ಕುಡಿದ ಅಮಲಿನಲ್ಲಿ ಫ್ಲೈಟ್‌ನಲ್ಲಿ ಮಹಿಳೆಯ ಸೀಟ್‌ ಮೇಲೆ ಮೂತ್ರ ವಿಸರ್ಜನೆ!

ನವದೆಹಲಿ: ಏರ್‌ ಇಂಡಿಯಾ ಅಂತಾರಾಷ್ಟ್ರೀಯ ವಿಮಾನದಲ್ಲಿ ಕುಡಿದಿದ್ದ ವ್ಯಕ್ತಿಯೋರ್ವ ಸಹ ಪ್ರಯಾಣಿಕ ಮಹಿಳೆಯೊಬ್ಬರ ಸೀಟ್‌ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದು, ಈ ಕುರಿತು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ದೂರೊಂದು ಬಂದಿದೆ.

ಆಗಸ್ಟ್‌ 30ರಂದು AI 102 ನಂಬರಿನ ಏರ್‌ಇಂಡಿಯಾ ವಿಮಾನವು ನ್ಯೂಯಾರ್ಕ್‌ನಿಂದ ನವದೆಹಲಿಗೆ ಪ್ರಯಾಣಿಸುತ್ತಿದ್ದ ವೇಳೆ ಘಟನೆ ನಡೆದಿದೆ.

ಮಹಿಳಾ ಪ್ರಯಾಣಿಕರ ಮಗಳು ಇಂದ್ರಾಣಿ ಘೋಷ್‌ ಎಂಬಾಕೆ ಟ್ವಿಟರ್‌ನಲ್ಲಿ ಶುಕ್ರವಾರ ಸಂಜೆ ಘಟನೆಯನ್ನು ವಿವರಿಸಿದ್ದು, ನಾಗರಿಕ ವಿಮಾನಯಾನ ಸಚಿವ ಸುರೇಶ್‌ ಪ್ರಭು, ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾಸ್ವರಾಜ್‌ ಮತ್ತು ಏರ್‌ಇಂಡಿಯಾದ ಅಧಿಕಾರಿಗಳು ಗಮನ ಹರಿಸುವಂತೆ ಕೋರಿದ್ದಾರೆ.

ಆಗಸ್ಟ್‌ 30ರಂದು AI102 JFK ನಂಬರಿನ ವಿಮಾನದ ಸೀಟ್‌ ನಂಬರ್‌ 36ರಲ್ಲಿ ತನ್ನ ತಾಯಿಯು ಒಬ್ಬರೇ ಪ್ರಯಾಣಿಸುತ್ತಿದ್ದರು. ಈ ವೇಳೆ ಕುಡಿದ ವ್ಯಕ್ತಿಯೋರ್ವ ಆಕೆಯ ಸೀಟಿನ ಬಳಿ ಬಂದು ಏಕಾಏಕಿ ಪ್ಯಾಂಟ್‌ ಬಿಚ್ಚಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ತನ್ನ ತಾಯಿ ಇದರಿಂದಾಗಿ ತೀವ್ರ ಆಘಾತವನ್ನು ಎದುರಿಸಬೇಕಾಯಿತು. ದಯಮಾಡಿ ಈ ಕೂಡಲೇ ಗಮನ ಹರಿಸಿ ಎಂದು ಕೇಳಿಕೊಂಡಿದ್ದಾರೆ.

ಟ್ವೀಟ್‌ವೊಂದಕ್ಕೆ ಪ್ರತಿಕ್ರಿಯಿಸಿರುವ ಅವರು, ಘಟನೆ ನಂತರ ಏರ್‌ಇಂಡಿಯಾದವರು ಸೀಟ್‌ನ್ನು ಬದಲಾಯಿಸಿದ್ದಾರೆ. ನಂತರ ತನ್ನ ತಾಯಿ ಏರ್‌ಪೋರ್ಟ್‌ನಲ್ಲಿ ಮತ್ತೊಂದು ವಿಮಾನಕ್ಕಾಗಿ ಕಾಯುತ್ತ ವ್ಹೀಲ್‌ಚೇರ್‌ನಲ್ಲಿ ಕುಳಿತಿರುವಾಗ ಆ ವ್ಯಕ್ತಿಯು ಅಲ್ಲಿಂದ ಹಾದು ಹೋಗಿದ್ದಾನೆ ಎಂದು ತಿಳಿಸಿದ್ದಾರೆ.

ಘಟನೆ ಕುರಿತಂತೆ ಟ್ವೀಟ್‌ ಮಾಡಿರುವ ನಾಗರಿಕ ವಿಮಾನಯಾನದ ಕಿರಿಯ ಸಚಿವ ಜಯಂತ್‌ ಸಿನ್ಹಾ ಏರ್‌ ಇಂಡಿಯಾದವರಿಗೆ ಶೀಘ್ರವಾಗಿ ವಾಯುಯಾನ ನಿಯಂತ್ರಕ, ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ವರದಿ ನೀಡುವಂತೆ ಕೇಳಿದ್ದಾರೆ. (ಏಜೆನ್ಸೀಸ್)