ಶಶಿ ಈಶ್ವರಮಂಗಲ
ಸ್ವಚ್ಛ ಭಾರತದ ಕಡೆಗೆ ದೇಶವನ್ನು ಕೊಂಡೊಯ್ಯುವ ಕನಸು ಹಾಗೂ ಅದನ್ನು ಸಾಕಾರಗೊಳಿಸುವ ಪ್ರಯತ್ನ ಒಂದೆಡೆಯಾದರೆ, ಸಾರ್ವಜನಿಕ ರಸ್ತೆ ಬದಿಗಳಲ್ಲಿರುವ ತೋಡುಗಳಿಗೆ ತ್ಯಾಜ್ಯಗಳನ್ನು ಎಸೆದು ತ್ಯಾಜ್ಯ ಕೃತಕ ಡಂಪಿಂಗ್ ಯಾರ್ಡ್‌ಗಳಾಗಿ ಪರಿವರ್ತಿಸುವ ಕಿಡಿಗೇಡಿ ಪ್ರಯತ್ನಗಳು ಇನ್ನೊಂದೆಡೆ ನಿರಂತರವಾಗಿ ನಡೆಯುತ್ತಿವೆ. ಇದಕ್ಕೆ ಪುತ್ತೂರು- ಕಾಣಿಯೂರು ರಸ್ತೆಯ ಕೊಡಿನೀರು ಚೆಡವು ಎಂಬಲ್ಲಿನ ರಸ್ತೆ ಸೇತುವೆಯ ಬದಿ ರಾಶಿ ಬಿದ್ದು ಕೊಳೆಯುತ್ತಿರುವ ತ್ಯಾಜ್ಯಗಳೇ ಸಾಕ್ಷಿ..!
ಪುತ್ತೂರು ಕಾಣಿಯೂರು ರಸ್ತೆಯ ಕೊಡಿನೀರು ಚೆಡವು ಎಂಬಲ್ಲಿ ಕೈಪಂಗಳ ತೋಡಿಗೆ ಅಳವಡಿಸಲಾಗಿರುವ ಸೇತುವೆಯ ಎರಡೂ ಬದಿಗಳು ತ್ಯಾಜ್ಯಮಯವಾಗಿದ್ದು, ಕೊಳೆಯುವ ತ್ಯಾಜ್ಯಗಳು ತುಂಬಿಕೊಂಡು ಕೃತಕ ಡಂಪಿಂಗ್ ಯಾರ್ಡ್ ಸೃಷ್ಟಿಯಾಗಿದೆ. ಜನವಸತಿ ಪ್ರದೇಶದಲ್ಲೇ ಈ ಸೇತುವೆ ಇದ್ದು, ಕೊಳೆತ ತ್ಯಾಜ್ಯಗಳ ದುರ್ವಾಸನೆ ಪರಿಸರದ ಮಂದಿಗೆ ಸಮಸ್ಯೆಯಾಗಿ ಕಾಡುತ್ತಿದೆ. ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಹೋಗಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.
ಸಭೆ ಸಮಾರಂಭಗಳಲ್ಲಿ ಬಳಸಿದ ನಿರುಪಯುಕ್ತ ವಸ್ತುಗಳು, ಮಾಂಸ ತ್ಯಾಜ್ಯಗಳು, ಬಾಟಲಿಗಳು ಸೇರಿದಂತೆ ಪ್ಲಾಸ್ಟಿಕ್ ವಸ್ತುಗಳು, ಗೋಣಿ ಚೀಲಗಳಲ್ಲಿ ತುಂಬಿ ಎಸೆಯಲಾಗಿರುವ ಹಸಿ ಮತ್ತು ಒಣ ತ್ಯಾಜ್ಯಗಳು ಇಲ್ಲಿ ಕೊಳೆತು ನಾರುತ್ತಿವೆ. ವಾಹನಗಳಲ್ಲೂ ತ್ಯಾಜ್ಯ ತಂದು ತೋಡಿಗೆ ಎಸೆಯಲಾಗುತ್ತಿದೆ. ಸೇತುವೆಯ ಕೆಳಭಾಗದಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ನಿಂತಿದ್ದು, ಇಲ್ಲಿಗೆ ತ್ಯಾಜ್ಯ ವಸ್ತುಗಳನ್ನು ತಂದು ಸುರಿಯುತ್ತಿರುವ ಕಾರಣ ಸೊಳ್ಳೆಗಳ ಉತ್ಪಾದನಾ ತಾಣವಾಗಿ ಬದಲಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿದೆ.
ಪುತ್ತೂರು ತಾಲೂಕಿನ ನರಿಮೊಗ್ರು ಗ್ರಾಪಂ ವ್ಯಾಪ್ತಿಯಲ್ಲಿ ಈ ಅವ್ಯವಸ್ಥೆ ಸೃಷ್ಟಿಯಾಗಿದ್ದು, ಸಂಬಂಧಪಟ್ಟವರು ಗಮನಹರಿಸದ ಪರಿಣಾಮ ತ್ಯಾಜ್ಯ ರಾಶಿ ದಿನದಿಂದ ದಿನಕ್ಕೆ ಬೆಳೆಯತೊಡಗಿದೆ. ಜಗತ್ತೇ ಕರೊನಾ ವೈರಸ್ ಭೀತಿಯಿಂದ ಬಳಲುತ್ತಿದ್ದರೆ ಈ ಭಾಗದ ನಿವಾಸಿಗಳು ಕರೊನಾ ಜತೆಗೆ ಸಾಂಕ್ರಾಮಿಕ ರೋಗಗಳ ಆತಂಕದಲ್ಲಿದ್ದಾರೆ.
ಕೈಪಂಗಳ ತೋಡಿಗೆ ಕೊಡಿನೀರು ಚೆಡವು ಸೇತುವೆ ಬಳಿ ತ್ಯಾಜ್ಯ ಸುರಿಯಲಾಗುತ್ತಿದೆ. ಕೋಳಿ ತ್ಯಾಜ್ಯಗಳನ್ನು ಎಸೆಯಲಾಗುತ್ತಿದೆ. ಕೊಳೆಯುವ ತ್ಯಾಜ್ಯದಿಂದಾಗುತ್ತಿರುವ ಸಮಸ್ಯೆ ಕುರಿತು ಹಲವು ಬಾರಿ ಪಂಚಾಯಿತಿಗೆ ದೂರು ನೀಡಲಾಗಿದೆ. ಗ್ರಾಮಸಭೆಯಲ್ಲಿಯೂ ಈ ಬಗ್ಗೆ ಪ್ರಸ್ತಾಪ ಮಾಡಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ತಕ್ಷಣ ಗ್ರಾಮ ಪಂಚಾಯಿತಿ ತ್ಯಾಜ್ಯ ವಿಲೇವಾರಿಗೆ ಕ್ರಮಕೈಗೊಳ್ಳಬೇಕು.
ಕೆ.ಸುಂದರ ಗೌಡ ನಡುಬೈಲು, ನಿವೃತ್ತ ಯೋಧ
ಸೇತುವೆ ಬದಿಯ ತೋಡಿಗೆ ತ್ಯಾಜ್ಯ ತಂದು ಎಸೆಯುವವರು ಯಾರೆಂದು ಗೊತ್ತಾಗುತ್ತಿಲ್ಲ. ಗೊತ್ತಾದಲ್ಲಿ ಇಲ್ಲವೇ ವಾಹನಗಳಲ್ಲಿ ತ್ಯಾಜ್ಯ ತಂದು ಎಸೆಯುವವರ ಕುರಿತು ವಾಹನ ಸಂಖ್ಯೆ ಸಹಿತ ಮಾಹಿತಿ ನೀಡಿದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಪಂಜಾಳ, ಮುಕ್ವೆ ಮೊದಲಾದೆಡೆ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ತಂದು ಎಸೆಯುವ 4 ಪ್ರಕರಣಗಳನ್ನು ಪತ್ತೆ ಮಾಡಿ ಕ್ರಮಕೈಗೊಳ್ಳಲಾಗಿದೆ. ಕೊಡಿನೀರು ಚೆಡವು ಸೇತುವೆ ಬಳಿ ತೋಡಿನಲ್ಲಿ ರಾಶಿ ಬಿದ್ದಿರುವ ತ್ಯಾಜ್ಯಕ್ಕೆ ಬ್ಲೀಚಿಂಗ್ ಪೌಡರ್ ಹಾಕಿ ತ್ಯಾಜ್ಯ ತೆರವುಗೊಳಿಸಲಾಗುವುದು.
ರವಿಚಂದ್ರ ಯು., ನರಿಮೊಗ್ರು ಪಿಡಿಒ
ಸೂಕ್ತ ಕ್ರಮ ಅಗತ್ಯ
ಈ ಹಿಂದೆ ಇದೇ ರಸ್ತೆಯ ಬೆದ್ರಾಳ ಸೇತುವೆ ಇಕ್ಕೆಲಗಳಲ್ಲಿ ಬೆದ್ರಾಳ ಹೊಳೆಗೆ ತ್ಯಾಜ್ಯ ಎಸೆದು ಹೋಗುವ ಕೆಲಸ ನಿರಂತರವಾಗಿ ನಡೆಯುತ್ತಿತ್ತು. ಅಲ್ಲಿನ ಹೊಳೆಯ ಭಾಗದಲ್ಲಿ ತುಂಬಿಕೊಂಡ ತ್ಯಾಜ್ಯ ಕೊಳೆತು ದುರ್ನಾತ ಬೀರಲಾರಂಭಿಸಿ ಸಮಸ್ಯೆ ಎದುರಾಗಿತ್ತು. ಈ ಕುರಿತು ‘ವಿಜಯವಾಣಿ’ ವರದಿ ಬಿತ್ತರಿಸಿದ ಬೆನ್ನಲ್ಲಿ ಎಚ್ಚೆತ್ತುಕೊಂಡಿದ್ದ ನಗರಸಭೆ ತ್ಯಾಜ್ಯ ರಾಶಿಯನ್ನು ತೆರವುಗೊಳಿಸಲು ಕ್ರಮ ಕೈಗೊಂಡಿದ್ದರು. ಜತೆಗೆ ತ್ಯಾಜ್ಯ ತಂದು ಎಸೆಯುವವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಮುಂದಾಗಿದ್ದರು. ಅಲ್ಲಿ ತ್ಯಾಜ್ಯ ಎಸೆಯಲು ಅವಕಾಶವಿಲ್ಲದ ಮಂದಿ ಈಗ ಕೊಡಿನೀರು ಚೆಡವು ಎಂಬಲ್ಲಿನ ಸೇತುವೆ ಬಳಿ ತ್ಯಾಜ್ಯ ತಂದು ಎಸೆಯುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.