಸಪೂರಿ ಮಾವಿನ ಹಣ್ಣು ಕೆ.ಜಿಗೆ 80 ರೂ.ನಿಂದ 120 ರೂ. ವರೆಗೆ ಮಾರಾಟವಾಗುತ್ತಿದೆ.

ಪಿರಿಯಾಪಟ್ಟಣ, ಹುಣಸೂರು ತಾಲೂಕುಗಳಲ್ಲಿ 4.136 ಹೆಕ್ಟೇರ್, ಎಚ್.ಡಿ.ಕೋಟೆ ತಾಲೂಕಿನಲ್ಲಿ 800 ಹೆಕ್ಟೇರ್, ಕೆ.ಆರ್.ನಗರ ತಾಲೂಕಿನಲ್ಲಿ 207 ಹೆಕ್ಟೇರ್, ನಂಜನಗೂಡು ತಾಲೂಕಿನಲ್ಲಿ 555 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತಳಿಯ ಮಾವಿನ ಹಣ್ಣುಗಳನ್ನು ಬೆಳೆಯಲಾಗುತ್ತಿದೆ.

ಹಣ್ಣು ಏನು ಮಾಡಬೇಕುಮಕ್ಕಳಿಗೆ ರಾಸಾಯನಿಕ ಬಳಸಿದ ಹಣ್ಣು ಕೊಡಬೇಡಿ.
*ಗರ್ಭಿಣಿಯರು ತಿಂದರೆ ಮಗುವಿನ ಮೇಲೆ ದುಷ್ಪರಿಣಾಮ.
*ಭತ್ತದ ಒಣ ಹುಲ್ಲಲ್ಲಿ ಮಾಗಿಸಿದ ಹಣ್ಣಿಗೆ ಆದ್ಯತೆ ನೀಡಿ.
*ಏಪ್ರಿಲ್ ತಿಂಗಳು ಮುಗಿಯುವರೆಗೂ ಕಾಯಿರಿ.
*ಸಿಪ್ಪೆ ಸಹಿತ ತಿನ್ನಬಾರದು.
*ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ ಸೇವಿಸಿ.

ಜಾಗೃತಿ ಮೂಡಿಸಲಾಗುವುದು: ರಾಸಾಯನಿಕ ಬಳಸದಂತೆ ಈಗಾಗಲೇ ಸಗಟು ಮಾರಾಟಗಾರರಿಗೆ ತಿಳಿವಳಿಕೆ ನೀಡಲಾಗಿದೆ. ಕರಪತ್ರಗಳ ಮೂಲಕ ಯಾವ ವಿಧಾನದಲ್ಲಿ ಹಣ್ಣು ಮಾಡಬೇಕು ಎನ್ನುವುದನ್ನು ತಿಳಿಸಲಾಗುತ್ತಿದೆ. ಆದರೂ ರಾಸಾಯನಿಕ ಬಳಸಿ ಹಣ್ಣು ಮಾಡುವುದು ಕಂಡು ಬಂದರೆ ಆಹಾರ ಸಂರಕ್ಷಣಾಧಿಕಾರಿಗಳು, ನಗರಪಾಲಿಕೆ ಆರೋಗ್ಯಾಧಿಕಾರಿಗಳು ದಾಳಿ ನಡೆಸಿ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಿದ್ದಾರೆ.
ಸಂಜಯ್ ಹಿರಿಯ ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ

ಪ್ರಕರಣ ದಾಖಲಾಗಿದೆ: ಕ್ಯಾನ್ಸರ್‌ಗೆ ಕಾರಣವಾಗುವ ಅಂಶ ಇರುವ ಕ್ಯಾಲ್ಸಿಯಂ ಕಾರ್ಬೋರೇಟ್ ಅನ್ನು ಹಣ್ಣು ಮಾಡಲು ಬಳಸಬಾರದು ಎಂದು ಸರ್ಕಾರ 2014ರಲ್ಲಿಯೇ ನಿಷೇಧಿಸಿದೆ. ಆದರೂ ನಿಯಮ ಮೀರಿದ 6 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ತಪ್ಪಿತಸ್ಥರಿಗೆ ಜೈಲುಶಿಕ್ಷೆಯಾಗಲಿದೆ. ಪ್ರತಿ ವರ್ಷ ವ್ಯಾಪಾರಿಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ನಿಯಮಿತವಾಗಿ ತಪಾಸಣೆ ನಡೆಸಲಾಗುತ್ತಿದೆ. ಈ ವರ್ಷವೂ ಜಾಗೃತಿ ಜತೆಗೆ ತಪಾಸಣೆ ತೀವ್ರಗೊಳಿಸಲಾಗುವುದು.
ಡಾ.ಚಿದಂಬರಂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಂಕಿತ ಅಧಿಕಾರಿ

Leave a Reply

Your email address will not be published. Required fields are marked *