ದಕ್ಷಿಣ ಏಷ್ಯಾ ಡಿಎಸ್​ಸಿ ಪ್ರಶಸ್ತಿಗೆ ಭಾಜನರಾದ ಕನ್ನಡದ ಕವಿ ಜಯಂತ್​ ಕಾಯ್ಕಿಣಿ

ಗೋಕರ್ಣ: ಕನ್ನಡದ ಖ್ಯಾತ ಕವಿ, ಕಥೆಗಾರ ಜಯಂತ ಕಾಯ್ಕಿಣಿ ಅವರಿಗೆ 25000 ಡಾಲರ್ ಮೌಲ್ಯದ ದಕ್ಷಿಣ ಏಷ್ಯಾದ ಪ್ರತಿಷ್ಠಿತ ಡಿಎಸ್​ಸಿ ಪ್ರಶಸ್ತಿ ದೊರೆತಿದೆ.

ಕೋಲ್ಕತದ ವಿಕ್ಟೋರಿಯಾ ಮೆಮೋರಿಯಲ್ ಹಾಲ್​ನಲ್ಲಿ ಶುಕ್ರವಾರ ಸಂಜೆ ಜರುಗಿದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯನ್ನು ಅನುವಾದಕಿ ತೇಜಸ್ವಿನಿ ನಿರಂಜನ ಜತೆ ಕಾಯ್ಕಿಣಿ ಹಂಚಿಕೊಂಡರು.

ಖ್ಯಾತ ಲೇಖಕ ರಸ್ಕಿನ್ ಬಾಂಡ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ‘ನೋ ಪ್ರಸೆಂಟ್ಸ್ ಪ್ಲೀಸ್’ ಮುಂಬೈ ಕುರಿತು ಒಂದು ವಿಶೇಷ ಅನುಭೂತಿಯನ್ನು ನೀಡುವ ಅಪರೂಪದ ಕೃತಿ. ಪರಿಶುದ್ಧವಾದ ಅಂತಃಸ್ಪೂರ್ತಿಗೆ ಇದು ಕಾರಣವಾಗಿದೆ ಎಂದರು.

ನಿರ್ಣಾಯಕ ಮಂಡಳಿ ಅಧ್ಯಕ್ಷ, ಖ್ಯಾತ ಇತಿಹಾಸಜ್ಞ ರುದ್ರಾಂಶು ಮುಖರ್ಜಿ ಮಾತನಾಡಿ, ‘ಜಯಂತ ಅವರು ಸದಾ ಗದ್ದಲನಿರತ ಮುಂಬೈ ಬದುಕಿನ ಲತಾಲಂಕಾರವನ್ನು ಅತ್ಯಂತ ಶಾಂತ ದನಿಯಲ್ಲಿ ಸುಸಂಬದ್ಧವಾಗಿ ಸಾಹಿತ್ಯ ರಚಿಸಿದ್ದಾರೆ. ಇದು ನಿರ್ಣಾಯಕ ಮಂಡಳಿಯನ್ನು ಬಹುವಾಗಿ ಪ್ರಭಾವಿಸಿದೆ ಎಂದರು.

ಡಿಎಸ್​ಸಿ ಪ್ರಶಸ್ತಿಯ ಸಹ ಸಂಸ್ಥಾಪಕಿ ಸುರಿನಾ ನರುಲಾ ಮಾತನಾಡಿ, ಜಾಗತೀಕರಣದ ವಿರುದ್ಧದ ಅಲೆಯಲ್ಲಿ ಸಾಹಿತ್ಯವನ್ನು ಹೆಣೆಯುತ್ತಿರುವ ಲೇಖಕರ ಕಾರ್ಯವನ್ನು ಅವರ ಕೃತಿಗಳು ಪ್ರತಿಫಲಿಸುತ್ತಿವೆ. ಈ ಹಿನ್ನೆಲೆಯಲ್ಲಿ ಈ ವರ್ಷದ ಥೀಮ್ ಆಗಿ ಸಮಿತಿ ವಲಸೆ (ಮೈಗ್ರೇಶನ್)ಯನ್ನು ಆಯ್ಕೆ ಮಾಡಿಕೊಂಡಿತ್ತು ಎಂದರು. ಪ್ರಶಸ್ತಿ ಸ್ವೀಕರಿಸಿ ಜಯಂತ ಕಾಯ್ಕಿಣಿ ಮಾತನಾಡಿದರು. ಸಮಾರಂಭದಲ್ಲಿ ನಿರ್ಣಾಯಕ ಮಂಡಳಿಯ ನಂದನ ಸೇನ್, ಕ್ಲೇರ್ ಆರ್ವಿುಸ್ಟಡ್, ತಿಸ್ಸಾ ಜಯತಿಲಕ ಮತ್ತು ಫಿದೋಶ್ ಆಝಿಮ್ ಇದ್ದರು. ಅಂತಿಮ ಹಂತದಲ್ಲಿ 4 ದೇಶಗಳ 6 ಕೃತಿಗಳಿದ್ದವು.