ಯಳಂದೂರು: ಸಮೀಪದ ಮಸಣಾಪುರ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಉಪ್ಪಾರ ಮತ್ತು ನಾಯಕ ಸಮುದಾಯಕ್ಕೆ ಸೇರಿದ ಸ್ಮಶಾನ ಜಾಗವನ್ನು ಒತ್ತುವರಿ ಮಾಡಿಕೊಂಡು ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮದ ಉಪ್ಪಾರ, ನಾಯಕಸಮುದಾಯದವರು ಶನಿವಾರ ಪ್ರತಿಭಟನೆ ನಡೆಸಿದರು.
ಸರ್ವೇ ನಂ.19/6 ಎ ನಲ್ಲಿ ಜಾಗವಿದ್ದು, ಒಟ್ಟು 27 ಗುಂಟೆ ಜಮೀನು ಕಾವೇರಿ ನೀರಾವರಿ ನಿಗಮಕ್ಕೆ ಸೇರಿದೆ. ಈ ಸ್ಥಳವನ್ನು ಉಪ್ಪಾರ ಹಾಗೂ ನಾಯಕ ಸಮುದಾಯದ ಸ್ಮಶಾನಕ್ಕೆ ನೀಡಬೇಕು. ಒಂದೂವರೆ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಸಮುದಾಯದ ಜನರಿದ್ದಾರೆ. ಈ ಹಿಂದೆ ಗಂಗವಾಡಿ ರಸ್ತೆಯಲ್ಲಿದ್ದ ಸ್ಮಶಾನ ಹಳ್ಳದಲ್ಲಿದ್ದು, ಇದರಲ್ಲಿ ನೀರು ತುಂಬಿಕೊಂಡು ತೊಂದರೆಯಾಗುತ್ತಿತ್ತು. ಹಾಗಾಗಿ ಇಲ್ಲಿ ಅನೇಕ ವರ್ಷಗಳಿಂದಲೂ ಅಂತ್ಯಸಂಸ್ಕಾರ ಮಾಡಿಕೊಂಡು ಬರಲಾಗುತ್ತಿತ್ತು.
ಜಮೀನಿನ ಸ್ಥಳವನ್ನು ಈ ಹಿಂದೆ ಸರ್ವೇ ಇಲಾಖೆ ಅಧಿಕಾರಿಗಳು ಸರ್ವೇ ಮಾಡಿ ಕಲ್ಲು ನೆಟ್ಟಿದ್ದರು. ಆದರೆ ಈಗ ಈ ಜಮೀನಿನ ಪಕ್ಕದಲ್ಲಿರುವ ಖಾಸಗಿ ವ್ಯಕ್ತಿಯೊಬ್ಬರು ಆ ಕಲ್ಲನ್ನು ಕಿತ್ತು ಹಾಕಿ ಉಳುಮೆ ಮಾಡುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.
ಇದು ಸರ್ಕಾರಿ ಜಮೀನಾಗಿದ್ದು, ಇಲ್ಲಿ ಅನೇಕರ ಅಂತ್ಯಕ್ರಿಯೆ ಮಾಡಲಾಗಿದೆ. ರಸ್ತೆ ಬದಿಯಲ್ಲಿರುವ ಫಲವತ್ತಾದ ಜಮೀನು ಎಂಬ ಕಾರಣಕ್ಕೆ ಕಬಳಿಸಿಕೊಳ್ಳಲು ಹುನ್ನಾರ ನಡೆಯುತ್ತಿದೆ. ಹಾಗಾಗಿ ಈ ಜಮೀನನ್ನು ಮತ್ತೆ ನಮಗೆ ವಾಪಸ್ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿ ಗ್ರಾಮ ಲೆಕ್ಕಾಧಿಕಾರಿ ರಾಜೇಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ರಾಜೇಂದ್ರ, ಈ ಸಂಬಂಧ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ವಹಿಸುವ ಭರವಸೆ ನೀಡಿದರು. ಸರ್ವೇಯರ್ ರಾಜು, ಗ್ರಾಮದ ಮುಖಂಡರಾದ ಲೋಕೇಶ್ ನಾಯಕ, ರಂಗಸ್ವಾಮಿನಾಯಕ, ಅಂಕನಾಯಕ, ವೆಂಕಟರಂಗಸ್ವಾಮಿ, ಶ್ರೀನಿವಾಸ, ಅಂಕಶೆಟ್ಟಿ, ಮಾದೇಶ್, ಕೃಷ್ಣ ಸೇರಿದಂತೆ ಇತರರಿದ್ದರು.