ಡ್ರಗ್ಸ್​ ಮಾರಾಟಗಾರರ ವಿರುದ್ಧ ಗೂಂಡಾಕಾಯ್ದೆ ಅಡಿಯಲ್ಲಿ ಕ್ರಮ: ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ಡ್ರಗ್ ಮಾಫಿಯಾದಲ್ಲಿ ತೊಡಗಿರುವವರ ವಿರುದ್ಧ ಗೂಂಡಾ ಕಾಯಿದೆಯಡಿ ಕ್ರಮ‌ಕೈಗೊಳ್ಳಲಾಗುವುದು ಎಂದು ಗೃಹಸಚಿವ ಜಿ. ಪರಮೇಶ್ವರ್ ಭರವಸೆ ನೀಡಿದ್ದಾರೆ.

ಬಜೆಟ್ ಅಧಿವೇಶನದ ಕೊನೆಯ ದಿನವಾದ ಇಂದು ವಿಧಾನಸಭೆಯಲ್ಲಿ ವಿಪಕ್ಷದ ಸದಸ್ಯ ಆರ್.‌ಅಶೋಕ್ ಅವರು ಡ್ರಗ್ ಮಾಫಿಯಾ ಕುರಿತು ಪ್ರಸ್ತಾಪಿಸಿದಾಗ, ಡಿಸಿಎಂ ಹೀಗೆ ಪ್ರತಿಕ್ರಿಯಿಸಿದ್ದಾರೆ.

ರಾಜ್ಯದಲ್ಲಿ ಮಾದಕ ದ್ರವ್ಯಗಳ ಮಾರಾಟ ತಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಲಾಗಿದೆ.‌ ಮಂಗಳೂರು, ಗೋವಾ, ಪಾಂಡಿಚೇರಿ ಮುಂತಾದ ಕರಾವಳಿ ಭಾಗದಲ್ಲಿ ಹೆಚ್ಚಿನ ಮಾರಾಟ ನಡೆಯುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ.‌ ಯಾವುದೇ ಕಾರಣಕ್ಕೂ ಡ್ರಗ್ ದಂಧೆ ನಡೆಯಲು ಬಿಡುವುದಿಲ್ಲ, ಅಂಥವರ ವಿರುದ್ಧ ಗೂಂಡಾಕಾಯಿದೆ ಅಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ಕೇಂದ್ರ ಸರ್ಕಾರ ಸೂಕ್ತ ಕಾನೂನು ತರಲಿ
ಇಡೀ ದೇಶದಲ್ಲಿ ಡ್ರಗ್ಸ್ ದಂಧೆ ಇದೆ. ‌ಇದನ್ನು ನಿಯಂತ್ರಿಸಲು ಕೇಂದ್ರ ಸರಕಾರ ಕಠಿಣ ಕಾನೂನು ಜಾರಿ ಮಾಡಬೇಕು. ಈ ವಿಚಾರದ ಬಗ್ಗೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆ ನಡೆದು, ಜನರಲ್ಲಿ ಅರಿವು ಮೂಡುವಂತಾಗಬೇಕು ಎಂದು ಡಿಸಿಎಂ ಪರಮೇಶ್ವರ್​ ಹೇಳಿದರು.

ರಾಜ್ಯದಲ್ಲೂ ಡ್ರಗ್ ಹಾವಳಿ ನಿಲ್ಲಬೇಕು. ಕಾನೂನು ಚೌಕಟ್ಟಿನಲ್ಲಿ ಡ್ರಗ್ಸ್ ಮಾಫಿಯಾ ನಿಲ್ಲಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ವೀಸ ಇಲ್ಲದ ವಿದೇಶಿಗರು ವಾಪಸ್​
ರಾಜ್ಯದಲ್ಲಿ ವೀಸಾ ಅವಧಿ ಮುಗಿದ ನಂತರವೂ ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ಪತ್ತೆ ಹಚ್ಚಿ ,ಮಾತೃದೇಶಕ್ಕೆ ವಾಪಸ್ ಕಳುಹಿಸಲು ಪೊಲೀಸರಿಗೆ ಸೂಚನೆ ನೀಡಿದ್ದೇವೆ. ಕಳೆದ ಬಾರಿ ಸುಮಾರು 1300 ವಿದೇಶಿಗರನ್ನು ಪತ್ತೆಹಚ್ಚಿ ವಾಪಸ್ ಕಳಿಸಲಾಗಿತ್ತು ಎಂದು ಡಿಸಿಎಂ ತಿಳಿಸಿದ್ದಾರೆ.

ವಿದೇಶಿ ವಿದ್ಯಾರ್ಥಿಗಳು ಡ್ರಗ್ಸ್​ ಮಾಫಿಯಾದಲ್ಲಿರುವ ಬಗ್ಗೆ ಮಾಹಿತಿಯಿದ್ದು, ರಾಜ್ಯಾದ್ಯಂತ 400ಕ್ಕೂ ಹೆಚ್ಚು ವಿದೇಶಿ ವಿದ್ಯಾರ್ಥಿಗಳು ಭಾಗಿಯಾಗಿರುವುದು ತಿಳಿದುಬಂದಿದೆ. ಅವರ ವೀಸಾ ಅವಧಿ ಮುಗಿದಿದ್ದರೂ ಕೆಲವರು ಅಕ್ರಮವಾಗಿ ನೆಲೆಸಿದ್ದಾರೆ. ಅವರನ್ನು ಪತ್ತೆ ಹಚ್ಚಿ ಮೊದಲು ಅವರ ದೇಶಕ್ಕೆ ವಾಪಸ್ ಕಳುಹಿಸಿ ಎಂದು ವಿಧಾನಸಭೆಯಲ್ಲಿ ಅರವಿಂದ ಲಿಂಬಾವಳಿ ಒತ್ತಾಯಿಸಿದರು.

ಜೈಲಿನಲ್ಲೇ ಡ್ರಗ್ಸ್​ ಸಪ್ಲೈ…
ಡ್ರಗ್ಸ್​ ಮಾಫಿಯಾದ ಬಗ್ಗೆ ಚರ್ಚೆ ವೇಳೆ ವಿಪಕ್ಷ ನಾಯಕ ಬಿ.ಎಸ್​.ಯಡಿಯೂರಪ್ಪ ಮಾತನಾಡಿ, ಜೈಲಿನಲ್ಲಿ ಡ್ರಗ್ಸ್​ ಸಪ್ಲೈ ಮಾಡುತ್ತಿಲ್ಲವೆಂಬ ಉದಾಹರಣೆ ಕೊಡುತ್ತೀರಾ? ಪೊಲೀಸ್ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮಕೈಗೊಳ್ಳಿ ಎಂದರು.

ಬೇಗ ಜರ್ಮನಿ ನಾಯಿಯನ್ನು ಇಲ್ಲಿಗೆ ಕರೆಸಿ
ಡ್ರಗ್ಸ್ ಕಂಟ್ರೋಲ್​ಗೆ ಡಾಗ್ ಸ್ಕ್ವಾಡ್ ಸಹಾಯ ಕೂಡ ಇದೆ. ಈ ವ್ಯವಸ್ಥೆ ಈಗಾಗಲೇ ಜರ್ಮನಿಯಲ್ಲಿ ಜಾರಿಯಲ್ಲಿದೆ. ಆ ನಾಯಿ 4 ತಿಂಗಳ ಹಿಂದೆ ಗಾಂಜಾ ಸೇವಿಸಿದ್ದರೂ ಪತ್ತೆ ಹಚ್ಚುತ್ತವೆ ಎಂದು ಪರಮೇಶ್ವರ್​ ಅವರು ಹೇಳಿದಾಗ, ಅದಕ್ಕೆ ಪ್ರತಿಕ್ರಿಸಿದ ಅರವಿಂದ ಲಿಂಬಾವಳಿ ‘ಮೊದಲು ಆ ನಾಯಿಗಳನ್ನು ಇಲ್ಲಿಗೆ ತರಿಸಿಬಿಡಿ’ ಎಂದರು. (ದಿಗ್ವಿಜಯ ನ್ಯೂಸ್​)