ಕಾಫಿ, ಕಪ್ಪು ಚಿನ್ನಕ್ಕೆ ಶಂಕು ಹುಳು ಕಾಟ

ಚಿಕ್ಕಮಗಳೂರು: ಮೂರು ತಿಂಗಳ ನಿರಂತರ ಮಳೆಯ ಅನಾಹುತಗಳಿಂದ ಹೈರಣಾಗಿದ್ದ ಕಾಫಿ ನಾಡಿನ ರೈತರು ಈಗ ಮತ್ತೊಂದು ಸಮಸ್ಯೆಗೆ ತುತ್ತಾಗಿದ್ದಾರೆ. ಕಾಫಿ, ಕಾಳು ಮೆಣಸು ಮತ್ತು ಅಡಕೆಗೆ ಆಫ್ರಿಕನ್ ಗೆಯಿಂಟ್ ಸ್ನೈಲ್ (ಶಂಖು ಹುಳು) ಲಗ್ಗೆ ಇಟ್ಟಿದ್ದು, ಬೆಳೆ ರಕ್ಷಣೆ ಮಾಡಿಕೊಳ್ಳಲು ರೈತರು ಹರಸಾಹಸ ಪಡಬೇಕಾಗಿದೆ.

ಬಾಳೆಹೊನ್ನೂರು, ಗೋಣಿಬೀಡಿನ ಹೋಯ್ಸೆಳಲು, ಮೂಗ್ತಿಹಳ್ಳಿ ಸುತ್ತಮುತ್ತಲ ಕಾಲು ಕೆ.ಜಿ.ಗೂ ಹೆಚ್ಚು ತೂಕದ ಶಂಖು ಹುಳುಗಳು ತೋಟಗಳಲ್ಲಿ ಬಾಯಿಗೆ ಸಿಕ್ಕದ್ದನ್ನೆಲ್ಲ ಮುಕ್ಕುತ್ತಿವೆ. ಮಲೆನಾಡಿನಲ್ಲಿ ಚದುರಿದಂತೆ ಅಲ್ಲಲ್ಲಿ ಕಾಣಿಸಿರುವ ಶಂಕುಹುಳು ಸುಮಾರು 10 ಸಾವಿರ ಎಕರೆ ವ್ಯಾಪಿಸಿರುವ ಅಂದಾಜಿದೆ.

ಅತಿವೃಷ್ಟಿಯಿಂದ ಕಾಫಿ, ಅಡಕೆ, ಕಾಳುಮೆಣಸು ಬೆಳೆ ಸಾಕಷ್ಟು ಹಾನಿಗೀಡಾಗಿವೆ. ಮಳೆಯಿಂದ ಹಾನಿಗೀಡಾಗಿರುವ ಬೆಳೆ ರಕ್ಷಣೆಗೆ ಆಲೋಚನೆ ಮಾಡುತ್ತಿರುವ ವೇಳೆಯಲ್ಲೇ ಶಂಕು ಹುಳುಗಳು ತೋಟಗಳಿಗೆ ದಾಳಿ ಮಾಡುತ್ತಿರುವುದು ರೈತರನ್ನು ಚಿಂತೆಗೀಡುಮಾಡಿದೆ.

ಮಲೆನಾಡಿನ ಅಲ್ಲಲ್ಲಿ ತೋಟಗಳಿಗೆ ಸೈನಿಕರಂತೆ ದಾಳಿ ಮಾಡಿರುವ ಶಂಖು ಹುಳುಗಳನ್ನು ಹಿಡಿದು ಸಾಯಿಸಲು ಬೆಳೆಗಾರರು ಕಾರ್ವಿುಕರೊಡನೆ ಬೆವರು ಸುರಿಸುತ್ತಿದ್ದಾರೆ. ತೋಟವೊಂದರಲ್ಲಿ 30ರಿಂದ 40 ಕಾರ್ವಿುಕರು ಈ ಹುಳು ಹಿಡಿಯಲು ಕೆಲಸ ಮಾಡುತ್ತಿದ್ದು, ಅವರಿಗೆ ಕೂಲಿ ಕೊಡುತ್ತಿರುವುದು ಮತ್ತಷ್ಟು ಆರ್ಥಿಕ ಹೊರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಔಷಧಿಗೆ ಬಗ್ಗುತ್ತಿಲ್ಲ: ಶಂಕು ಹುಳು ನಿಯಂತ್ರಣಕ್ಕೆ ಕಾಫಿ ಬೋರ್ಡ್ ನೀಡಿರುವ ಲಾರ್ವಿನ್ ಔಷಧವನ್ನು ಅಕ್ಕಿ ತೌಡಿನೊಂದಿಗೆ ತೋಟಗಳಲ್ಲಿ ಇಡುತ್ತಿದ್ದರೂ ನಿಯಂತ್ರಣಕ್ಕೆ ಬರುತ್ತಿಲ್ಲ. 250-300 ಗ್ರಾಂ ತೂಕದ ಈ ಶಂಖು ಹುಳುಗಳು ಔಷಧಕ್ಕೆ ಸಾಯುತ್ತಿಲ್ಲ. ಹೀಗಾಗಿ ಕೂಲಿ ಕಾರ್ವಿುಕರಿಂದಲೇ ಅವುಗಳನ್ನು ಹಿಡಿದು ಬಕೆಟ್, ಬುಟ್ಟಿಗಳಲ್ಲಿ ತುಂಬಿಕೊಂಡು ಗುಂಡಿ ತೆಗೆದು ಅವುಗಳ ಮೇಲೆ ಸುಣ್ಣ, ಕಲ್ಲು ಉಪ್ಪು ಹಾಕಿ ಸಾಯಿಸಲಾಗುತ್ತಿದೆ.

ರಾತ್ರಿ ವೇಳೆ ಸಕ್ರಿಯ:  ಶಂಖು ಹುಳುಗಳ ಆಯಸ್ಸು 9-10 ವರ್ಷ ಎನ್ನಲಾಗಿದ್ದು, ರಾತ್ರಿ ವೇಳೆ ಸಕ್ರಿಯವಾಗಿ ಬೆಳೆಗಳನ್ನು ತಿನ್ನುವ ಇವು ಹಗಲು ವೇಳೆ ಮಣ್ಣಿನೊಳಗೆ ಸೇರಿ ಮರೆಯಾಗಿ ಬಿಡುತ್ತವೆ. ಹೀಗಾಗಿ ಈ ಹುಳುಗಳನ್ನು ನಿವಾರಣೆ ಮಾಡಲು ರೈತರು ಸಾಕಷ್ಟು ಕಷ್ಟಪಡಬೇಕಾಗುತ್ತದೆ.

ಆಹಾರ, ನೀರು ಇಲ್ಲದೆ ಐದಾರು ತಿಂಗಳು ಮಣ್ಣಿನೊಳಗೆ ಇರುವ ಈ ಶಂಖದ ಹುಳು ಬೇಸಿಗೆ ಸಮಯದಲ್ಲಿ ಸಮಾಧಿ ಸ್ಥಿತಿಯಲ್ಲಿರುತ್ತದೆ. ಮಣ್ಣಿನಲ್ಲಿರುವ ಹುಳುಗಳನ್ನು ನಾಶ ಮಾಡುವುದು ಕಠಿಣ ಸವಾಲಾಗಿದೆ. ಮಳೆಗಾಲ ಪ್ರಾರಂಭವಾಗಿ ತಿಂಗಳ ನಂತರ ಭೂಮಿಯಿಂದ ಮೇಲೆ ಬಂದು ಸಿಕ್ಕಿದ್ದೆಲ್ಲ ತಿನ್ನುತ್ತದೆ.

ವರ್ಷದಲ್ಲಿ ನಾಲ್ಕು ಬಾರಿ ತಲಾ 200-250 ಮೊಟ್ಟೆ ಇಡುವ ಇದು ಸಂತಾನಾಭಿವೃದ್ಧಿ ಅತಿ ವೇಗದಲ್ಲಿ ಹೆಚ್ಚಿಸಿಕೊಳ್ಳುತ್ತದೆ. ರೈತರು ಹುಳುಗಳ ಜತೆ ಮೊಟ್ಟೆಗಳನ್ನು ನಾಶ ಮಾಡಬೇಕಾಗಿದೆ. ಬಹುತೇಕ ಇದು ಕಾಫಿ ಗಿಡಗಳ ಪೊಟರೆಯಲ್ಲಿ ಮೊಟ್ಟೆ ಇಡುವುದರಿಂದ ಅವುಗಳನ್ನು ನಾಶ ಮಾಡುವುದು ಅಷ್ಟು ಸುಲಭವಲ್ಲ.