ನಟರು ಬೀದಿಯಲ್ಲಿ ಜಗಳವಾಡಿಕೊಂಡು ನಿಲ್ಲಬಾರದು: ನಿರ್ಮಾಪಕ ಮುನಿರತ್ನ

<<ದೇವರಾಜ್, ಪ್ರಜ್ವಲ್ ದೇವರಾಜ್​ ಇಂದು ಡಿಸ್ಚಾರ್ಜ್>>

ಮೈಸೂರು: ನಟರ ನಡೆ, ನುಡಿಯಲ್ಲಿ ಸೂಕ್ಷ್ಮತೆ ಇರಲಿ. ಬೀದಿಯಲ್ಲಿ ಜಗಳವಾಡಿಕೊಂಡು ನಿಲ್ಲಬಾರದು ಎಂದು ನಟ ದುನಿಯಾ ವಿಜಯ್​ ಗಲಭೆ ವಿಚಾರಕ್ಕೆ ನಿರ್ಮಾಪಕ ಮುನಿರತ್ನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ದರ್ಶನ್​ ಭೇಟಿಗೆ ಆಸ್ಪತ್ರೆಗೆ ತೆರಳಿದಾಗ ಸುದ್ದಿಗಾರರೊಂದಿಗೆ ಮಾತನಾಡಿ, ನಿಮ್ಮನ್ನು ಲಕ್ಷಾಂತರ ಜನ ಹಿಂಬಾಲಿಸುತ್ತಿರುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಡಾ.ರಾಜ್‌ಕುಮಾರ್, ವಿಷ್ಣುವರ್ಧನ್​ರಂಥ ಮಾದರಿ ನಟರಿದ್ದರು‌. ಅವರನ್ನು ನೋಡಿ ಅದೆಷ್ಟೋ ಮಂದಿ ಬದಲಾವಣೆ ಆಗಿದ್ದರು‌. ಚಲನಚಿತ್ರಗಳು, ಚಿತ್ರನಟರು ಜನರ ಮೇಲೆ ಪರಿಣಾಮ ಬೀರುತ್ತಾರೆ. ಆದರೆ, ನೀವೇ ಹೀಗೆ ಮಾಡಿದರೆ ಅಭಿಮಾನಿಗಳು ಏನು ಮಾಡುತ್ತಾರೆ ಎಂದರು.

ಈ ಬಗ್ಗೆ ನಾನು ನಿರ್ಮಾಪಕರ ಸಂಘದಿಂದ ಸಭೆ ಕರೆಯುತ್ತೇನೆ. ಅವರಿಬ್ಬರ ಬಳಿ ಮಾತನಾಡಿ, ಮತ್ತೆ ಅವರ ಸ್ನೇಹ ಚಿಗುರುವಂತೆ ಮಾಡುತ್ತೇನೆ. ದುನಿಯಾ ವಿಜಯ್ ಇದರಿಂದ ಹೊರಗೆ ಬಂದು ಒಳ್ಳೆಯ ಚಿತ್ರ ಮಾಡಲಿ. ಹಿರಿಯ ನಟ ಅಂಬರೀಶ್ ಅವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ದೇವರಾಜ್, ಪ್ರಜ್ವಲ್ ದೇವರಾಜ್​ ಇಂದು ಡಿಸ್ಚಾರ್ಜ್
ಕಾರು ಅಪಘಾತದಲ್ಲಿ ಚಾಲೆಂಜಿಂಗ್​ ಸ್ಟಾರ್​ ಜತೆ ಆಸ್ಪತ್ರೆ ಸೇರಿದ್ದ ದೇವರಾಜ್​ ಮತ್ತು ಪ್ರಜ್ವಲ್​ ದೇವರಾಜ್​ ಅವರನ್ನು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗುತ್ತದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಪತಿ ಹಾಗೂ ಮಗನನ್ನು ಡಿಸ್ಚಾರ್ಜ್ ಮಾಡಿಸಿಕೊಳ್ಳಲು ದೇವರಾಜ್ ಪತ್ನಿ ಚಂದ್ರಲೇಖಾ ಅವರು ಆಸ್ಪತ್ರೆಗೆ ಆಗಮಿಸಿದ್ದಾರೆ. ಅಪಘಾತದಲ್ಲಿ ಪ್ರಜ್ಚಲ್ ದೇವರಾಜ್​ ಎಡಗೈಗೆ ಮತ್ತು ಕುತ್ತಿಗೆ ಭಾಗಕ್ಕೆ ಗಾಯಗಳಾಗಿತ್ತು. ಎರಡು ದಿನದ ಚಿಕಿತ್ಸೆ ನಂತರ ಇಬ್ಬರೂ ಆಸ್ಪತ್ರೆಯಿಂದ ಮನೆ ಸೇರಲಿದ್ದಾರೆ.

ಆದರೆ, ದರ್ಶನ್ ಮತ್ತು ಸ್ನೇಹಿತ ರಾಯ್ ಆಂತೋಣಿ ಚಿಕಿತ್ಸೆ ಮುಂದುವರಿದಿದೆ. (ದಿಗ್ವಿಜಯ ನ್ಯೂಸ್​)