More

  ಕಲಾವಿದರಿಂದ ಸಮಾಜ ಸಂರಕ್ಷಣೆ ಸಾಧ್ಯ

  ಕಲಬುರಗಿ: ಆಧುನಿಕ ಸಮಾಜದಲ್ಲಿ ಮಾನವೀಯ ಮೌಲ್ಯ ಮರೆಯಾಗಿದೆ. ಇಡೀ ಮನುಕುಲ ಮನುಷ್ಯತ್ವದ ಬರ ಎದುರಿಸುತ್ತಿದೆ. ಇಂತಹ ಸ್ಥಿತಿಯಲ್ಲಿ ಸೂಕ್ಷö್ಮ ಸಂವೇದನೆ ಮತ್ತು ಮಾನವತ್ವ ಪ್ರಜ್ಞೆಯುಳ್ಳ ಕಲಾಕೃತಿಗಳ ರಚನೆ ಮೂಲಕ ಮನುಷ್ಯತ್ವ ಪ್ರಜ್ಞೆ ಬೆಳೆಸಿ ಸಮಾಜವನ್ನು ಸಂರಕ್ಷಿಸುವುದು ಕಲಾವಿದರಿಂದ ಸಾಧ್ಯವಾಗಲಿದೆ ಎಂದು ಹಿರಿಯ ಸಾಹಿತಿ ಪ್ರೊ.ಆರ್.ಕೆ. ಹುಡಗಿ ಅಭಿಪ್ರಾಯಪಟ್ಟರು.

  ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಡಿ ಕಲಬುರಗಿ ರಂಗಾಯಣದಲ್ಲಿ ಸೋಮವಾರ ಆಯೋಜಿಸಿದ್ದ ದೃಶ್ಯ ಬೆಳಕು ಗೌರವ ಪುರಸ್ಕಾರ ಮತ್ತು ೧೦ನೇ ವಾರ್ಷಿಕ ಕಲಾ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

  ದೇಶದಲ್ಲಿ ಸರ್ವಶ್ರೇಷ್ಠ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದರೂ ವರ್ತಮಾನದ ಕೃಷಿ ಕಾಯ್ದೆಗಳನ್ನು ಧಿಕ್ಕರಿಸಿ ಹೋರಾಡಬೇಕಾದ ದುಸ್ಥಿತಿ ಬಂದಿದೆ. ಅನ್ನ ನೀಡುವ ರೈತರ ಪರ ಧ್ವನಿ ಅಡಗಿಸುವ ಹುನ್ನಾರ ನಡೆಯುತ್ತಿದೆ. ರೈತರಿಗೆ ಗೌರವ ನೀಡದಿರುವ ಈ ಸಮಾಜ ಮಾನವೀಯ ಸಮಾಜವೇ ಎಂದು ಪ್ರಶ್ನಿಸಿದ ಪ್ರೊ.ಹುಡಗಿ, ಕೃಷಿಕರು ಮತ್ತು ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ ಎಂದು ವಿಷಾದಿಸಿದರು.

  ದೃಶ್ಯ ಬೆಳಕು ದಿನದರ್ಶಿಕೆ ಬಿಡುಗಡೆಗೊಳಿಸಿದ ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ಕಲ್ಯಾಣ ಕರ್ನಾಟಕ ಕಲಾವಿದರ ಪ್ರಾವೀಣ್ಯದಿಂದ ರಚಿಸಿದ ಕಲೆ ಚರಿತ್ರೆ ನೆನಪಿಸುತ್ತವೆ. ಕಲಾವಿದರ ಸೇವೆಯಿಂದ ದಾಖಲಾರ್ಹ ಕೃತಿಗಳು ಮೂಡಿವೆ. ದೃಶ್ಯ ಬೆಳಕು ಸಂಸ್ಥೆ ನಿರಂತರ ಶಿಬಿರ ಮತ್ತು ಕಾರ್ಯಕ್ರಮಗಳಿಂದ ಸಮಾಜದಲ್ಲಿ ಜಾಗೃತಿ ಮತ್ತು ಸಮುದಾಯ ಪ್ರಜ್ಞೆ ಮೂಡಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

  ದೃಶ್ಯ ಬೆಳಕು ಪ್ರಶಸ್ತಿ ಸ್ವೀಕರಿಸಿದ ಶ್ರೇಷ್ಠ ಚಿತ್ರ ಕಲಾವಿದ ಡಾ.ಬಾಬುರಾವ ನಡೋಣಿ ಮಾತನಾಡಿ, ಮನುಷ್ಯರನ್ನು ಮನುಷ್ಯರಂತೆ ಕಾಣಬೇಕಿದೆ. ಜೀವಂತ ಸಮಾಜ ಬೆಳವಣಿಗೆಗೆ ಅಗತ್ಯವಿರುವ ಮಾನವೀಯ ಮೌಲ್ಯವನ್ನು ಕಲಾವಿದರು ನೀಡಬೇಕಿದೆ. ವಿಮರ್ಶೆ ಗುಣಗಳಿಂದ ಸಮಾಜ ಮತ್ತು ಸಮುದಾಯದಲ್ಲಿ ನಡೆದಿರುವ ಅನ್ಯಾಯ ಮತ್ತು ದೌರ್ಜನ್ಯ ಕಲೆಗಳ ಮೂಲಕ ಬಿಂಬಿಸಿ ಅರಿವಿಗೆ ತರಬೇಕಿದೆ ಎಂದರು.

  ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಲಾವಿದ ಬಸವರಾಜ ಜಾನೆ ಮಾತನಾಡಿದರು. ದೃಶ್ಯ ಬೆಳಕು ಸಂಸ್ಥೆ ಅಧ್ಯಕ್ಷ ಡಾ.ಪಿ. ಪರಶುರಾಮ ಪ್ರಾಸ್ತಾವಿಕ ಮಾತನಾಡಿದರು. ಪ್ರಮುಖರಾದ ವಿ.ವಿ.ಬಿರಾದಾರ, ಬಾಬುರಾವ ಎಚ್., ಅಂಬಾರಾಯ ಚಿನ್ನಮಳ್ಳಿ, ಸಿದ್ದು ಮರಗೋಳ, ಡಾ.ಕೆ.ಎಂ. ಕುಮಾರಸ್ವಾಮಿ, ಡಾ.ಶಿವಾನಂದ ಭಂಟನೂರ, ಮಂಜುಳಾ ಜಾನೆ, ಗಿರೀಶ ಕುಲಕರ್ಣಿ, ಡಾ.ಪ್ರಕಾಶ ಸಂಗಮ್, ಡಾ.ಎಂ.ಬಿ. ಕಟ್ಟಿ. ಬಸವರಾಜ ಉಪ್ಪಿನ್, ಅಣ್ಣಾರಾಯ ಹಂಗರಗಿ, ನಿಂಗನಗೌಡ ಪಾಟಿಲ್, ಸಿದ್ದು ಮರಗೋಳ, ಮಹೇಶ ಶ್ರೀಗಣಿ, ಹಾಜಿ ಮಲಂಗ, ಜಗದೀಶ ಕಾಂಬಳೆ ಇದ್ದರು.

  ಗುಲ್ಬರ್ಗ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ ಸಹಾಯಕ ಪ್ರಾಧ್ಯಾಪಕ ಡಾ.ಸಂತೋಷ ಕಂಬಾರ ಸ್ವಾಗತಿಸಿ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಗಂಗಮ್ಮ ಪ್ರಾರ್ಥಿಸಿದರು. ಚಿತ್ರಕಲಾ ಶಿಕ್ಷಕ ಸೂರ್ಯಕಾಂತ ನಂದೂರ ನಿರೂಪಣೆ ಮಾಡಿ ವಂದಿಸಿದರು.

  ಹಲವರಿಗೆ ಸನ್ಮಾನ ಗೌರವ: ಅಮರ ಶಿಲ್ಪಿ ಜಕಣಾಚಾರಿ ಪ್ರಶಸ್ತಿ ಪುರಸ್ಕೃತ ಮಹದೇವಪ್ಪ ಎಸ್.ಶಿಲ್ಪಿ, ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಪುರಸ್ಕೃತ ಬಸವರಾಜ ಜಾನೆ, ೧೦ನೇ ವಾರ್ಷಿಕ ಕಲಾ ಶಿಬಿರದಲ್ಲಿ ಅತ್ಯುತ್ತಮ ಚಿತ್ರ ಕಲಾಕೃತಿಗಳನ್ನು ರಚಿಸಿದ ಕಲಾವಿದರಾದ ಜಗದೀಶ ಕಾಂಬಳೆ, ಸಬ್ರೀನ್ ತಾಜ್, ಬಿ.ಎನ್. ಪಾಟೀಲ್, ಸಿದ್ದಾರೆಡ್ಡಿ ಯಲ್ಲಪ್ಪ, ದಾನಯ್ಯ ಚೌಕಿಮಠ ಹಾಗೂ ಶಿವಶರಣ ಡೊಣ್ಣೂರಕರ್ ಅವರನ್ನು ಗೌರವಿಸಲಾಯಿತು. ಎರಡು ದಿನದ ಶಿಬಿರದಲ್ಲಿ ಭಾಗವಹಿಸಿದ ವಿವಿಧ ಜಿಲ್ಲೆ ಕಲಾವಿದರಿಗೆ ನೆನಪಿನ ಕಾಣಿಕೆ ಮತ್ತು ಪ್ರಮಾಣಪತ್ರ ನೀಡಲಾಯಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts