ಮೈತ್ರಿ ಸರ್ಕಾರ ಅವಧಿಯಲ್ಲಿ ಜಾರಿಯಾಗಿದ್ದ ಸಾಲಮನ್ನಾ ಯೋಜನೆಗೆ ಹಣ ಹೊಂದಿಸಲು ಪರದಾಡುತ್ತಿರುವ ಬಿಎಸ್ವೈ ಸರ್ಕಾರ ಇದೀಗ ವಿವಿಧ ಇಲಾಖೆಗಳ ಅನುದಾನಕ್ಕೆ ಕತ್ತರಿ ಹಾಕುತ್ತಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನದ ಟ್ರಸ್ಟ್, ಪ್ರತಿಷ್ಠಾನಗಳ ಮೇಲೂ ಪರಿಣಾಮ ಉಂಟಾಗಿದೆ. ಪ್ರತಿ ವರ್ಷ ಬಿಡುಗಡೆಯಾಗುತ್ತಿದ್ದ ಅನುದಾನದಲ್ಲಿ ಶೇ.60 ಕಡಿತಗೊಳಿಸಲಾಗಿದ್ದು, ಸಂಘ-ಸಂಸ್ಥೆಗಳ ಚಟುವಟಿಕೆಗಳ ಮೇಲೆ ಗ್ರಹಣ ಕವಿದಿದೆ. ವಾರ್ಷಿಕ ಅನುದಾನ ಪ್ರಮಾಣವನ್ನು 15 ಲಕ್ಷ ರೂ.ಗಳಿಂದ 4 ಲಕ್ಷ ರೂ.ಗೆ ಇಳಿಸಿರುವುದು ಒಂದೆಡೆಯಾದರೆ, ಕಡಿತಗೊಂಡ ಅನುದಾನದಲ್ಲೂ ಕೇವಲ 1.50-2 ಲಕ್ಷ ರೂ. ಮಾತ್ರ ಬಿಡುಗಡೆಯಾಗುತ್ತಿರುವುದು ಸಿಬ್ಬಂದಿ ವೇತನಕ್ಕೂ ಸಂಕಷ್ಟ ಎದುರಾಗಿದೆ.
ಪ್ರತಿಷ್ಠಾನ, ಟ್ರಸ್ಟ್ ಸ್ಥಾಪನೆ: ನಾಡಿನ ಪ್ರಖ್ಯಾತ ಸಾಹಿತಿ, ಸಂಶೋಧಕರ ಹೆಸರಿನಲ್ಲಿ ಆಯಾ ಕ್ಷೇತ್ರದ ಅಧ್ಯಯನ, ಸಂಶೋಧನೆ ಮುಂತಾದ ಕಾರ್ಯ ಕೈಗೊಳ್ಳಲು ಪ್ರತಿಷ್ಠಾನಗಳನ್ನು ಸ್ಥಾಪಿಸಲಾಗಿದೆ. ಟ್ರಸ್ಟ್ ಗಳಿಗೆ ಆಯಾ ಕ್ಷೇತ್ರದ ಖ್ಯಾತನಾಮರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಸದಸ್ಯರೂ ಇದ್ದಾರೆ. ಈ ರೀತಿ ಇಲಾಖೆ ಅಧೀನದಲ್ಲಿ 23 ಪ್ರತಿಷ್ಠಾನಗಳಿದ್ದು, ಅವುಗಳಿಗೆ 12-15 ಲಕ್ಷ ರೂ. ವಾರ್ಷಿಕ ಸರಾಸರಿಯಂತೆ 3-3.5 ಕೋಟಿ ರೂ.ಗಳನ್ನು ಇಲಾಖೆ ತನ್ನ ಕ್ರಿಯಾ ಯೋಜನೆಯಲ್ಲಿ ಮೀಸಲಿಡುತ್ತಿತ್ತು. ಆದರೆ ಈ ವರ್ಷ ಎಲ್ಲ ಟ್ರಸ್ಗಳಿಗೂ ತಲಾ 4 ಲಕ್ಷ ರೂ.ನಂತೆ 1 ಕೋಟಿ ರೂ. ಮೀಸಲಿಡಲಾಗಿದೆ.
31 ಲಕ್ಷ ರೂ. ಪ್ರಸ್ತಾವನೆ: ಬೆಟಗೇರಿ ಕೃಷ್ಣಶರ್ಮ ಕುರಿತು ಕಾರ್ಯಕ್ರಮ ಆಯೋಜಿಸಲು 31 ಲಕ್ಷ ರೂ. ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಆದರೆ, ಅತಿ ಕಡಿಮೆ ಅನುದಾನ ಬರುತ್ತಿರುವ ಕಾರಣ ಕೆಲ ಕಾರ್ಯಕ್ರಮಗಳನ್ನೇ ರದ್ದುಪಡಿಸುತ್ತಿದ್ದೇವೆ ಎಂದು ಟ್ರಸ್ಟ್ನ ಅಧ್ಯಕ್ಷ ಪ್ರೊ.ರಾಘವೇಂದ್ರ ಪಾಟೀಲ ಅಸಮಾಧಾನ ತೋಡಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬೆಳಗಾವಿ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಪ್ರತಿಷ್ಠಾನ ಮತ್ತು ಟ್ರಸ್ಟ್ನ ಪದಾಧಿಕಾರಿಗಳು ಮಂಡಿಸಿದ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದ್ದಾರೆ.
ಪೂರ್ಣ ಹಣವೂ ಬಂದಿಲ್ಲ
2012-13ರಿಂದ 2016-17ರ ವರೆಗೆ ಬೆಳಗಾವಿಯಲ್ಲಿರುವ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಹಾಗೂ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ಗೆ ತಲಾ 12 ಲಕ್ಷ ರೂ. ಅನುದಾನ ಬರುತ್ತಿತ್ತು. 2017-18ರಲ್ಲಿ ಅನುದಾನ 15 ಲಕ್ಷ ರೂ.ಗೆ ಏರಿಕೆಯಾಗಿತ್ತು. ಆದರೆ, 2018-19ರಲ್ಲಿ ಅನುದಾನ ಏಕಾಏಕಿ 5 ಲಕ್ಷ ರೂ.ಗೆ ಇಳಿಕೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಕೃಷ್ಣಶರ್ಮ ಟ್ರಸ್ಟ್ಗೆ 3 ಲಕ್ಷ ರೂ. ಮತ್ತು ಕಟ್ಟೀಮನಿ ಪ್ರತಿಷ್ಠಾನಕ್ಕೆ 2 ಲಕ್ಷ ರೂ. ಅನುದಾನ ಬಂದಿದೆ.
ಈ ಬಾರಿ ಅನೇಕ ಚಟುವಟಿಕೆಗಾಗಿ 34 ಲಕ್ಷ ರೂ. ಕ್ರಿಯಾಯೋಜನೆ ರೂಪಿಸಿದ್ದೇವೆ. ಆದರೆ, ಸರ್ಕಾರ 4 ಲಕ್ಷ ರೂ. ಅನುದಾನ ನೀಡುತ್ತಿದೆ. ಈ ಹಣ ಪ್ರತಿಷ್ಠಾನದ ಕಚೇರಿ ನಿರ್ವಹಣೆ ಮತ್ತು ಅಲ್ಲಿ ದುಡಿಯುವ ಮೂವರ ಸಂಬಳ ನೀಡಲು ಸಾಲುವುದಿಲ್ಲ. ಹೀಗಿರುವಾಗ ಕಾರ್ಯಕ್ರಮ ಆಯೋಜಿಸುವುದಾದರೂ ಹೇಗೆ ಎಂದು ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಮಲ್ಲಿಕಾರ್ಜುನ ಹಿರೇಮಠ ಪ್ರಶ್ನಿಸುತ್ತಾರೆ.
ಪ್ರತಿಷ್ಠಾನಗಳಿಗೆ ನಿಗದಿ ಮಾಡಲಾಗಿರುವ 4 ಲಕ್ಷ ರೂ. ಪೂರ್ಣ ಲಭಿಸುತ್ತದೆ. ಹಂತಹಂತವಾಗಿ ಅದನ್ನು ಬಿಡುಗಡೆ ಮಾಡಲಾಗುತ್ತಿದ್ದು, ಇತ್ತೀಚೆಗಷ್ಟೇ ಒಂದು ಕಂತು ನೀಡಲಾಗಿದೆ. ಜನವರಿಯಲ್ಲಿ ಮತ್ತೊಂದು ಕಂತು ನೀಡಲಾಗುತ್ತದೆ.
| ಎಸ್. ರಂಗಪ್ಪ ನಿರ್ದೇಶಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಪ್ರತಿಷ್ಠಾನ, ಟ್ರಸ್ಟ್ಗಳಿಗೆ ಅನುದಾನ ಕಡಿತಗೊಳಿಸಿದ ವಿಷಯ ಗಮನಕ್ಕೆ ಬಂದಿದೆ. ಶೀಘ್ರ ಸಭೆ ಕರೆದು ಅಹವಾಲು ಆಲಿಸುವೆ. ನಂತರ ಅನುದಾನ ಹೆಚ್ಚಿಸಬೇಕೋ ಅಥವಾ ಬೇಡವೋ ಎಂಬ ವಿಷಯವನ್ನು ಬಜೆಟ್ ಪೂರ್ವ ಸಭೆಯಲ್ಲಿ ಮಂಡಿಸುವೆ.
| ಸಿ.ಟಿ. ರವಿ ಸಚಿವ ಸಚಿವ
| ರಮೇಶ ದೊಡ್ಡಪುರ ಬೆಂಗಳೂರು / ಇಮಾಮಹುಸೇನ್ ಗೂಡುನವರ ಬೆಳಗಾವಿ