ಸೊರಗಿದ ಒಣಮೀನು ಉದ್ಯಮ

ಬಿ.ರಾಘವೇಂದ್ರ ಪೈ ಗಂಗೊಳ್ಳಿ
ಮೀನುಗಾರಿಕಾ ಉದ್ಯಮದಲ್ಲಿ ಮಂಜುಗಡ್ಡೆ ಪ್ರವೇಶವಾಗದೆ ಇದ್ದ ಅಂದಿನ ದಿನಗಳಲ್ಲಿ ಬಹಳ ಪ್ರಸಿದ್ಧವಾಗಿದ್ದ ಒಣಮೀನು ಉದ್ಯಮ ಇಂದು ಅವನತಿಯ ಅಂಚಿನಲ್ಲಿದೆ. ಒಣಮೀನು ಉದ್ಯಮದಲ್ಲಿ ತೊಡಗಿಸಿಕೊಂಡಿರುವ ನೂರಾರು ಮೀನುಗಾರರು ಬೇರೆ ಉದ್ಯಮದ ಕಡೆಗೆ ಗಮನ ಹರಿಸುವಂತಾಗಿದೆ.

ಗಂಗೊಳ್ಳಿ ಮೀನುಗಾರಿಕಾ ಬಂದರು ಪ್ರದೇಶದಲ್ಲಿ 20-25 ವರ್ಷಗಳ ಹಿಂದೆ ಸುಮಾರು 80ಕ್ಕೂ ಅಧಿಕ ಒಣ ಮೀನು ವ್ಯವಹಾರ ಮಾಡುವ ಮೀನುಗಾರರ ಶೆಡ್‌ಗಳಿದ್ದರೆ ಪ್ರಸಕ್ತ ಅದರ ಸಂಖ್ಯೆ 10ಕ್ಕೆ ಇಳಿದಿದೆ. ಮಂಜುಗಡ್ಡೆ ಬಳಕೆ, ಸಂಪರ್ಕ ವ್ಯವಸ್ಥೆಯಲ್ಲಿ ಸುಧಾರಣೆ, ಹಸಿ ಮೀನಿಗೆ ದರ ದುಬಾರಿಯಾಗಿರುವುದು ಹೀಗೆ ಹಲವು ಕಾರಣಗಳು ಇದರ ಹಿಂದಿವೆ.

ಪ್ರಸಿದ್ಧ ಮೀನುಗಾರಿಕಾ ಬಂದರು ಪ್ರದೇಶವಾಗಿರುವ ಗಂಗೊಳ್ಳಿಯಲ್ಲಿ ಬಹುತೇಕ ಜನ ಒಣಮೀನು ಉದ್ಯಮ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದ ಕಾಲವಿತ್ತು. ಮೀನುಗಾರರು ವಿವಿಧ ಮಾದರಿಯ ಬಲೆಗಳಲ್ಲಿ ಯಥೇಚ್ಚ ಮೀನು ಹಿಡಿದು ತರುತ್ತಿದ್ದರು. ಮೀನುಗಾರ ಮಹಿಳೆಯರು ಅಥವಾ ಮೀನು ಮಾರಾಟದಲ್ಲಿ ತೊಡಗಿಕೊಂಡಿರುವ ಹೆಂಗಸರು ಪ್ರತಿನಿತ್ಯ ಮೀನು ಮಾರುಕಟ್ಟೆಗಳಿಗೆ ತೆರಳಿ ಮೀನು ಮಾರುತ್ತಿದ್ದರು. ಇದರ ಜತೆಗೆ ಉಪ್ಪು ಹಾಕಿ ಮೀನು ಒಣಗಿಸುತ್ತಿದ್ದರು. ಈ ಉಪ್ಪು ಹಾಕಿದ ಮೀನನ್ನು ತಲೆ ಹೊರೆಯಲ್ಲಿ ಅಥವಾ ದೋಣಿಗಳಲ್ಲಿ ಹಳ್ಳಿಹಳ್ಳಿಗೆ ಕೊಂಡು ಹೋಗಿ ಮಾರಾಟ ವ್ಯವಸ್ಥೆಯೂ ಇತ್ತು.

ಮೀನುಗಾರಿಕಾ ಉದ್ಯಮದಲ್ಲಿ ಮಂಜುಗಡ್ಡೆ ಬಳಕೆ ಹೆಚ್ಚಾಗುತ್ತಿರುವುದರಿಂದ ಮತ್ತು ಸಂಪರ್ಕ ವ್ಯವಸ್ಥೆಯಲ್ಲಿ ಗಣನೀಯ ಸುಧಾರಣೆ ಕಂಡು ಬಂದಿರುವುದರಿಂದ ಒಣಮೀನು ವ್ಯವಹಾರಕ್ಕೆ ಹೊಡೆತ ಬೀಳತೊಡಗಿದೆ.
ಪ್ರಸ್ತುತ ಕೆಲವೇ ಜನ ಮೀನುಗಾರಿಕಾ ಬಂದರು ಮತ್ತು ಮಾರುಕಟ್ಟೆಗಳಲ್ಲಿ ಬಳಕೆಯಾಗದ ಮತ್ತು ಉಪಯೋಗಕ್ಕೆ ಬಾರದ ಮೀನುಗಳನ್ನು ತುಂಡರಿಸಿ ಉಪ್ಪು ಹಾಕಿ ಒಣಗಿಸುತ್ತಿದ್ದಾರೆ. ಹೀಗೆ ಒಣಗಿಸಿದ ಮೀನುಗಳನ್ನು ಕೇರಳ, ಆಂಧ್ರಪ್ರದೇಶ, ಚೆನ್ನೈ ಮೊದಲಾದ ಕಡೆ ರವಾನಿಸಲಾಗುತ್ತಿದೆ. ಇಂಥ ಒಣ ಮೀನುಗಳು ಅಡಕೆ ತೋಟ, ಕೋಳಿ ಸಾಕಾಣಿಕಾ ಕೇಂದ್ರಗಳಿಗೆ ಗೊಬ್ಬರ ಮತ್ತು ಕೋಳಿ ಆಹಾರವಾಗಿಯೂ ಬಳಕೆಯಾಗುತ್ತಿದೆ. ಹಿಂದಿನ 10 ವರ್ಷಗಳಿಗೆ ಹೋಲಿಸಿದರೆ ಇತ್ತೀಚಿನ ದಿನಗಳಲ್ಲಿ ಒಣಮೀನುಗಳ ಸಾಗಾಟ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಒಣಮೀನು ಉದ್ಯಮ ದಿನದಿಂದ ದಿನಕ್ಕೆ ಕುಸಿಯುತ್ತಿರುವುದರಿಂದ ಈ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಮೀನುಗಾರರು ಹಿಂದೇಟು ಹಾಕುತ್ತಿದ್ದಾರೆ.

ಉದ್ಯಮಕ್ಕೆ ಹೊಡೆತ: ಮೀನುಗಾರರು ಪ್ರತಿದಿನ ಹಿಡಿದು ತಂದ ಮೀನುಗಳನ್ನು ರಿಕ್ಷಾ, ಟೆಂಪೊ, ಲಾರಿಗಳ ಮೂಲಕ ಸಾಗಿಸಿ ಮಾರಾಟ ಮಾಡಲಾಗುತ್ತಿದೆ. ಹೆಚ್ಚಿನ ಮೀನುಗಳನ್ನು ಮಂಜುಗಡ್ಡೆ ತುಂಬಿಸಿ ಇನ್ಸುಲೇಟರ್ ವಾಹನಗಳ ಮೂಲಕ ರಾಜ್ಯದ ವಿವಿಧೆಡೆ ಮತ್ತು ಹೊರರಾಜ್ಯಗಳಿಗೆ ಸಾಗಿಸಲಾಗುತ್ತಿರುವುದರಿಂದ ಒಣ ಮೀನು ಉದ್ಯಮಕ್ಕೆ ಹೊಡೆತ ಬಿದ್ದಿದೆ. ಕೆಲ ಸಂದರ್ಭಗಳಲ್ಲಿ ಕಡಿಮೆ ಬೆಲೆಯ ಮೀನು ಧಾರಾಳವಾಗಿ ಸಿಗುತ್ತಿದ್ದು, ಈ ಮೀನನ್ನು ಫಿಶ್‌ಮಿಲ್‌ಗಳಿಗೆ ಕಳುಹಿಸಿಕೊಡುತ್ತಿರುವುದು ಕೂಡ ಒಣಮೀನು ಉದ್ಯಮದ ಹಿನ್ನಡೆಗೆ ಕಾರಣ ಎನ್ನಲಾಗುತ್ತಿದೆ. ಫಿಶ್‌ಮಿಲ್‌ಗಳಲ್ಲಿ ಮೀನಿನ ಎಣ್ಣೆ ತೆಗೆದು ಉಳಿದ ತ್ಯಾಜ್ಯಗಳಿಂದ ಕೋಳಿ ಆಹಾರ ಮತ್ತು ಕಷಿ ಗೊಬ್ಬರಗಳನ್ನು ತಯಾರಿಸುತ್ತಿರುವುದರಿಂದ ಹೊರ ರಾಜ್ಯಗಳಲ್ಲಿ ಒಣ ಮೀನಿನ ಬೇಡಿಕೆ ಇಳಿಮುಖಗೊಂಡಿದೆ.

ದುಬಾರಿ ದರ ಕಾರಣ: ಹಸಿ ಮೀನಿಗೆ ದರ ಹೆಚ್ಚಾಗಿರುವುದರಿಂದ ಮೀನುಗಾರರು ಮೀನು ಒಣಗಿಸಿ ಮಾರಾಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಮಾರಾಟವಾಗದೆ ಇರುವ ಮೀನುಗಳನ್ನು ಮಾತ್ರ ಉಪ್ಪು ಹಾಕಿ ಒಣಗಿಸುತ್ತಿರುವುದರಿಂದ ಉದ್ಯಮದ ಹಿನ್ನಡೆಗೆ ಇನ್ನೊಂದು ಕಾರಣ. ದಶಕಗಳಿಂದ ಮೀನುಗಾರರು ಮಾಡಿಕೊಂಡು ಬಂದಿರುವ ಒಣಮೀನು ಉದ್ಯಮ ವಿನಾಶದ ಅಂಚಿಗೆ ತಲುಪಿದ್ದು, ಇಂಥ ಉದ್ಯಮಗಳ ಪುನಶ್ಚೇತನಕ್ಕೆ ಸೂಕ್ತ ಯೋಜನೆ ರೂಪಿಸಿಬೇಕಿದೆ.

Leave a Reply

Your email address will not be published. Required fields are marked *