ಬಸವಕಲ್ಯಾಣ: ಸಶಕ್ತ ಯುವಕರಿಂದ ಮಾತ್ರ ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆ. ಯುವಕರು ದುಶ್ಚಟಗಳಿಗೆ ಆಕರ್ಷಿತರಾಗದೇ ಆರೋಗ್ಯ ಕಾಪಾಡಿಕೊಳ್ಳುವ ಜತೆಗೆ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಬೀದರ್ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಕಾಂತ ಶಾಬಾದಕರ ಹೇಳಿದರು.
ನಗರದ ಶ್ರೀ ಬಸವೇಶ್ವರ ಪಿಯು ಕಾಲೇಜಿನಲ್ಲಿ ಭಾನುವಾರ ನಶಾ ಮುಕ್ತ ಭಾರತ ಅಭಿಯಾನದ ಅಡಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಶೆಮುಕ್ತ ಭಾರತ ಪ್ರಧಾನಿ ಮೋದಿ ಅವರ ಕನಸಾಗಿದ್ದು, ಅದನ್ನು ಸಾಕಾರಗೊಳಿಸುವ ಕಾರ್ಯ ಭಾರತೀಯ ಪ್ರಜೆಗಳಾದ ನಮ್ಮೆಲ್ಲರ ಕರ್ತವ್ಯವಾಗಿದೆ. ವಿದ್ಯಾರ್ಥಿಗಳು ದೂಡ್ಡ ದೂಡ್ಡ ಕನಸುಗಳನ್ನು ಕಂಡು ಸಾಕಾರಗೊಳಿಸಲು ಶ್ರಮ ವಹಿಸಿ ಅಭ್ಯಾಸ ಮಾಡಬೇಕು. ಅಂದಾಗ ಮಾತ್ರ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಅಧ್ಯಕ್ಷತೆ ವಹಿಸಿದ್ದರು. ಬೀದರ್ ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಸುರೇಶ ಅಕ್ಕಣ, ತಾಲೂಕು ಅಧ್ಯಕ್ಷ ಡಾ.ಜೈಶೇನ ಪ್ರಸಾದ, ಬಿಡಿಪಿಸಿ ಉಪಾಧ್ಯಕ್ಷ ಮಲಿಕಾರ್ಜುನ ಚಿರಡೆ ಇತರರಿದ್ದರು.
ಡಾ.ರುದ್ರಮಣಿ ಮಠಪತಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕನ್ಯಾಕುಮಾರಿ ಯನಗುಂದೆ ನಿರೂಪಣೆ ಮಾಡಿ ವಂದಿಸಿದರು. ಬೀದರ್ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಕಾಂತ ಶಾಬಾದಕರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಸಾಮೂಹಿಕವಾಗಿ ಪ್ರತಿಜ್ಞಾ ವಿಧಿ ಭೋಧಿಸಲಾಯಿತು.