ಹೂವಿನಹಡಗಲಿ: ಪ್ರಾರ್ಥನೆಗೂ ಮುನ್ನ ವಿಶೇಷ ತರಗತಿ ತೆಗೆದುಕೊಳ್ಳುವುದರಿಂದ ಮಕ್ಕಳು ಸ್ವಚ್ಛ ಮನಸ್ಸಿನಿಂದ ಚಂಚಲತೆ ಇಲ್ಲದೆ ಉತ್ತಮವಾಗಿ ಕಲಿಯುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ.ಪೂಜಾರ ಹೇಳಿದರು.
ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಸೋಮವಾರ ಶಾಲಾ ಮತ್ತು ಸಾಕ್ಷರತಾ ಇಲಾಖೆಯಿಂದ ಆಯೋಜಿಸಿದ್ದ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಸಮಾಜ ವಿಜ್ಞಾನ ಮತ್ತು ಹಿಂದಿ ವಿಷಯ ಶಿಕ್ಷಕರ ಸಭೆಯಲ್ಲಿ ಮಾತನಾಡಿದರು.
ಎಸ್ಸೆಸ್ಸೆಲ್ಸಿ ಮಕ್ಕಳ ಕಲಿಕಾ ಸುಧಾರಣೆಗಾಗಿ ಮತ್ತು ಫಲಿತಾಂಶ ಉತ್ತಮಗೊಳಿಸಲು ಡಿಎಸ್‌ಇಆರ್‌ಟಿ ನೀಡಿರುವ ಎಲ್ಲ ಅಂಶಗಳನ್ನು ಅನುಷ್ಠಾನಕ್ಕೆ ತರಬೇಕು. 2024-25ನೇ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳ ಗುಣಾತ್ಮಕ ಕಲಿಕೆಗೆ ಶಿಕ್ಷಕರು ಆದ್ಯತೆ ನೀಡಬೇಕು. ಸಮಾಜ ವಿಜ್ಞಾನದ ನಕ್ಷೆ ಬಿಡಿಸಿ ಭಾಗಗಳನ್ನು ಗುರುತಿಸುವುದು, ಬರವಣಿಗೆ ಸ್ಪರ್ಧೆ, ಪ್ರಬಂಧ, ರಂಗೋಲಿ, ಚರ್ಚಾ ಸ್ಪರ್ಧೆ, ರಸಪ್ರಶ್ನೆ, ಪಠ್ಯವನ್ನು ನಾಟಕ ಮೂಲಕ ಪ್ರದರ್ಶಿಸುವುದು ಸೇರಿ ಮೊದಲಾದ ಸ್ಪರ್ಧೆಗಳನ್ನು ಆಯೋಜಿಸಿರಿ ಎಂದು ಸಲಹೆ ನೀಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎ.ಕೋಟೆಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ.ಹನುಮಂತಪ್ಪ, ನೋಡಲ್ ಅಧಿಕಾರಿ ಎಚ್.ಮಲ್ಲಿಕಾರ್ಜುನ, ಮುಖ್ಯಶಿಕ್ಷಕ ಸುರೇಶ ಅಂಗಡಿ, ತಾಲೂಕಿನ ಸರ್ಕಾರಿ ಅನುದಾನಿತ ಸಮಾಜ ವಿಜ್ಞಾನ ಮತ್ತು ಹಿಂದಿ ವಿಷಯ ಶಿಕ್ಷಕರು ಭಾಗವಹಿಸಿದ್ದರು.