ಬರ ಸವಾಲು ಎದುರಿಸಲು ಸಿದ್ಧರಾಗಿ

ವಿಜಯವಾಣಿ ಸುದ್ದಿಜಾಲ ಬೀದರ್
ಬರದ ಸವಾಲುಗಳನ್ನು ಎದುರಿಸಲು ಅಧಿಕಾರಿಗಳು ಮಾನಸಿಕ ಹಾಗೂ ಬೌದ್ಧಿಕವಾಗಿ ಸಿದ್ದರಾಗಬೇಕು. ಜತೆಗೆ ನಾಳೆಯಿಂದಲೇ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದು ಜಿಲಾಧಿಕಾರಿ ಡಾ.ಎಚ್.ಆರ್.ಮಹಾದೇವ ಹೇಳಿದರು. ನಗರದ ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ಬರ ಪರಿಸ್ಥಿತಿ ಪರಾಮರ್ಶಿ ಸಭೆಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಜಿಲ್ಲೆಯ ನಾಲ್ಕು ತಾಲೂಕುಗಳನ್ನು ಭಾಗಶಃ ಬರ ಎಂದು ಘೋಷಿಸಿದ ನಂತರ ಜಿಲ್ಲಾಡಳಿತದಿಂದ ಬಹಳಷ್ಟು ಕೆಲಸ ಆಗಬೇಕಿತ್ತು. ಇಂದಲ್ಲ ನಾಳೆ ಮಳೆ ಆಗಬಹುದು ಎಂಬ ನಿರೀಕ್ಷೆಯಿಂದ ಕೆಲಸಗಳು ನಿಧಾನವಾಗಿ ಸಾಗಿವೆ. ಇನ್ನು ಕೆಲ ದಿನಗಳಲ್ಲಿ ಹಳ್ಳಿಗಳಲ್ಲಿ ಬರದ ಸಮಸ್ಯೆ ಹೆಚ್ಚಲಿದೆ. ಹೀಗಾಗಿ ಪರಿಹಾರ ಕ್ರಮ ಜರುಗಿಸಲು ವಿಳಂಬ ಮಾಡಬಾರದು ಎಂದು ತಾಕೀತು ಮಾಡಿದರು.
ಗ್ರಾಮ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಊರಿನ ತಳಹದಿ ಇದ್ದಂತೆ. ನೀವು ಗ್ರಾಮದ ಜತೆಗೆ ಇರುವವರು. ಅವರ ಬದುಕನ್ನು ಹತ್ತಿರದಿಂದ ನೋಡಿರುವವರು. ನಿಮ್ಮಿಂದಲೇ ಪರಿಹಾರ ಸೂಕ್ತ ಅಂತ ಆಲೋಚಿಸಿ ನಿಮ್ಮನ್ನು ಸಭೆಗೆ ಕರೆಸಿ ಅಭಿಪ್ರಾಯ ಪಡೆಯಲಾಗಿದೆ ಎಂದರು.
ಬರದ ಸವಾಲು ಎದುರಿಸುವುದು ಕೇವಲ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಜವಾಬ್ದಾರಿ ಎಂದು ಭಾವಿಸಬೇಡಿ. ನಾನು, ಸಿಇಒ, ಸಹಾಯಕ ಆಯುಕ್ತರು, ತಹಸೀಲ್ದಾರರು ಮತ್ತು ಇತರ ಅಧಿಕಾರಿಗಳು ನಾಲ್ಕಾರು ಗ್ರಾಮಗಳಿಗೆ ಭೇಟಿ ನೀಡಿ ಬಂದರೆ ಅಲ್ಲಿಗೆ ಸಮಸ್ಯೆ ಮುಗಿಯುವುದಿಲ್ಲ. ಆಯಾ ಹಳ್ಳಿಗಳಲ್ಲಿನ ಸಮಸ್ಯೆಗಳಿಗೆ ಅಲ್ಲಿನವರೇ ಪರಿಹಾರ ಕಂಡುಕೊಳ್ಳುವಂತಾಗಬೇಕು. ಅಲ್ಲಿನ ಪರಿಸ್ಥಿತಿ ನೋಡಿ ನೀವೇ ಯೋಜನೆ ರೂಪಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ಕೂಡಲೇ ಗ್ರಾಮ ಮಟ್ಟದ ಸಮಿತಿ ಮಾಡುತ್ತೇವೆ. ಪಿಡಿಒ, ನಾಡ ಕಚೇರಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಕೃಷಿ ಸಹಾಯಕರು, ಶಾಲಾ ಮುಖ್ಯಗುರುಗಳು, ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತಿಯರು ಪ್ರತಿದಿನ ಒಂದೆಡೆ ಸೇರಿ ಗ್ರಾಮದಲ್ಲಿ ಸಮಸ್ಯೆ ಏನಿದೆ ಎಂದು ಚರ್ಚಿಸಬೇಕು. ಗ್ರಾಮಸ್ಥರಿಗೆ ಉದ್ಯೋಗ ಕೊಡಲು, ಜಾನುವಾರುಗಳ ಆರೋಗ್ಯ ನೋಡಿಕೊಳ್ಳಲು ಕ್ರಮ ವಹಿಸಬೇಕು. ಆಯಾ ಗ್ರಾಮದಲ್ಲಿ ಸಮಸ್ಯೆಗಳೇನಿವೆ ಎಂಬುದನ್ನು ತಿಳಿದು ಪಟ್ಟಿ ಮಾಡಿ ಪರಿಹಾರಕ್ಕಾಗಿ ಯೋಜನೆ ರೂಪಿಸಿ ನಮಗೆ ಕಳಿಸಬೇಕು. ಈ ಮೂಲಕ ಬರವನ್ನು ಯಶಸ್ವಿಯಾಗಿ ಎದುರಿಸಲು ಜಿಲ್ಲಾಡಳಿತಕ್ಕೆ ಸಹಕರಿಸಬೇಕು ಎಂದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಯಾವುದೇ ಗ್ರಾಮದ ಜನರು ನಮಗೆ ಉದ್ಯೋಗ ಸಿಗುತ್ತಿಲ್ಲ ಅಂತ ದೂರುವಂತಾಗಬಾರದು. ಈ ನಿಟ್ಟಿನಲ್ಲಿ ತಾಪಂ ಇಒ ಹಾಗೂ ಪಿಡಿಒಗಳ ಜವಾಬ್ದಾರಿ ಹೆಚ್ಚಿದೆ. ಎಲ್ಲರಿಗೂ ಜಾಬ್ ಕಾರ್ಡ್​ ಕೊಡುವ ವ್ಯವಸ್ಥೆಯಾಗಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಸಹಾಯಕ ಆಯುಕ್ತ ಶಿವಕುಮಾರ ಶೀಲವಂತ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಲಭೀಮ ಕಾಂಬ್ಳೆ, ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿದ್ಯಾನಂದ ಸಿ., ಪಶುಪಾಲನೆ ಇಲಾಖೆ ಅಧಿಕಾರಿ ರವಿ ಭೂರೆ, ತಾಪಂ ಇಒ ಧನರಾಜ ಬೋರಾಳೆ, ತಹಸೀಲ್ದಾರ್ ಕೀರ್ತಿ ಚಾಲಕ್ ಇತರರಿದ್ದರು.

ಗ್ರಾಮಕ್ಕೆ ನೀವೇ ಡಿಸಿ: ಗ್ರಾಮ ಮಟ್ಟದ ಅಧಿಕಾರಿಗಳ ಜವಾಬ್ದಾರಿ ತುಂಬಾ ಮಹತ್ವದ್ದಾಗಿದೆ. ಇದನ್ನು ತಾವು ಅರಿಯಬೇಕು. ಪಿಡಿಒ, ಗ್ರಾಮ ಲೆಕ್ಕಿಗರು ಹೀಗೆ ಗ್ರಾಮ ಮಟ್ಟದ ಯಾವುದೇ ಅಧಿಕಾರಿ ಆ ಗ್ರಾಮಕ್ಕೆ ಡಿಸಿ ಇದ್ದಂತೆ ಎಂದು ಹೇಳುತ್ತ ಜಿಲ್ಲಾಧಿಕಾರಿಗಳು, ಗ್ರಾಮ ಮಟ್ಟದ ಅಧಿಕಾರಿಗಳ ಕಾರ್ಯದ ಮಹತ್ವದ ಬಗ್ಗೆ ತಿಳಿಸಿದರು.